ಕಾಂಗ್ರೆಸ್‌ ಅವಧಿಯಲ್ಲಿ ದೇಗುಲ ಕೆಡವಿದ್ರೆ, ಬಿಜೆಪಿಯವ್ರು ದೊಡ್ಡ ಯಾತ್ರೆಯನ್ನೇ ಮಾಡ್ತಿದ್ರು: ಆರ್‌.ಧ್ರುವನಾರಾಯಣ

ಚಾಮರಾಜನಗರ: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇನಾದರೂ ದೇಗುಲ ತೆರವುಗೊಳಿಸಿದ್ದರೆ, ಧರ್ಮವನ್ನು ಗುತ್ತಿಗೆ ಪಡೆದಿರುವ ಬಿಜೆಪಿಯವರು ದೊಡ್ಡ ಯಾತ್ರೆಯನ್ನೇ ಮಾಡುತ್ತಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಕುಟುಕಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ಸಿ.ಟಿ.ರವಿ, ಶೋಭಾ ಕರಂದ್ಲಾಜೆಯಂತಹವರು ಮೈಸೂರಿನಲ್ಲೂ ದೊಡ್ಡಯಾತ್ರೆ ಮಾಡುತ್ತಿದ್ದರು. ಈಗ ಅವರದ್ದೇ ಸರ್ಕಾರ ಇರುವುದಕ್ಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಪ್ರತ್ಯೇಕ ವಿವಿ ಕುರಿತು ಮಾತನಾಡಿ, ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆಯಾಗಬೇಕೆಂಬ ಬೇಡಿಕೆ ಬಹುದಿನಗಳಿಂದ ಇದ್ದು, ವಿವಿ ಸ್ಥಾಪನೆಗಾಗಿ ತಕ್ಷಣ 100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು. ಚಾಮರಾಜನಗರ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಿದ್ದು, ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಉನ್ನತ ಶಿಕ್ಷಣ ಸಚಿವರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ವಿವಿ ಕಾರ್ಯರೂಪಕ್ಕೆ ತರುವ ದೂರದೃಷ್ಟಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಚಾ.ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿ ಅಗತ್ಯವಿರುವ ಭೂಮಿ ಹಾಗೂ ಅನುದಾನ ನೀಡಲಾಗಿದೆ. ಈ ಪಿಜಿ ಸೆಂಟರ್‌ ಅನ್ನೇ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ, ಜಿಲ್ಲೆಯನ್ನು ಶೈಕ್ಷಣಿಕವಾಗಿ ಪ್ರಗತಿಯಾಗುವಂತೆ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ತಿಂಗಳು ಚಾ.ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ ಉದ್ಘಾಟನೆಗೆ ರಾಷ್ಟ್ರಪತಿ ಬರುತ್ತಿರುವುದು ಸಂತೋಷ. ಶಿಷ್ಟಾಚಾರ ಪಾಲನೆಗಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಬರುವುದು ಅನಿವಾರ್ಯ. ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದ ಸಮಯದಲ್ಲಿಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿಗೆ ಹೊಸ ಕೊಡುಗೆಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಮ್ಲಜನಕ ದುರಂತದ ಬಗ್ಗೆ ರಾಜ್ಯ ಸರ್ಕಾರ ಭಂಡತನ ತೋರಿದೆ. ಆರೋಗ್ಯ ಸಚಿವ ಡಾ.ಸುಧಾಕರ್‌ ಅವರು ಮೂವರು ಸೋಂಕಿತರು ಮಾತ್ರ ಆಕ್ಸಿಜನ್ ಸಿಗದೆ ಸತ್ತಿದ್ದಾರೆ ಎಂದು ಹೇಳಿದ್ದರು. ಕೊನೆ ಪಕ್ಷ ಆ ಮೂವರ ಮನೆಗಳಿಗೆ ಹೋಗಿ ಪರಿಹಾರ ನೀಡಲಿಲ್ಲ. ಸಂಸತ್‌ನಲ್ಲಿ ಕೇಂದ್ರ ಆರೋಗ್ಯ ಸಚಿವರು ಸಂಸತ್‌ನಲ್ಲಿ ಆಮ್ಲಜನಕ ಕೊರತೆಯಿಂದ ಯಾರೊಬ್ಬರೂ ಸತ್ತಿಲ್ಲ ಎಂದು ಹೇಳಿಕೆಯು ಸರ್ಕಾರದಲ್ಲಿರುವ ಬಿಜೆಪಿಯವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡುವ ಬದಲು, ಕಾದಂಬರಿ ಪುರಾಣಗಳಿಗೆ ಆದ್ಯತೆ ನೀಡಲಾಗಿದೆ. ಶಿಕ್ಷಣ ನೀತಿ ರೂಪಿಸಿರುವ ಸಮಿತಿಯಲ್ಲಿರುವ ಕಸ್ತೂರಿ ರಂಗನ್‌ ಅವರ ಬಗ್ಗೆ ಗೌರವವಿದೆ. ಆದರೆ, ಸಮಿತಿಯಲ್ಲಿ ಇರುವ ಉಳಿದವರು ಆರ್‌ಎಸ್‌ಎಸ್‌ನವರು. ಎನ್‌ಇಪಿ ಬಗ್ಗೆ ಸಮಗ್ರವಾಗಿ ಚರ್ಚೆಯಾದ ನಂತರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

× Chat with us