ಪ್ರಧಾನಿ ದೂರುವ ಬದಲು ರೈತರ ಬಳಿ ತೆರಳಿ ದೂರು ಆಲಿಸಬಹುದಿತ್ತು

ಜಿ ಟಿ ನರೇಂದ್ರ ಕುಮಾರ್,

ಸಂಚಾಲಕರು, ಸಮಾಜವಾದಿ ಅಧ್ಯಯನ ಕೇಂದ್ರ, ಬೆಂಗಳೂರು

ಪಂಜಾಬ್ ರಾಜ್ಯ ಸರಕಾರದ ಭದ್ರತಾ ವೈಫಲ್ಯ, ಸಂಚು ಎಂಬಿತ್ಯಾದಿ ಪದ ವಿಶೇಷಣಗಳಿಂದ ಒಕ್ಕೂಟ ಸರಕಾರದ ಮಂತ್ರಿಗಳು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳಂತೂ ಮತ್ತೊಂದು ಹೆಜ್ಜೆ ಮುಂದೆಹೋಗಿ ಪಂಜಾಬ್ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರಂತೆ. ಇವರ ತಂದೆ ಎಸ್.ಆರ್. ಬೊಮ್ಮಾಯಿಯವರು, ರಾಜ್ಯ ಸರಕಾರಗಳನ್ನು ತಮ್ಮಿಷ್ಟದಂತೆ ವಜಾಗೊಳಿಸುವ ಒಕ್ಕೂಟ ಸರಕಾರದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಡಿ ಜಯಶೀಲರಾದವರು ಎಂಬುದನ್ನು ಕಿರಿಯ ಬೊಮ್ಮಾಯಿ ಮರೆತಿದ್ದಾರೆ. ಇಡೀ ದೇಶವನ್ನೇ ತಮ್ಮಿಷ್ಟದಂತೆ ಕುಣಿಸುತ್ತಿರುವ ನಮ್ಮನ್ನಾಳುತ್ತಿರುವ ಪ್ರಭುಗಳು ಏಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ?

 

ನಿನ್ನೆ ಪಂಜಾಬ್ ರಾಜ್ಯ ಪ್ರವಾಸಕ್ಕೆ ಪ್ರಧಾನಿಗಳು ತೆರಳಿದ್ದರು. ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಭೂ  ಮಾರ್ಗದಲ್ಲಿಯೇ ಸಂಚರಿಸುವ ತೀರ್ಮಾನವನ್ನು ಭದ್ರತಾ ಸಿಬ್ಬಂದಿ ತೆಗೆದುಕೊಂಡರು. ಅದರಂತೆ ಪಂಜಾಬಿನ ಪೋಲಿಸ್ ಮಹಾ ನಿರ್ದೇಶಕರಿಗೆ ಮಾಹಿತಿ ನೀಡಿ ಭದ್ರತೆ ಒದಗಿಸುವಂತೆ ಸೂಚಿಸಲಾಯ್ತು. ಈ ಎಲ್ಲಾ ಪ್ರಕ್ರಿಯೆಗಳ ನಂತರ ಪ್ರಧಾನಿಯವರು ಭೂಮಾರ್ಗದಲ್ಲಿ ಸಂಚಾರ ಆರಂಭಿಸಿದರು. ಪ್ರಧಾನಿಯವರು ಪ್ರಯಾಣಿಸುತ್ತಿದ್ದ ಭೂ ಮಾರ್ಗದಲ್ಲಿ ರೈತರು ಪ್ರಧಾನಿಗಳ ವಿರುದ್ದ ರಸ್ತೆ ತಡೆ ಮಾಡಿ ಪ್ರತಿಭಟನೆ ಮುಂದುವರೆಸಿದರು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪ್ರಧಾನಿಯವರು ತಮ್ಮ ಅಂಗರಕ್ಷಕರು ಮತ್ತು ಬೆಂಗಾವಲು ಪಡೆಯವರೊಂದಿಗೆ ಸುರಕ್ಷಿತವಾಗಿದ್ದರು. ಪ್ರತಿಭಟನೆ / ರಸ್ತೆ ತಡೆ ಮುಂದುವರಿದ ಕಾರಣ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಹೆಲಿಪ್ಯಾಡಿಗೆ ಹಿಂತಿರುಗಿದರು. ನಂತರ ‘‘ನಾನು ಜೀವಂತವಾಗಿ ವಾಪಸ್ ಬಂದಿದ್ದೇನೆ’ ಎಂಬರ್ಥದ ಅವರ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡವು.

ಈ ಹಂತದಲ್ಲಿ  ಪಂಜಾಬಿನ ಪೋಲೀಸರು, ಪ್ರತಿಭಟನಾ ನಿರತ ರೈತರ ಮನವೊಲಿಸುವಲ್ಲಿ ವಿಫಲರಾದರೂ , ದಿಲ್ಲಿಯ ಪೋಲಿಸರಂತೆ ಲಾಠಿ ಛಾರ್ಜ್, ಅಶ್ರುವಾಯು ಪ್ರೋಂಗ ಮಾಡಲಿಲ್ಲವೆಂಬುದು ಶ್ಲಾಘನೀಯ ಸಂಗತಿಯಾಗಿದೆ.

ಈ ಘಟನೆಯ ಹಿನ್ನೆಲೆಯನ್ನು ಕೆದಕಿದರೆ, ರೈತರ ಈ ಪರಿಯ ಆಕ್ರೋಶಕ್ಕೆ ಕಾರಣ ಸ್ವತಃ ಪ್ರಧಾನಿಯವರೇ! ಇತ್ತೀಚೆಗೆ ರಾಜ್ಯಪಾಲರೊಬ್ಬರ ಜೊತೆ ಮಾತನಾಡುತ್ತಾ ದಿಲ್ಲಿಯಲ್ಲಿ ರೈತ ವಿರೋಧಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಏಳು ನೂರಕ್ಕೂ ಹೆಚ್ಚು ರೈತರು ಹುತಾತ್ಮರಾದ ವಿಷಯಕ್ಕೆ ಕುರಿತಂತೆ ‘‘ಅವರು ( ರೈತರು) ನನಗಾಗಿ ಸತ್ತರೇ ‘‘ ಎಂದು ಪ್ರಧಾನಿಗಳು ಕೇಳಿದ್ದರು. ಆ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿ ಸಹಜವಾಗಿ ರೈತರನ್ನು ಕೆರಳಿಸಿದರೆ, ಸಾರ್ವಜನಿಕರಲ್ಲಿ ವಿಷಾದವೂ ಮತ್ತು ಆಡಳಿತ ಪಕ್ಷದಲ್ಲಿನ ಬೆರಳೆಣಿಕೆ ಮಂದಿಗಾದರೂ ಮುಜುಗರ ಉಂಟು ಮಾಡಿತು.

ಈ ಕಾರಣದಿಂದಲೇ ಪಂಜಾಬಿನ ರೈತರು ರಸ್ತೆ ತಡೆ ಎಂಬ ಅಹಿಂಸಾತ್ಮಕ ಪ್ರತಿಭಟನೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಆಯ್ದುಕೊಂಡಿದ್ದಾರೆಂಬುದು ನಿರ್ವಿವಾದದ ಸಂಗತಿಯಾಗಿದೆ.  ಪ್ರಧಾನ ಮಂತ್ರಿಗಳು ತಾವು ‘ಜೀವಂತವಾಗಿ ವಾಪಸ್ ಬಂದಿದ್ದೇನೆ’ ಎಂದು ಹೇಳಿಕೆ ನೀಡುವ ಬದಲು, ತಮ್ಮ ಬೆಂಗಾವಲು ಪಡೆೊಂಂದಿಗೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ, ಅವರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ, ಅವರ  ಮನವಿಯನ್ನು ಆಲಿಸಿ, ಪ್ರಯಾಣವನ್ನು ಸುರಕ್ಷಿತವಾಗಿ ಮುಂದುವರೆಸಬಹುದಿತ್ತು. ಹೀಗೆ ಮಾಡಿದ್ದರೆ ಪ್ರಧಾನಿಯವರ ಘನತೆಯೂ ಹೆಚ್ಚುತ್ತಿತ್ತು.  ನಮ್ಮ ರಾಜ್ಯ, ದೇಶದಲ್ಲಿ ಅನೇಕ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಪ್ರವಾಸ ಕಾಲದಲ್ಲಿ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ಹೊಸತೇನೂ ಅಲ್ಲ. ಅಹಿಂಸಾತ್ಮಕ ಹೋರಾಟ ನಡೆಸಿ ಸ್ವಾತಂತ್ರ್ಯಗಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಿಕೊಂಡಿರುವ ನಾಗರೀಕರಿಗೆ ಇದು ಸಹಜ. ಇದರಲ್ಲಿ ಅವಮಾನದ ಅಥವಾ ಭದ್ರತಾ ಲೋಪದ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಸಮಾಜವಾದಿ ಡಾ.ರಾಮ ಮನೋಹರ ಲೋಹಿಯಾ ರವರು ‘‘ಮಾರ್ಕ್ಸ್, ಗಾಂಧಿ ಮತ್ತು ಸಮಾಜವಾದ ‘‘ ಎಂಬ ಕೃತಿಯಲ್ಲಿ ಉದ್ಧರಿಸಿರುವಂತೆ ‘‘ಸಂಸದೀಯ ಹಾಗೂ ಶಾಸನಬದ್ಧ ಮಾರ್ಗಗಳು ಅನೇಕ ವೇಳೆ ಅನ್ಯಾಯದ ವಿರುದ್ಧ ಹೋರಾಡಲು ಸಾಲುವುದೇ ಇಲ್ಲ‘‘ ಎಂಬ ಮಾತು ಅಗತ್ಯಬಿದ್ದಾಗ ಪ್ರತಿಭಟನೆ ನಡೆಸಬೇಕು ಎಂಬ ಭಾವವನ್ನು ಧ್ವನಿಸುತ್ತದೆ. ರೈತರೂ ಅದನ್ನೇ ಮಾಡಿದ್ದಾರೆ.

× Chat with us