ಉಪ ಚುನಾವಣೆಗೆ ಪಂಚಮಸಾಲಿ ಅಸ್ತ್ರ; ಹಿಂದುಳಿದ ವರ್ಗಗಳ ಆಯೋಗದ ವರದಿಗೆ ಜಯಮೃತ್ಯುಂಜಯ ಶ್ರೀ ಒತ್ತಾಯ

ಬೆಂಗಳೂರು: ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ನೀಡುವ ಸಂಬಂಧ ಹಿಂದುಳಿದ ವರ್ಗಗಳ ಆಯೋಗದಿಂದ ಅ.30ರೊಳಗೆ ವರದಿ ತರಿಸಿಕೊಳ್ಳುವಂತೆ ಹೋರಾಟದ ನೇತೃತ್ವ ವಹಿಸಿರುವ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

ಸಿಂದಗಿ ಮತ್ತು ಹಾನಗಲ್‌ನಲ್ಲಿ ವಿಧಾನಸಭಾ ಉಪ ಚುನಾವಣೆ ನಡೆಸುತ್ತಿದೆ. ಹಾನಗಲ್‌ನಲ್ಲಿ ಸಿಎಂ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುತ್ತಾಾರೆ ಎಂಬ ಆಶಯ ಹೊಂದಿದ್ದೇವು. ಕೊನೇ ಪಕ್ಷ ಪಂಚಮಸಾಲಿ ಸಮುದಾಯಕ್ಕಾಾದರೂ ಟಿಕೆಟ್ ನೀಡುತ್ತಾರೆಂಬ ಭರವಸೆ ಹುಸಿಯಾಗಿದೆ. ಹಾನಗಲ್‌ನಲ್ಲಿ 60 ಸಾವಿರ ಹಾಗೂ ಸಿಂದಗಿಯಲ್ಲಿ 35 ಸಾವಿರ ಸಮುದಾಯದ ಮತಗಳಿವೆ. ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಮೂಡಬೇಕಾದರೆ, ಆಯೋಗದಿಂದ 30ರಂದು ವರದಿ ತರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ಎ ಮೀಸಲಾತಿ ನೀಡುವ ಸಂಬಂಧ ಸರ್ಕಾರಕ್ಕೆ ನೀಡಿರುವ 6 ತಿಂಗಳ ಗಡುವು ಮುಗಿದಿದೆ. ಅ.1ರಂದು ನಡೆದ ಸಭೆಯಲ್ಲಿ ಮೀಸಲಾತಿ ನೀಡುವ ಕುರಿತು ಆಡಳಿತಾತ್ಮಕ ಭರವಸೆ ನೀಡಿದ್ದು, ಹಿಂದುಳಿದ ವರದಿ ಪ್ರಕಟವಾದ ಬಳಿಕ ಮಾತನಾಡುವ ಭರವಸೆಯನ್ನು ಸರ್ಕಾರ ನೀಡಿದೆ. ಹೀಗಾಗಿ, ಉಪ ಚುನಾವಣೆ ಕ್ಷೇತ್ರಗಳ ಜನರಲ್ಲಿನ ಅಸಮಾಧಾನ ಹೋಗಲಾಡಿಸಲು ಕೊನೇ ಪಕ್ಷ ವರದಿ ತರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮೀಸಲಾತಿ ಕುರಿತು ನ.1ರಂದು ಸರ್ಕಾರದೊಂದಿಗೆ ಸಭೆ ನಿಗದಿಯಾಗಿದೆ. ಮೀಸಲಾತಿ ನೀಡುವುದು ಸರ್ಕಾರದ ಪರಮಾಧಿಕಾರ ಆಗಿರುವುದರಿಂದ ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಅಷ್ಟರೊಳಗೆ ವರದಿ ತರಿಸಿಕೊಂಡರೆ, ಸಭೆಯಲ್ಲಿ ಚರ್ಚಿಸಲು ಅನುಕೂಲವಾಗಲಿದೆ ಎಂದರು.

ಉಪ ಚುನಾವಣೆ ಅಸ್ತ್ರನಾ?

ವರದಿ ತರಿಸಿಕೊಳ್ಳಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಉಪ ಚುನಾವಣೆಗಾಗಿ ಪ್ರಯೋಗಿಸುತ್ತಿರುವ ಅಸ್ತ್ರನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಚುನಾವಣೆಗೂ ಹೋರಾಟಕ್ಕೂ ಸಂಬಂಧವಿಲ್ಲ. ಆದರೆ, ಆದಷ್ಟು ಬೇಗ ವರದಿ ತರಿಸಿಕೊಂಡರೆ ಅನುಕೂಲವಾಗಲಿದೆ ಎಂಬುದು ಉದ್ದೇಶವಾಗಿದೆ ಅಷ್ಟೇ ಎಂದರು.

ಪ್ರತಿಜ್ಞಾ ಪಂಚಾಯತ್ ಅಭಿಯಾನ

ಮೈಸೂರು, ಅಕ್ಕಮಹಾದೇವಿ ಹುಟ್ಟೂರಾದ ಶಿವಮೊಗ್ಗದ ಉಡುತಡಿ ಹಾಗೂ ನೂತನವಾಗಿ ಉದಯವಾದ ವಿಜಯನಗರ ಜಿಲ್ಲೆಗಳಲ್ಲಿ 2ನೇ ಹಂತದ ಮೀಸಲಾತಿ ಹೋರಾಟಕ್ಕೆ ನವರಾತ್ರಿ ಸಂದರ್ಭದಲ್ಲಿ ಚಾಲನೆ ನೀಡಲಾಗಿದೆ. ಇದು ಗ್ರಾಾಮ ಪಂಚಾಯಿತಿಯಿಂದ ವಿಧಾನಸಭಾ ಕ್ಷೇತ್ರಗಳವರೆಗೆ ರಾಜ್ಯಾಾದ್ಯಂತ 176 ತಾಲೂಕುಗಳಲ್ಲಿ ನಡೆಯಲಿದೆ.

ಅ.18ರಿಂದ 23ರ ವರೆಗೆ ಬೆಂಗಳೂರಿನ ದಾಸರಹಳ್ಳಿ, ಯಲಹಂಕ ಸೇರಿದಂತೆ ಹಲವು ಬಡಾವಣೆಗಳಲ್ಲಿ ಅಭಿಯಾನ ನಡೆಯುತ್ತಿದೆ. ಅ.23ರಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವದಲ್ಲಿ ‘ಪ್ರತಿಜ್ಞಾ ಪಂಚಾಯತ್’ ಹೋರಾಟಕ್ಕೆ ಮತ್ತಷ್ಟು ಚುರುಕು ಮೂಡಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

× Chat with us