ಬೆಂಗಳೂರು-ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂದು ಇನ್ನೂ ಅಧಿಕೃತಗೊಂಡಿಲ್ಲ.
ಸದ್ಯ ಬಾದಾಮಿ ಶಾಸಕರಾಗಿರುವ ಅವರು ಬಾದಾಮಿ ತೊರೆದು ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದು ಪಟ್ಟಿಯಲ್ಲಿ ಕೋಲಾರ, ವರುಣ ಕ್ಷೇತ್ರಗಳಿದ್ದು ಆದರೆ ಅಂತಿಮವಾಗಿ ಯಾವ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ ಎಂಬ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ರಾಜಕೀಯ ಮರುಹುಟ್ಟು ಕೊಟ್ಟಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನ್ನು ಅನುಭವಿಸಿದ್ದರು. ಆದರೆ, ಇದೇ ಸಂದರ್ಭದಲ್ಲಿ ಬಾದಾಮಿ ಸಿದ್ದು ಕೈಹಿಡಿದಿತ್ತು.
ಗೆಲ್ಲಿಸಿದ ಜನರಿಗಾಗಿ ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಒಂದಿಷ್ಟು ಕೆಲಸವನ್ನು ಮಾಡಿದ್ದರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಕಾರಣಕ್ಕಾಗಿ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2023ರ ಚುನಾವಣೆಯಲ್ಲಿ ಬಾದಾಮಿಯಲ್ಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ.
ಇನ್ನು ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆಗಾಗಿ ಹಾಲಿ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಕ್ಷೇತ್ರ ತ್ಯಾಗ ಮಾಡಿದ್ದರು. ಆದರೆ ಅವರಿಗೆ ಅದರಿಂದ ಏನೂ ಲಾಭವಾಗಿರಲಿಲ್ಲ. ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಿಮ್ಮನಕಟ್ಟಿ ಸಿದ್ದರಾಮಯ್ಯ ಇದ್ದ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದರು. ಕ್ಷೇತ್ರತ್ಯಾಗ ಮಾಡಿದರೂ ಯಾವುದೇ ಲಾಭ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ನಡುವೆ ಚಿಮ್ಮನಕಟ್ಟಿ ಪುತ್ರ ಭೀಮಸೇನ ಕೂಡಾ ಕ್ಷೇತ್ರದಲ್ಲೇ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದಾರೆ. ಬಹಿರಂಗವಾಗಿಯೇ ಸ್ಪರ್ಧೆಯ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಕಡಿಮೆ ಇದೆ. ಅವರ ಆಪ್ತರು ನೀಡುವ ಮಾಹಿತಿಯೂ ಇದನ್ನು ಪುಷ್ಠೀಕರಿಸುತ್ತದೆ.
ನಂತರದಲ್ಲಿ ಸಿದ್ದರಾಮಯ್ಯ ಮುಂದಿರುವ ಆಯ್ಕೆ ಕೋಲಾರ ಹಾಗೂ ವರುಣ.ಸ್ವಕ್ಷೇತ್ರವಾಗಿರುವ ವರುಣಾವನ್ನು ಅವರ ಪುತ್ರ ಯತೀಂದ್ರ ಅವರಿಗೆ ಸಿದ್ದರಾಮಯ್ಯ ಬಿಟ್ಟುಕೊಟ್ಟಿದ್ದಾರೆ. ಆದರೆ ಕೋಲಾರದಿಂದಲೂ ಸ್ಪರ್ಧೆ ನಡೆಸುವಂತೆ ಸಿದ್ದರಾಮಯ್ಯಗೆ ಆಹ್ವಾನ ಇದೆ. ಜೊತೆಗೆ ಚಾಮರಾಜಪೇಟೆಯಲ್ಲಿ ಸ್ಪರ್ಧಿಸುವಂತೆಯೂ ಜಮೀರ್ ಅಹ್ಮದ್ ಖಾನ್ ಬಹಿರಂಗ ಆಹ್ವಾನ ನೀಡಿದ್ದರು.
ಆದರೆ ಕೋಲಾರ ಅಥವಾ ವರುಣಾ ಕ್ಷೇತ್ರದ ಪೈಕಿ ಒಂದು ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ಕೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ವರುಣಾ ಆಯ್ಕೆ ಮಾಡಿದ್ದಲ್ಲಿ, ಅವರ ಪುತ್ರ ಯತೀಂದ್ರ ಸ್ಪರ್ಧೆ ಆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ಇದನ್ನು ಸ್ವತಃ ಅವರು ಖಚಿತಪಡಿಸಿದ್ದಾರೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ತಮ್ಮ ಮುಂದಿನ ನಡೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಅಂತಿಮ ಆಯ್ಕೆ ಯಾವುದು ಎಂಬುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.