ಬೆಂಗಳೂರು : ಮಂಡ್ಯ ಜಿಲ್ಲೆಯವರು ಸ್ವಾಭಿಮಾನಿಗಳು ರಾಜಕೀಯವನ್ನು ಅರೆದು ಕುಡಿದವರು. ನಂಬಿ ಅವಕಾಶ ಕೊಟ್ಟು ಏನೂ ಮಾಡದವರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಸಚಿವ ಸಚಿವ ಅಶ್ವಥ್ ನಾರಾಯಣ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ಮುಖಂಡ ಸಚ್ಚಿದಾನಂದಮೂರ್ತಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಪರೋಕ್ಷವಾಗಿ ಎಲ್ಲಿಯೂ ಕುಮಾರಸ್ವಾಮಿ ಹೆಸರು ಹೇಳದೆ ಕೆಂಡ ಕಾರಿದರು.
ಮಂಡ್ಯ ಜಿಲ್ಲೆ ಹೇಳಿಕೇಳಿ ರಾಜಕೀಯಕ್ಕೆ ಹೇಳಿ ಮಾಡಿಸಿದ ಜಿಲ್ಲೆ. ಇಲ್ಲಿನ ಜನರು ಸ್ವಾಭಿಮಾನಿಗಳು. ರಾಜಕೀಯವನ್ನೇ ರಕ್ತಗತ ಮಾಡಿಕೊಂಡವರು. ಅವರಿಗೆ ರಾಜಕೀಯವೇ ಉಸಿರು, ನಿದ್ದೆ, ನೀರಾಗಿದೆ ಎಂದರು.
ಕೆಲವರನ್ನು ನಂಬಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೀರಿ. ಆದರೆ ಅವರು ಅಕಾರದಲ್ಲಿದ್ದಾಗ ನಿಮಗೆ ಏನು ಮಾಡಿದರು? ಅಂಥವರಿಗೆ ಬರುವ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ ಎಂದು ಮನವಿ ಮಾಡಿದರು.ಇನ್ನೊಬ್ಬರ ರಕ್ತ ಹೀರುವಂತವರನ್ನು ನಾಯಕ ಎಂದು ಕರೆಯುತ್ತೀರಾ? ಅವನನ್ನು ಏನೆಂದು ಕರೆಯಬೇಕು ಎಂದು ಸಭಿಕರನ್ನು ಅಶ್ವಥ್ ನಾರಾಯಣ ಪ್ರಶ್ನಿಸಿದಾಗ, ರಾಕ್ಷಸ ಎಂದು ಸಭಿಕರು ಉತ್ತರಿಸಿದರು.
ಹೀಗಾಗಿ ಇಂಥವರಿಗೆ ಮುಂದೆ ಸರಿಯಾದ ಪಾಠ ಕಲಿಸಬೇಕು. ಕೆ.ಆರ್.ಪುರ, ಪಾಂಡವಪುರ, ಸಕ್ಕರೆ ಕಾರ್ಖಾನೆಯನ್ನು ಹಳ್ಳ ಹಿಡಿಸಿದರು. ಇದಕ್ಕೆ ಕಾರಣ ಯಾರೆಂಬುದು ಎಲ್ಲರಿಗೂ ಗೊತ್ತು ಎಂದು ಕುಮರಸ್ವಾಮಿ ಅವರ ಹೆಸರು ಹೇಳದೆ ಕಿಡಿಕಾರಿದರು.
ಮುಂದೆ ಮಂಡ್ಯ ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿ ಬರಬಾರದೆಂದರೆ ನಿಮಗೆ ಮೋಸ ಮಾಡಿದವರಿಗೆ ಪಾಠ ಕಲಿಸಿ. ಅಲ್ಲಿ ಬರೀ ಚೇಷ್ಟೆ, ಕುಚೇಷ್ಟೆ, ಸ್ವಾರ್ಥ ರಾಜಕಾರಣ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದ ಜನ ಎಷ್ಟು ಸ್ವಾಭಿಮಾನಿಗಳೆಂದರೆ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಸ್ವಾಭಿಮಾನವನ್ನು ಪಣಕ್ಕಿಟ್ಟು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿದ್ದೀರಿ. ಕುಟುಂಬ ರಾಜಕಾರಣ, ತುಷ್ಟಿರಾಜಕಾರಣ ಮಾಡುವವರಿಗೆ ಸರಿಯಾದ ಪಾಠ ಕಲಿಸಿದ್ದೀರಿ ಎಂದು ಹರಿಹಾಯ್ದರು.
ಅತಿ ಹೆಚ್ಚು ಸಾಲ ತೆಗೆದುಕೊಂಡಿರುವ ಜಿಲ್ಲೆ ಅಂದರೆ ಮಂಡ್ಯ. ಅತಿಹೆಚ್ಚಿನ ಆತ್ಮಹತ್ಯೆಯಾಗುವ ಜಿಲ್ಲೆ ಅಂದರೆ ಮಂಡ್ಯ. ಆದರೆ ನಂಬಿ ನಂಬಿ ಅವಕಾಶ ಕೊಟ್ಟ ವ್ಯಕ್ತಿಗಳು ಏನು ಮಾಡಿಸಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದು ದೂರಿದರು.
ಮಂಡ್ಯ ಅಂದರೆ ಸಮೃದ್ಧಿಯ ನಾಡು ಕೈಗಾರಿಕೆಯಲ್ಲಿ, ಶಿಕ್ಷಣ, ವ್ಯವಸಾಯದಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಯನ್ನಾದರೂ ಮಾಡಿದ್ದಾರೆಯೇ? ಹೋಗಲಿ ಕಾಲುವೆಗಳನ್ನು ಅಭಿವೃದ್ಧಿಪಡಿಸಿದ್ದಾರಾ? ಗುಡ್ಡ ನೋಡಿದರೆ ಕ್ರಷ್ ಮಾಡಿ ನುಂಗಿ ಹಾಕಿದ್ದಾರೆ ಎಂದು ಆರೋಪಿಸಿದರು.
ಕುಟುಂಬ ಆಧಾರಿತ ಪಕ್ಷಗಳು ಅಂದರೆ ಅದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು. ನಾವು ಜನರ ಬಳಿ ಹೋಗಿ ಪಕ್ಷ ಸಂಘಟಿಸಿ ಜನರ ಪರ ನಿಲ್ಲಬೇಕು. ನಾವು ಸ್ವಾಭಿಮಾನದ ಪ್ರತೀಕವಾಗಿ ನಿಲ್ಲಬೇಕು. ನಿಮಗೆ ಏನು ಆಗಬೇಕು ಹೇಳಿ? ನಾವು ಯಾವ ತ್ಯಾಗಕ್ಕೂ ಸಿದ್ದರಿದ್ದೇವೆ, ತಲೆ ಕೊಡೋಕೆ ರೆಡಿ ಇದ್ದೇವೆ ಎಂದರು.
ನಾವೇ ಇರಬೇಕು ಅಂತೇನಿಲ್ಲ, ನೀವೇ ಇರೀ, ಆದರೆ ಜನರ ಬಗ್ಗೆ ನಿಜವಾಗಿಯೂ ಕಾಳಜಿ ಇರಬೇಕು. ಬಿಜೆಪಿ ಎಲ್ಲ ಮನೆಯ ಪಕ್ಷ, ನೀವು ಯಾರ ಮನೆಯ ಬಾಗಿಲು ಕಾಯುವ ಅವಶ್ಯಕತೆ ಇಲ್ಲ. ಎರಡು ಪಕ್ಷಗಳಿಗೂ ಜಿಲ್ಲೆಯ ಜನತೆ ಪಾಠ ಕಲಿಸಬೇಕು ಎಂದು ಹೇಳಿದರು.
ಮಂಡ್ಯದಲ್ಲಿ ಏನು ದುಡ್ಡು ಖರ್ಚು ಮಾಡಿದರೂ ನಡೆಯುವುದಿಲ್ಲ. ಅಲ್ಲಿ ನಡೆಯೋದೇ ಅಂತಿಮವಾಗಿ ಸ್ವಾಭಿಮಾನ. ಹಿಂದೆ ಎಂಪಿ ಚುನಾವಣೆಯಲ್ಲಿ ನೋಡಿದ್ದೀರಲ್ಲ. ಹೆಸರು ಪ್ರಸ್ತಾಪ ಮಾಡದೇ ಭಾಷಣ ಉದ್ದಕ್ಕೂ ಕುಮಾರಸ್ವಾಮಿ ವಿರುದ್ದ ಅವರು ಕಿಡಿಕಾರಿದರು.