ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯಿಂದ ನೋವಾಗಿದ್ದ ಜನರು ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ಅದನ್ನು ವಿಚಾರಣೆ ನಡೆಸಿ ನ್ಯಾಯಾಲಯ ತೀರ್ಪು ಕೊಟ್ಟಿದೆ. ಇದರಲ್ಲಿ ನಮಗೊಂದು ಕಾನೂನು, ರಾಹುಲ್ಗೊಂದು ಕಾನೂನು ಎಂದೇನಿಲ್ಲ. ಎಲ್ಲರಿಗೂ ಒಂದೇ ಕಾನೂನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಅನರ್ಹ ವಿಚಾರ ವ್ಯಾಪಕ ಚರ್ಚೆಯಾಗುತ್ತಿದೆ. ಈ ದೇಶದಲ್ಲಿ ಕಾನೂನು ಇದೆ. ಆ ಕಾನೂನು ಪ್ರಕಾರ ಎಲ್ಲಾ ನಡೆಯಲಿದೆ. ಏನು ಮಾತನಾಡಿದರೂ ನಡೆಯುತ್ತದೆ ಎನ್ನುವ ಭಾವನೆ ತುಂಬಾ ಜನರಿಗೆ ಇದೆ. ಅದರಿಂದಾಗಿಯೇ ಇದು ಆಗಿರೋದು. ಅವರಿಗೆ ಸರಿಪಡಿಸಿಕೊಳ್ಳಲು ಅವಕಾಶವಿತ್ತು. ಆದರೆ ಅವರು ಸರಿಪಡಿಸಿಕೊಳ್ಳಲಿಲ್ಲ ಎಂದರು.
ವಿರೋಧ ಪಕ್ಷದವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಅಥವಾ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು. ಅದು ಬಿಟ್ಟು ಹಾದಿಬೀದಿಯಲ್ಲಿ ವೈಯಕ್ತಿಕ ನಿಂದನೆ ಮಾಡಿ ಮಾತನಾಡಿದರೆ ಖಂಡಿತವಾಗಿಯೂ ಅದಕ್ಕೆ ಕಾನೂನು ಇದೆ. ಆ ಕಾನೂನು ಪ್ರಕಾರವೇ ರಾಹುಲ್ ಗಾಂಧಿ ಅವರನ್ನು ವಯನಾಡ್ ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದಾರೆ ಎಂದು ಹೇಳಿದರು.
ಇವತ್ತು ರಾಜ್ಯಕ್ಕೆ ಮೋದಿ ಬಂದಿದ್ದಾರೆ. ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ. 10 ಲಕ್ಷ ಜನರು ಸೇರುತ್ತಿದ್ದಾರೆ. ಬಿಜೆಪಿಯ ವಿಜಯದ ಕಹಳೆಯನ್ನು ದಾವಣಗೆರೆಯಲ್ಲಿ ಮೋದಿ ಮೊಳಗಿಸಲಿದ್ದಾರೆ. ದಾವಣಗೆರೆಯಿಂದ ವಿಜಯದ ಯಾತ್ರೆ ಪ್ರಾರಂಭವಾಗುತ್ತದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಮಾಡುವುದು ನಿಶ್ಚಿತ. ಪ್ರಧಾನಿ ಮೋದಿಯ ದೊಡ್ಡ ಬಲ ನಮಗಿದೆ. ಡಬಲ್ ಇಂಜಿನ್ ಸರ್ಕಾರದ ಒಳ್ಳೆಯ ಕೆಲಸ ಇಟ್ಟುಕೊಂಡು ಜನರ ಆಶೀರ್ವಾದ ಪಡೆಯುತ್ತೇವೆ. ಮೇ ತಿಂಗಳಲ್ಲಿ ಮತ್ತೊಮ್ಮೆ ವಿಜಯೋತ್ಸವಕ್ಕೆ ಮೋದಿಯವರನ್ನು ಕರೆಯುತ್ತೇವೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಆಶ್ಚರ್ಯನೂ ಇಲ್ಲ, ಹೊಸತನವಿಲ್ಲ. ಅದಕ್ಕಿಂತ ಮೊದಲೇ ಮಾಧ್ಯಮಗಳೇ ಎಲ್ಲಾ ಬಿಡುಗಡೆ ಮಾಡಿದ್ದವು. ಆದರೆ ಬಿಜೆಪಿ ಪಟ್ಟಿ ಯಾವಾಗ ಬಿಡುಗಡೆ ಎಂದು ಕಾದು ನೋಡಿ ಎಂದು ತಿಳಿಸಿದರು.