ಆರ್‌ಎಸ್‌ಎಸ್‌ ಅಂದ್ರೆ ರಾಷ್ಟ್ರೀಯ ಕಾರ್ಪೊರೇಟ್‌ ಗುಲಾಮಗಿರಿ ಸಂಘ: ಎಚ್‌.ಸಿ.ಮಹದೇವಪ್ಪ ಟೀಕೆ

ಮೈಸೂರು: ನನ್ನ ಪ್ರಕಾರ ಆರ್‌ಎಸ್‌ಎಸ್‌ ಅಂದರೆ ರಾಷ್ಟ್ರೀಯ ಕಾರ್ಪೊರೇಟ್‌ ಗುಲಾಮಗಿರಿ ಸಂಘ ಎಂದು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಇನ್ನು ಮುಂದೆ ಯಾರಾದರೂ ನಿಮಗೆ ಆರ್‌ಎಸ್‌ಎಸ್‌ ಎಂಬುದು “ರಾಷ್ಟ್ರೀಯ ಸ್ವಯಂ ಸೇವಕ ಸಂಘ” ಎಂದು ಹೇಳಿದರೆ ಅವರನ್ನು ಯಾವುದಾದರೂ ಹತ್ತಿರದ ಮಾನಸಿಕ ಆಸ್ಪತ್ರೆಗೆ ಸೇರುವಂತೆ ಸಲಹೆ ನೀಡಿ ಎಂದು ತಿಳಿಸಿದ್ದಾರೆ.

ಭಾರತದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿ ಜನರ ಬದುಕು ಅಕ್ಷರಶಃ ದುಃಖದಿಂದ ಕೂಡಿರುವ ಸಂದರ್ಭದಲ್ಲಿ ಕಾರ್ಪೊರೇಟ್ ಉದ್ಯಮಿಗಳ ಸಂಪತ್ತು ಗಂಟೆಗಳ ಲೆಕ್ಕದಲ್ಲಿ ವೃದ್ಧಿಸುತ್ತಿದೆ. ಬೆಲೆ ಏರಿಕೆ, ಆಂತರಿಕ ಭದ್ರತಾ ವೈಫಲ್ಯ, ಸಂವಿಧಾನಾತ್ಮಕ ವಾತಾವರಣದ ವಿನಾಶದ ಬಗ್ಗೆ ಯಾರಾದರೂ ದನಿ ಎತ್ತಿದರೆ ಅವರನ್ನು ದೇಶದ್ರೋಹಿ ಎಂದು ಕರೆಯುವಂತಹ ಕೀಳು ಮಟ್ಟದ ಪ್ರವೃತ್ತಿಯನ್ನು ಸಮಾಜದಲ್ಲಿ ರೂಢಿಸಲು ಆರ್‌ಎಸ್‌ಎಸ್‌ ಹಾಗೂ ವೈದಿಕಶಾಹಿಗಳು ಹಗಲಿರುಳೂ ಶ್ರಮಿಸುತ್ತಿದ್ದಾರೆ. ಇನ್ನು ಸರ್ಕಾರದ ದುರಾಡಳಿತದಿಂದ ಉಂಟಾಗುವ ತೊಂದರೆಗಳನ್ನು ಪ್ರಶ್ನಿಸುವುದನ್ನು ʻಹಿಂದೂ ಧರ್ಮಕ್ಕೆ ವಿರುದ್ಧವಾದ ನಡವಳಿಕೆʼ ಎಂದು ಹೇಳುತ್ತಾ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದುರಂತವೆಂದರೆ ದೇಶದ ಆರ್ಥಿಕತೆಯು ಕುಸಿದು ಹೋಗಿರುವಾಗ ಕಾರ್ಪೊರೇಟ್‌ಗಳ ಸಂಪತ್ತು ವೃದ್ಧಿ ಆಗುತ್ತಿರುವ ವಿಧಾನದ ಬಗ್ಗೆ ಚಕಾರ ಎತ್ತದ ಇವರ ದ್ರೋಹವನ್ನು ನಾನು ಗುಲಾಮಗಿರಿ ಎಂದು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಸಂವಿಧಾನ ವಿರೋಧಿ ನಡವಳಿಕೆಗಳಿಗೆ ಕುಖ್ಯಾತಿ ಹೊಂದಿರುವ ಮಾನಸಿಕ ಭ್ರಷ್ಟರಾದ ಆರ್‌ಎಸ್‌ಎಸ್‌ನಲ್ಲಿ ಎಂತಹ ಸಂಸ್ಕೃತಿ ಕಲಿಸುತ್ತಾರೆ ಎಂಬುದಕ್ಕೆ ಓರ್ವ ಅಯೋಗ್ಯನಂತೆ ಮಾತನಾಡುವ ನಳೀನ್ ಕುಮಾರ್ ಕಟೀಲ್ ಉದಾಹರಣೆ. ಇನ್ನು ಸಂವಿಧಾನ ವಿರೋಧಿಯಾದ ಆರ್‌ಎಸ್‌ಎಸ್‌ನಿಂದ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆಗೆ ಬರುವವರು ಎಂತಹ ವಂಚಕರು, ಲಂಪಟರು ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಪರಮ ಉದಾಹರಣೆ ಎಂದು ಕುಟುಕಿದ್ದಾರೆ.

ನೋಟ್ ಬ್ಯಾನ್‌ನಿಂದ ಕೊರೊನಾ ಮತ್ತು ಈಗಿನ ತೈಲ ಬೆಲೆ ಏರಿಕೆಯವರೆಗೆ ನರೇಂದ್ರ ಮೋದಿಯವರ ಆಡಳಿತಾತ್ಮಕ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು, ಆತನ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ ಎಂತಹ ದಡ್ಡ ಶಿಖಾಮಣಿಗಳ ಸಂಸ್ಥೆ ಎಂಬ ಸಂಗತಿಯು ನಮಗೆ ಸುಲಭವಾಗಿ ತಿಳಿಯುತ್ತದೆ ಎಂದಿದ್ದಾರೆ.

× Chat with us