ಬೆಂಗಳೂರು : ನಿಗದಿತ ಕಾರ್ಯಕ್ರಮದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೊಸದಿಲ್ಲಿಗೆ ತೆರಳಿದರು. ದಿಲ್ಲಿಯಲ್ಲಿ ಮೂರು ದಿನ ವಾಸ್ತವ್ಯ ಹೂಡಲಿರುವ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಹಿರಿಯ ನಾಯಕರುಗಳೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಪ್ರವಾಸದ ಮುಖ್ಯ ಕಾರ್ಯಕ್ರಮ ಎನ್ನಲಾಗಿದ್ದರೂ ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರುಗಳ ಭೇಟಿ, ರಾಜ್ಯದ ಕೆಲವು ಯೋಜನೆಗಳಿಗೆ ಒಪ್ಪಿಗೆ ಪಡೆಯುವುದು, ಸಂಪುಟ ವಿಸ್ತರಣೆ ಕುರಿತು ಚರ್ಚಿಸುವುದು ಪ್ರವಾಸದ ಪಟ್ಟಿಯಲ್ಲಿದೆ.
ದಿಲ್ಲಿ ಪ್ರವಾಸದಲ್ಲಿ ಹೈಕಮಾಂಡ್ ನಾಯಕರ ಭೇಟಿಯೂ ಸೇರಿರುವುದರಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಮತ್ತೊಮ್ಮೆ ಕುತೂಹಲ ಗರಿಗೆದರಿದೆ. ಬೊಮ್ಮಾಯಿ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ಷಾ, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗುವ ಸಂಭವವಿದೆ.
ಮುಖ್ಯಮಂತ್ರಿಗಳು ತಮ್ಮ ಪ್ರವಾಸದ ಸಂದರ್ಭದಲ್ಲಿ ಪಕ್ಷದ ಯಾವ ನಾಯಕರನ್ನು ಭೇಟಿಯಾಗಲಿದ್ದಾರೆ ಎಂಬುದು ಈವರೆಗೂ ದೃಢಪಟ್ಟಿಲ್ಲ. ಮೂಲಗಳ ಪ್ರಕಾರ ಸೋಮವಾರ ಸಂಜೆ ಜೆ.ಪಿ.ನಡ್ಡಾ ಮತ್ತು ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟದಲ್ಲಿ ಸದ್ಯ ನಾಲ್ಕು ಸ್ಥಾನಗಳು ಖಾಲಿಯಿದ್ದು, ವರಿಷ್ಠರು ಸಮ್ಮತಿಸಿದರೆ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಪ್ರಸ್ತಾವವನ್ನು ಮುಂದಡಿಲಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆಗೆ ಅವಕಾಶ ನೀಡಬೇಕು ಹಾಗೂ ಕೆಲವು ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜನೆ, ಕೆಲವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಬೇಕೆಂಬ ಬೇಡಿಕೆಯನ್ನು ಇಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿ.ಡಿ ಪ್ರಕರಣದಲ್ಲಿ ಸಿಲುಕಿಕೊಂಡು ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಕುರಿತು ಚರ್ಚಿಸಲಿದ್ದಾರೆ.
ಇನ್ನು ನಿಗಮ, ಮಂಡಳಿ ಅಧ್ಯಕ್ಷರನ್ನು ಇತ್ತೀಚೆಗೆ ಕೈಬಿಟ್ಟಿರುವುದರಿಂದ ಖಾಲಿ ಇರುವ ನಿಗಮ, ಮಂಡಳಿಗಳಿಗೆ ನೇಮಕ ಮಾಡುವ ಕುರಿತಂತೆ ಮಾತುಕತೆ ನಡೆಯಲಿದೆ.
ಸುಮಾರು ೬೦ಕ್ಕೂ ಹೆಚ್ಚು ನಿಗಮ ಮಂಡಳಿ ಹಾಗೂ ವಿವಿಧ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಪಕ್ಷ ನಿಷ್ಠರಿಗೆ ನೀಡಬೇಕೆಂದು ಬೊಮ್ಮಾಯಿ ಅವರು ಮನವಿ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಇನ್ಮುಂದೆ ವಾಟ್ಸಪ್ ಗ್ರೂಪಿನಿಂದ ಸೈಲೆಂಟಾಗಿ ಲೆಪ್ಟ್ ಆಗಬಹುದು
Next Article ಗಗನಸಖಿಯೊಂದಿಗೆ ಅಸಭ್ಯ ವರ್ತನೆ : ಪ್ರಯಾಣಿಕನ ಬಂಧನ