ಬೆಂಗಳೂರು : ಪ್ರಸಕ್ತ ಚುನಾವಣೆಯಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಅನ್ನು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿದ್ದು, ಅದಕ್ಕೆ ತಕ್ಕಂತೆ ಸ್ಥಾನಮಾನಗಳನ್ನು ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗಿದೆ.
ದಲಿತ ಸಮುದಾಯದ ಕೆಲವು ಜನಪ್ರತಿನಿಗಳು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಉಪಮುಖ್ಯಮಂತ್ರಿ ವಿಚಾರವಾಗಿ ಈಗಾಗಲೇ ಘೋಷಿಸಲಾಗಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ವಾರ ದೆಹಲಿಯಲ್ಲಿ ನಡೆದ ಮಾತುಕತೆಯ ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ ಹೈಕಮಾಂಡ್ ಪತ್ರಿಕಾ ಗೋಷ್ಠಿಯಲ್ಲಿ ಘೋಷಣೆ ಕೂಡ ಮಾಡಿತ್ತು. ಅದರ ಪ್ರಕಾರ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್ ಒಬ್ಬರು ಮಾತ್ರ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಈ ನಿರ್ಧಾರ ಪರಿಶಿಷ್ಟರು, ಅಲ್ಪಸಂಖ್ಯಾತರು, ಲಿಂಗಾಯಿತ ಸಮುದಾಯಗಳ ಅಸಹನೆಗೆ ಕಾರಣವಾಗಿದೆ. ಅದರಲ್ಲೂ ಪರಿಶಿಷ್ಟ ಸಮುದಾಯದಿಂದ ಉಪಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಮತ್ತಿತರ ನಾಯಕರಿಗೆ ತೀವ್ರ ನಿರಾಸೆಯಾಗಿದೆ.
ಮೊದಲ ಸಂಪುಟದಲ್ಲಿ ಪರಮೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅವರ ಬೆಂಬಲಿಗರು ದೆಹಲಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿಯಾಗಿ ಲಾಬಿ ನಡೆಸಿದ್ದಾರೆ. ಮುಂದುವರೆದು ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ನಿರ್ಧಾರ ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಆರಂಭದಲ್ಲಿ ಸಮುದಾಯ ಹಾಗೂ ಪ್ರಾದೇಶಿಕತೆ ಆಧಾರದ ಮೇಲೆ 3ರಿಂದ 5 ಮಂದಿ ಉಪಮುಖ್ಯಮಂತ್ರಿಗಳನ್ನು ನಿಯೋಜಿಸಲು ಚರ್ಚೆಗಳು ನಡೆದಿದ್ದವು. ಆದರೆ ಡಿ.ಕೆ.ಶಿವಕುಮಾರ್ ಅವರು ಒಂದಕ್ಕಿಂತ ಹೆಚ್ಚು ಉಪಮುಖ್ಯಮಂತ್ರಿಗಳಿದ್ದರೆ ಅದರ ಗಂಭೀರತೆ ಹಾಳಾಗುತ್ತಿದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.
ಹೀಗಾಗಿ ಮೊದಲ ಅವಗೆ ಡಿ.ಕೆ.ಶಿವಕುಮಾರ್ ಮಾತ್ರ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೈಕಮಾಂಡ್ ಘೋಷಿಸಿತ್ತು. ಪಟ್ಟು ಬಿಡದ ಇತರ ಸಮುದಾಯದ ನಾಯಕರು ಮತ್ತೊಂದು ಸುತ್ತು ಹೈಕಮಾಂಡ್ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.