ಜಿಲ್ಲೆಯ 3 ಕ್ಷೇತ್ರಗಳಲ್ಲಿ ಮುಂದುವರಿದ ಗೊಂದಲ; ಕುತೂಹಲ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಜಾದಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿ ವಾರ ಕಳೆದರೂ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ 123 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿ ಹೊಂದಿರುವ ಜಾ.ದಳಕ್ಕೆ ಅಭ್ಯರ್ಥಿಗಳ ಆಯ್ಕೆಯ ಗೊಂದಲ ಬಗೆಹರಿದಿಲ್ಲ ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಪಂಚರತ್ನ ರಥಯಾತ್ರೆ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆಯ ಹೊಣೆಯನ್ನು ಅಭ್ಯರ್ಥಿಗಳಿಗೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಹಾಸನ, ಅರಸೀಕೆರೆ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನು ಗೊಂದಲ ಮುಂದುವರಿದಿದೆ. ಈ ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಎ.ಟಿ. ರಾಮಸ್ವಾಮಿ ಅವರಿಗೆ ಟಿಕೆಟ್ ನೀಡಲು ಪಕ್ಷ ಸಿದ್ಧವಾಗಿದೆ. ಆದರೆ ಅವರು ಜಾ.ದಳ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಸದ್ಯಕ್ಕೆ ಯಾವುದೇ ಗುಟ್ಟುಬಿಟ್ಟುಕೊಡದೆ ಜಾ.ದಳದಲ್ಲಿ ಎ.ಟಿ.ರಾಮಸ್ವಾಮಿ ಮುಂದುವರಿಯುತ್ತಿದ್ದಾರೆ. ಆದರೆ, ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಜಾ.ದಳದಿಂದ ಅಂತರ ಕಾಯ್ದುಕೊಂಡಿದ್ದಾರೆ
ಈ ಎರಡು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೂ ಅವರು ಕೊನೆ ಗಳಿಗೆಯಲ್ಲಿ ಪಕ್ಷದಲ್ಲಿ ಉಳಿಯದೇ ಪಕ್ಷಾಂತರಗೊಳ್ಳಬಹುದು. ಆಗ ಮುಜುಗರ ಅನುಭವಿಸಬೇಕಾಗುತ್ತದೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಹಾಲಿ ಶಾಸಕರಿಗೆ ನೀಡಲಿಲ್ಲ ಎಂಬ ಆರೋಪ ಎದುರಿಸಬೇಕಾಗುತ್ತದೆ. ಈ ಗೊಂದಲದಿಂದಾಗಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ.
ಎರಡೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದರೂ ಶಾಸಕರ ನಡೆ ಯಾವ ಕಡೆಗೆ ಎಂಬುದನ್ನು ಎದುರು ನೋಡುತ್ತಿದ್ದಾರೆ. ಹಾಸನ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಜಾ.ದಳ ಶಾಸಕರಿದ್ದಾರೆ.
ಶಾಸಕರಾದ ಅನಿತ ಕುಮಾರಸ್ವಾಮಿಯವರು ತಮ್ಮ ಪುತ್ರ ಹಾಗೂ ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಸಿದ್ದವಾಗಿದ್ದಾರೆ.
ಪಕ್ಷದಿಂದ ಉಚ್ಚಾಟನೆ ಮಾಡಲಾಗಿರುವ ಶಾಸಕ ಶ್ರೀನಿವಾಸ್ ಅವರ ಗುಬ್ಬಿ ಕ್ಷೇತ್ರದಲ್ಲಿ ನಾಗರಾಜ್ ಎಂಬವರಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಮತ್ತೊಬ್ಬ ಶಾಸಕರಾದ ಶ್ರೀನಿವಾಸ್ ಗೌಡರ ಬದಲಿಗೆ ಸಿಎಂಆರ್ ಶ್ರೀನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಹೀಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಜಾ.ದಳ ಅಭ್ಯರ್ಥಿಗಳ ಗೊಂದಲ ಇನ್ನೂ ಬಗೆಹರಿದಿಲ್ಲ.
ಹಾಸನ ಕ್ಷೇತ್ರಕ್ಕೆ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಅವರ ಪುತ್ರ ಎಚ್.ಪಿ. ಸ್ವರೂಪ್ ಅವರು ಜಾ.ದಳ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ಹೆಚ್ಚಾಗಿದೆ. ಆದರೆ, ವರಿಷ್ಠರು ಸ್ವರೂಪ್ ಅವರನ್ನು ಕಣಕ್ಕಿಳಿಸಿದರೆ, ಸಹಾನುಭೂತಿಯ ಜತೆಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಕುಟುಂಬದವರಿಗೆ ಟಿಕೆಟ್ ನೀಡಿದರು ಎಂಬ ಅಪವಾದ ಎದುರಿಸಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ನಾಯಕರಿದ್ದಾರೆ.