ಬೆಂಗಳೂರು – ರಾಜ್ಯದಲ್ಲಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಹರಸಾಹಸಪಡುತ್ತಿರುವ ಬಿಜೆಪಿಗೆ ಟಿಕೆಟ್ ಘೋಷಣೆಯಾಗುವ ಮುನ್ನವೇ ರಾಜ್ಯಾದ್ಯಂತ ಭುಗಿಲೇಳುತ್ತಿರುವ ಅಸಮಾಧಾನ, ಆಕ್ರೋಶ ತೀವ್ರ ಕಗ್ಗಂಟಾಗಿ ಪರಿಣಮಿಸಿದೆ.
ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ, ಕಾರ್ಯಕರ್ತರನ್ನು ಕಡೆಗಣಿಸಿರುವ ಕ್ಷೇತ್ರದಲ್ಲಿ ಕೆಲಸ ಮಾಡದಿರುವ ಶಾಸಕರಿಗೆ ಟಿಕೆಟ್ ಕೊಡಲೇಬಾರದೆಂದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಕಮಲ ಪಾಳಯಕ್ಕೆ ತಲೆ ಬಿಸಿ ಉಂಟು ಮಾಡಿದೆ.
ಸಾಮಾನ್ಯವಾಗಿ ಯಾವುದೇ ಪಕ್ಷದಲ್ಲಿ ಟಿಕೆಟ್ ಘೋಷಣೆಯಾದ ನಂತರ ವಂಚಿತರು, ಅಸಮಾಧಾನಿತರು, ಪಕ್ಷದ ವಿರುದ್ಧ ತಿರುಗಿ ಬೀಳುವುದು, ಪ್ರತಿಭಟನೆ ನಡೆಸುವುದು, ಪಕ್ಷ ಬಿಡುವುದು ಸರ್ವೆ ಸಾಮಾನ್ಯ.
ಆದರೆ ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಾಗುವ ಮುನ್ನವೇ ಸುಮಾರು ಒಂದು ಡಜನ್ಗೂ ಅನೇಕ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಪ್ರತಿಭಟನೆ ನಡೆಸುತ್ತಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಸೊರಬದ ಕುಮಾರ್ ಬಂಗಾರಪ್ಪ, ರಾಣೆಬೆನ್ನೂರಿನ ಅರುಣ್ ಪೂಜಾರ್, ಶಿವಮೊಗ್ಗನಗರದಲ್ಲಿ ಕೆ.ಎಸ್.ಈಶ್ವರಪ್ಪ, ಅಥಣಿಯ ಮಹೇಶ್ ಕುಮುಠಹಳ್ಳಿ ಸೇರಿದಂತೆ ಮತ್ತಿತರ ಕಡೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಬೆಂಬಲ ಕೊಡುವುದಿಲ್ಲ ಎಂದು ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ.
ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೆ ನಾವೇ ಗೆಲ್ಲಿಸುತ್ತೇವೆ. ಆದರೆ ಪಕ್ಷ ವಿರೋ ಚಟುವಟಿಕೆ ನಡೆಸಿ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿ ಕ್ಷೇತ್ರದಲ್ಲಿ ಕೆಲಸವನ್ನು ಮಾಡದೆ ಮತದಾರರನ್ನು ನಿರ್ಲಕ್ಷ್ಯ ಮಾಡಿ ಅಪಮಾನಿಸಿರುವ ಜನವಿರೋ ಶಾಸಕರಿಗೆ ಟಿಕೆಟ್ ಕೊಡಬಾರದು ಎಂಬುದು ಬಹುತೇಕರ ಒತ್ತಾಯವಾಗಿದೆ.
ರಾಣೇಬೆನ್ನೂರಿನಲ್ಲಿ ಹಾಲಿ ಬಿಜೆಪಿ ಶಾಸಕ ಅರುಣ್ಕುಮಾರ್ ಪೂಜಾರ್ ಗೆ ಟಿಕೆಟ್ ನೀಡದಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಹಾಲಿ ಶಾಸಕ ಅರುಣ್ ಕುಮಾರ್ ಪೂಜಾರ್ ಗೆ ಟಿಕೆಟ್ ನೀಡದಂತೆ ಘೋಷಣೆ ಕೂಗಿದರು. ಬದಲಾಗಿ ಸಂತೋಷ್ ಕುಮಾರ್ ಪಾಟೀಲ್ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ. ಕ್ಷೇತ್ರದಲ್ಲಿ ಬಿಜೆಪಿಯಲ್ಲೇ ಎರಡು ಬಣಗಳು ಸೃಷ್ಟಿಯಾಗಿವೆ. ಒಂದು ಬಣ ಎಂಪಿ ಕುಮಾರಸ್ವಾಮಿಗೆ ಬೆಂಬಲ ನೀಡಿದರೆ ಮತ್ತೊಂದು ಬಣ ಈ ಬಾರಿ ಅವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದೆ.
ಸ್ವತಃ ಮಾಜಿ ಸಿ.ಎಂ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾ ಪ್ರವಾಸ ನಡೆಸಿದ ಸಂದರ್ಭದಲ್ಲಿ ಈ ಬಣ ರಾಜಕೀಯ ಸ್ಪೋಟಗೊಂಡು ಪರ ವಿರೋಧ ಪ್ರತಿಭಟನೆಗಳು ನಡೆದಿದ್ದವು. ಇದು ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡಿತ್ತು. ಈ ನಡುವೆ ಎಂ.ಪಿ.ಕುಮಾರಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂಬ ಮಾತೂ ಕೇಳಿಬರುತ್ತಿದೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಎಸ್ ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರಾಗಿದ್ದು, ಬಹಿರಂಗವಾಗಿಯೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿ ಬ್ಯಾನರ್ ಗಳನ್ನು ಕ್ಷೇತ್ರದಲ್ಲಿ ಹಾಕಲಾಗಿದ್ದು, ಜೊತೆಗೆ ಹಿಂದೂ ಮುಸ್ಲಿಂ ಸೌಹಾರ್ದ ಸಾರುವ ಸಂದೇಶಗಳನ್ನು ಉಲ್ಲೇಖಿಸಿ ಆಯನೂರು ಸಂದೇಶ ರವಾನೆ ಮಾಡಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರು ತಮಗೆ ಟಿಕೆಟ್ ಸಿಗದಿದ್ದಲ್ಲಿ ಅವರ ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಅಯನೂರು ಬಣ ವಿರೋಧ ವ್ಯಕ್ತಪಡಿಸಿದೆ. ಕೇವಲ ಒಂದೇ ಕುಟುಂಬಕ್ಕೆ ಶಿವಮೊಗ್ಗದಲ್ಲಿ ಏಕೆ ಟಿಕೆಟ್ ನೀಡಬೇಕು ನಾವೂ ಪಕ್ಷಕ್ಕಾಗಿ ದುಡಿದಿದ್ದೇವೆ ಎಂಬುವುದು ಆಯನೂರು ವಾದವಾಗಿದೆ.
ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂಬ ಕೂಗು ಕ್ಷೇತ್ರದಲ್ಲಿ ತೀವ್ರಗೊಂಡಿದೆ. ಸೊರಬದಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದು, ನಮೋ ವೇದಿಕೆ ಕಾರ್ಯಕರ್ತರು ರ್ಯಾಲಿಯನ್ನು ನಡೆಸಿದ್ದರು. ಮೊದಲಿನಿಂದಲೂ ಕ್ಷೇತ್ರದಲ್ಲಿ ಮೂಲ ವರ್ಸಸ್ ವಲಸಿಗರ ನಡುವೆ ಭಿನ್ನಾಭಿಪ್ರಾಯವಿತ್ತು. ಪರಸ್ಪರ ಟೀಕೆ, ವಿವಾದಾತ್ಮಕ ಹೇಳಿಕೆಗಳು ಕಂಡುಬರುತ್ತಿದ್ದವು. ಆದರೆ ಇದೀಗ ಅದು ತೀವ್ರಗೊಂಡಿದೆ. ಚನಾವಣಾ ಹೊಸ್ತಿಲಲ್ಲಿ ಕುಮಾರ್ ಬಂಗಾರಪ್ಪ ವಿರುದ್ಧ ಅಸಾಮಾಧಾನದ ಕೂಗು ತೀವ್ರಗೊಂಡಿದೆ.
ಹೀಗೆ ಹಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ವಿರುದ್ಧವೇ ಅಸಮಾಧಾನ ಭುಗಿಲೆದ್ದಿರುವುದು ಬಿಜೆಪಿ ಹೈಕಮಾಂಡ್ಗೂ ತಲೆನೋವು ಸೃಷ್ಟಿಸಿದೆ. ಪಕ್ಷದ ಆಂತರಿಕ ಬಣ ರಾಜಕೀಯದ ಲಾಭ ವಿರೋಧ ಪಕ್ಷಗಳು ಪಡೆದುಕೊಳ್ಳುವ ಪ್ರಯತ್ನದಲ್ಲಿದೆ.
ಇದು ಬಿಜೆಪಿಗೆ ಹಿನ್ನಡೆಯನ್ನು ಉಂಟು ಮಾಡಬಲ್ಲದು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಆದರೆ, ಇದನ್ನು ರಾಜ್ಯ ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುವುದು ಸದ್ಯದ ಕುತೂಹಲ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.