ದೇಶದಲ್ಲಿ ಕೇಸರಿ ಬ್ಯಾನ್ ಮಾಡಿದ್ದಾರಾ: ಗೃಹ ಸಚಿವ ಆರಗ ಪ್ರಶ್ನೆ

ಬೆಂಗಳೂರು: ದೇಶದಲ್ಲಿ ಕೇಸರಿ ಬಣ್ಣವನ್ನು ಬ್ಯಾನ್ ಮಾಡಿದ್ದಾರಾ? ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣವಿಲ್ಲವಾ? ನಾಳೆ ದಿನ ಕೇಸರಿಯನ್ನು ತೆಗೆದುಹಾಕಬೇಕು ಎಂದ ತಕ್ಷಣ ತೆಗೆಯಲು ಸಾಧ್ಯವಾಗುತ್ತದೆಯೇ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ. ಈ ಮೂಲಕ ಪೊಲೀಸರು ಕೇಸರಿ ಉಡುಪು ತೊಟ್ಟಿದ್ದನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಪೊಲೀಸರು ಕೇಸರಿ ಉಡುಪು ಧರಿಸಿ ಆಯುಧ ಪೂಜೆ ಮಾಡಿರುವ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಬಣ್ಣವನ್ನು ಈ ದೇಶದಲ್ಲಿ ಯಾರೂ ಬ್ಯಾನ್ ಮಾಡಿಲ್ಲ. ನಾಳೆ ದಿನ ಕೇಸರಿ ಬಾತ್‌ಗೆ ಹಸಿರು ಬಣ್ಣ ಹಾಕಬೇಕು ಅನ್ನೋಕೆ ಆಗುತ್ತಾ? ಪೊಲೀಸರು ಕೇಸರಿ ಶಾಲು ಜೊತೆಗೆ ಬಿಳಿ ಟೋಪಿ, ಕುರ್ತಾ ಪೈಜಾಮ ಹಾಕಿದ್ದಾರೆ. ಅದಕ್ಕೆ ಏನು ಹೇಳೋದು? ಪೊಲೀಸರ ಖಾಸಗಿ ಜೀವನವನ್ನು ಗೌರವಿಸಬೇಕು. ಚುನಾವಣೆ ನಡೆಯುತ್ತಿದೆ ಎಂದು ಕೋಮುವಾದ ಸೃಷ್ಟಿಸುವುದು ಸರಿಯಲ್ಲ ಎಂದರು.

ಡ್ಯೂಟಿಯಲ್ಲಿ ಇರುವಾಗ ಯೂನಿಫಾರಂ ತೊಡುತ್ತಾರೆ. ಆದರೆ, ಮನೆ ಅಥವಾ ಪೂಜೆಗಳಲ್ಲಿ ಯೂನಿಫಾರಂ ಹಾಕಿಕೊಳ್ಳಬೇಕು. ಬೂಟ್ ಹಾಕಿಕೊಂಡು ಪೂಜೆ ಮಾಡಬೇಕೆಂದಿಲ್ಲ. ಸ್ಟೇಷನ್‌ನಲ್ಲಿ ಕೂಡ ಎಲ್ಲಾ ಪೂಲೀಸರು ಯೂನಿಫಾರಂನಲ್ಲಿ ಇರುವುದಿಲ್ಲ. ಸಿವಿಲ್ ಡ್ರೆಸ್‌ನಲ್ಲಿ ಇರುತ್ತಾರೆ ಎಂದು ತಿಳಿಸಿದರು.

ಕೇಸರಿ ಟವಲ್ ಹಾಕಿಕೊಂಡಿರುವುದು ಸಾಂಪ್ರದಾಯಿಕ ಉಡುಗೆಯಾಗಿದೆ. ಪೊಲೀಸರ ಖಾಸಗಿತನವನ್ನು ಕೂಡ ಮಾನ್ಯ ಮಾಡಬೇಕು. ಪೂಜೆ, ಪುನಸ್ಕಾರ ಹಾಗೂ ಮನೆಗಳಲ್ಲಿ ಇಂತಹದ್ದೇ ಬಟ್ಟೆಗಳನ್ನು ತೊಡಬೇಕು ಎಂದು ಹೇಳಲು ಸಾಧ್ಯವಿಲ್ಲ. ಕೇಸರಿ ಶಾಲು ಹಾಕಿದ ಕೂಡಲೇ ಏನು ಆಗಿದೆ? ಕೇಸರಿ ಶಾಲು ಬಿಜೆಪಿಯದ್ದಾ? ಈ ರೀತಿಯ ಸಿನಿಕುತನ ವೋಟ್ ಬ್ಯಾಂಕ್ ರಾಜಕೀಯವಾಗಿದೆ. ಇದನ್ನು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಪೊಲೀಸ್ ಮುಸ್ಲಿಂ ಸಿಬ್ಬಂದಿಯೊಬ್ಬ ಮಧ್ಯಾಹ್ನ ನಮಾಜ್‌ಗೆ ಹೋಗಿ ಬರುತ್ತಾರೆ. ಇದನ್ನು ನಾವು ಗೌರವಿಸುವುದಿಲ್ಲವೇ? ಪಶ್ಚಿಮ ಬಂಗಾಳದ ವಿಧಾನಸೌಧದ ಪಕ್ಕದ ಹಾಲ್‌ನಲ್ಲಿ ನಮಾಜ್ ಮಾಡಲು ಮಸೀದಿ ಕಟ್ಟಿಸಿಕೊಟ್ಟಿದ್ದಾರೆ. ಇದನ್ನು ಯಾರೂ ಪ್ರಶ್ನೆ ಮಾಡಲಿಲ್ಲ. ಯಾವುದೋ ಒಂದು ಸಮುದಾಯವನ್ನು ಓಲೈಸುವುದಕ್ಕಾಾಗಿ ನಮ್ಮ ಪರಂಪರೆ ಮತ್ತು ಸಂಪ್ರದಾಯವನ್ನು ಹೀಗಳೆಯುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಇದೇ ರೀತಿ ಟೀಕೆ ಮಾಡುತ್ತಿದ್ದರೆ, ದೊಡ್ಡ ಸಮುದಾಯದ ಜನರನ್ನು ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಜನರೇ ಉತ್ತರ ನೀಡುತ್ತಾಾರೆ ಎಂದು ಪ್ರತಿಕ್ರಿಯಿಸಿದರು.

ತ್ರಿಶೂಲ ಕೊಡುವುದು ಪ್ರತಿ ವರ್ಷ ವಿಶ್ವ ಹಿಂದೂ ಪರಿಷತ್ತಿನಲ್ಲಿ  ನಡೆದುಕೊಂಡು ಬಂದಿರುವ ಪರಂಪರೆಯಾಗಿದೆ. ಈ ವರ್ಷ ಚುನಾವಣೆಗಾಗಿ ಅದನ್ನು ಹೈಲೈಟ್ ಮಾಡುತ್ತಿದ್ದಾರೆ ಅಷ್ಟೇ. ಹಿಂದೊಂದು ಕಾಲದಲ್ಲಿ ತ್ರಿಶೂಲ ಆಯುಧವಾಗಿತ್ತು. ಈಗ ಅದನ್ನು ತೆಗೆದುಕೊಂಡು ಚುಚ್ಚಲು ಆಗುತ್ತದೆಯೇ? ತ್ರಿಶೂಲದಲ್ಲಿ ಯುದ್ಧ ಮಾಡಲು ಆಗುತ್ತಾಾ ಎಂದು ವ್ಯಂಗ್ಯವಾಡಿದರು.

× Chat with us