ಬೆಂಗಳೂರು: ಫ್ಲೆಕ್ಸ್ ಹಾಕುವ ವಿಚಾರವಾಗಿ ವಿಜಯನಗರದ ಎಂ.ಸಿ.ಲೇಔಟ್ನ ಬಿಜಿಎಸ್ ಆಟದ ಮೈದಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಿನ್ನೆ ಸಂಜೆ ಮಾರಾಮಾರಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ.
ಎಂಟು ಮಂದಿ ಗಾಯ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ.
ಘಟನೆ ಹಿನ್ನಲೆ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ವಿಜಯನಗರದ ಎಂಸಿಲೇಔಟ್ನ ಬಿಜಿಎಸ್ ಆಟದ ಮೈದಾನದಲ್ಲಿ ನಾಳೆ ಕಾಂಗ್ರೆಸ್ ಕಾರ್ಯಕ್ರಮ ಆಯೋಜಿಸಿದ್ದ ಹಿನ್ನಲೆಯಲ್ಲಿ ನಿನ್ನೆ ಸಂಜೆ ಬ್ಯಾನರ್ ಕಟ್ಟುತ್ತಿದ್ದರು.
ಆ ಸಂದರ್ಭದಲ್ಲಿ ಪೂರ್ವ ಸಿದ್ದತೆ ಪರಿಶೀಲಿಸಲು ಮಹಿಳಾ ಕಾರ್ಯಕರ್ತೆಯರು ಆಗಮಿಸಿದ್ದ ವೇಳೆ ಏಕಾಏಕಿ ಮೈದಾನದೊಳಗೆ ಬಿಜೆಪಿ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದಾರೆ.
ಗಲಾಟೆ ವೇಳೆ ಕೆಲ ಮಹಿಳೆಯರು ಶಾಮೀಲಾಗಿದ್ದು, ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಕಲ್ಲು ತೂರಾಟ ನಡೆಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿ ಗುಂಪು ಚದುರಿಸಿದ್ದಾರೆ.
ಹೆಡ್ಕಾನ್ಸ್ಟೆಬಲ್ನಿಂದ ದೂರು: ಗೋವಿಂದರಾಜನಗರ ಠಾಣೆಯ ಹೆಡ್ಕಾನ್ಸ್ಟೆಬಲ್ ವರದರಾಜು ಎಂಬುವರು ಈ ಸ್ಥಳಕ್ಕೆ ತುರ್ತಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವೇಳೆ ಎರಡು ಗುಂಪುಗಳು ಪರಸ್ಪರ ಘೋಷಣೆ ಕೂಗುತ್ತಾ ಮರದ ದೊಣ್ಣೆಗಳನ್ನು ಹಿಡಿದು ಕಲ್ಲುಗಳನ್ನು ತೂರಾಟ ನಡೆಸಿದಾಗ ಅವು ಹೆಡ್ಕಾನ್ಸ್ಟೆಬಲ್ ಹಾಗೂ ಮತ್ತೊಬ್ಬ ಸಿಬ್ಬಂದಿ ನೇತಾಜಿ ಅವರಿಗೆ ತಗುಲಿ ಗಾಯಗೊಂಡಿದ್ದಾರೆ.
ಇವರಿಬ್ಬರು ವಿಜಯನಗರದ ಗಾಯಿತ್ರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿ ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದ 36 ಮಂದಿ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವರದರಾಜು ಅವರು ದೂರು ನೀಡಿದ್ದಾರೆ.
ಜೀವ ಬೆದರಿಕೆ ದೂರು: ಇದೇ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಪ್ರೇಮಲತಾ ಎಂಬುವರು 10 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನೆ ಸಂಜೆ 5 ಗಂಟೆ ಸುಮಾರಿನಲ್ಲಿ ಬಿಜಿಎಸ್ ಮೈದಾನದ ಬಳಿ ಪೂರ್ವ ಸಿದ್ದತೆ ಪರಿಶೀಲಿಸುತ್ತಿದ್ದಾಗ ಬಿಜೆಪಿಯವರು ಏಕಾಏಕಿ ಮೈದಾನದೊಳಗೆ ಬಂದು ತಮ್ಮ ಕಾರ್ಯಕ್ರಮ ವಿರೋಧಿಸುವುದಾಗಿ ಘೋಷಣೆ ಕೂಗುತ್ತಾ ಕಲ್ಲು ತೂರಾಟ ನಡೆಸಿ ಗಾಯಗೊಳಿಸಿದ್ದಲ್ಲದೆ ಬಟ್ಟೆಗಳನ್ನು ಎಳೆದಾಡಿ ಮಾನಹಾನಿ ಮಾಡಿದ್ದಾರೆ.
ತಮ್ಮ ಮಾಂಗಲ್ಯ ಸರ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮಾರುತಿ ಕಾರಿನಲ್ಲಿ ಮಾರಕಾಸ್ತ್ರಗಳು ಹಾಗೂ ಎರಡು ಕ್ಯಾನ್ಗಳಲ್ಲಿ ಪೆಟ್ರೋಲ್ ತಂದಿದ್ದರು. ಅವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರೇಮಲತಾ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಬೆದರಿಕೆ ದೂರು: ನಿನ್ನೆ ಸಂಜೆ 4.30ರ ಸುಮಾರಿನಲ್ಲಿ ಸ್ನೇಹಿತೆಯರೊಂದಿಗೆ ಬಿಜಿಎಸ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ನೋಡಲು ಹೋಗಿದ್ದಾಗ ಗುಂಪೊಂದು ತಮ್ಮ ಬಳಿ ಬಂದು ಕಲ್ಲುಗಳಿಂದ, ಕೈಗಳಿಂದ ಹಲ್ಲೆ ನಡೆಸಿ ಇಬ್ಬರ ಮಾಂಗಲ್ಯ ಸರ ಹಾಗೂ ಇನ್ನಿಬ್ಬರ ಸರಗಳನ್ನು ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಎಂಟು ಮಂದಿ ವಿರುದ್ಧ ಗೋವಿಂದರಾಜನಗರ ಠಾಣೆಗೆ ರಮ್ಯಾ ಎಂಬುವರು ದೂರು ನೀಡಿದ್ದಾರೆ.
ಈ ಬಗ್ಗೆ ದೂರು, ಪ್ರತಿ ದೂರು ಸೇರಿದಂತೆ ದಾಖಲಾಗಿರುವ ಮೂರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಗೋವಿಂದರಾಜನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಂದೋಬಸ್ತ್: ನಿನ್ನೆಯ ಘಟನೆ ಹಿನ್ನಲೆಯಲ್ಲಿ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.