ಉಡುಪಿ : ಇವತ್ತು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿದೆ. ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಾರತವನ್ನು ಎಲ್ಲಿ ವಿಭಜನೆ ಮಾಡಿದ್ದರೋ ಅಲ್ಲಿ ಭಾರತ್ ಜೋಡೋ ಮಾಡಿ ಎಂದು ಟೀಕೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ, ‘ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ? ಹಿಮಾಲಯದ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ನೆಹರು ಹೇಳಿದ್ದರು. ಹಾಗಾಗಿ ಹಿಮಾಲಯವನ್ನು ಬಿಟ್ಟುಕೊಡಲಾಯಿತು. ತೀನ್ ಭಿಗಾದಲ್ಲಿ ಭಾರತ ಜೋಡೋ ಮಾಡಿ. ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತ ಜೋಡೋ ಮಾಡಿ. ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡೋ ಮಾಡುವ ಅಗತ್ಯವಿಲ್ಲ’ ಎಂದು ವ್ಯಂಗ್ಯವಾಡಿದರು.
ದಶಕಗಳ ಹಿಂದೆ ಭಾರತವನ್ನು ಒಡೆದಿದ್ದು ಕಾಂಗ್ರೆಸ್. ಅಂಥವರು ಈಗ ಭಾರತ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗ ನೆಹರೂ ಅವರು, ಹಿಮಾಲಯದಲ್ಲಿ ಒಂದು ಹುಲುಕಡ್ಡಿಯೂ ಬೆಳೆಯುವುದಿಲ್ಲ ಎಂದಿದ್ದರು. ಹಾಗಾಗಿ, ಹಿಮಾಲಯದ ಕೆಲವು ಭಾಗಗಳನ್ನು ಬೇರೆ ದೇಶದವರಿಗೆ ಬಿಟ್ಟುಕೊಡಬೇಕಾಯಿತು. ಆನಂತರ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಸಿಗರು ತೀನ್ ಬಿಘಾವನ್ನು ಬಿಟ್ಟುಕೊಟ್ಟರು. ಅಂಥ ಕಾಂಗ್ರೆಸ್ಸಿಗರು ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯನ್ನು ಅವರು ಚೀನಾ, ಪಾಕಿಸ್ತಾನದ ಗಡಿ ಭಾಗದಲ್ಲಿ ಹೋಗಿ ಮಾಡಲಿ ಎಂದು ಕಿಡಿ ಕಾರಿದರು.