ಹುಬ್ಬಳ್ಳಿ: ಬಿಜೆಪಿಯನ್ನು ಸೋಲಿಸುವುದೊಂದೇ ನಮ್ಮ ಗುರಿಯಾಗಬೇಕು. ಈ ಸಲ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಿವಿಲ್ ವಾರ್ (ನಾಗರಿಕ ದಂಗೆ) ಶುರುವಾಗಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸ್ಥಳೀಯ ಜಾ.ದಳ ಮುಖಂಡರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡ ನಂತರ ಮಾತನಾಡಿದ ಅವರು, ನೀವು ಜಾ.ದಳ ಬಿಟ್ಟು ಬಂದಿದ್ದು ಒಳ್ಳೆಯದಾಯಿತು. ಟಿಕೆಟ್ ಯಾರಿಗೇ ಸಿಕ್ಕರೂ ಅವರನ್ನು ಗೆಲ್ಲಿಸೋಣ. ಬಿಜೆಪಿಯನ್ನು ಸೋಲಿಸುವುದು ಮುಖ್ಯ ಗುರಿಯಾಗಬೇಕು ಎಂದು ಹೇಳಿದರು.
ಹೊಡಿ, ಬಡಿ, ಕಡಿ ಎನ್ನುವ ಮೂಲಕ ದೇಶದಲ್ಲಿ ಬಿಜೆಪಿಯವರು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಸಾಮರಸ್ಯ ಹಾಳುಗೆಡವಿ ಅಶಾಂತಿ ಮೂಡಿಸುವುದೇ ಅವರ ಉದ್ದೇಶ. ದ್ವೇಷ ಕಕ್ಕುವ ಇಂತಹವರು ಇರಬೇಕಾ? ಎಂದು ಪ್ರಶ್ನಿಸಿದರು.
ಅಶ್ವತ್ಥ ನಾರಾಯಣ ಹೇಳಿಕೆ ಸರಿಯೇ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಏನರ್ಥ? ಜನರನ್ನು ರಕ್ಷಿಸಬೇಕಾದ ಸಚಿವರೇ (ಅಶ್ವತ್ಥ ನಾರಾಯಣ) ಈ ರೀತಿ ಹೇಳಿದ್ದು ಸರೀನಾ? ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇದು ಸರೀನಾ ಎನ್ನುವುದನ್ನು ಹೇಳಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದವರು ಇವರು. ಆರ್ಎಸ್ಎಸ್ನವರು ಈ ರೀತಿ ಹೇಳಿಕೆ ಕೊಡಿಸಿದ್ದಾರೆ. ರಾಜ್ಯದಲ್ಲಿ ರೈತರು, ಬಡವರು, ದಲಿತರು, ಅಲ್ಪಸಂಖ್ಯಾತರ ಬಗ್ಗೆ ಚರ್ಚೆಯಾಗಬೇಕು. ಅದನ್ನು ಬಿಟ್ಟು ಹೊಡಿ, ಬಡಿ, ಕಡಿ ಎನ್ನುತ್ತಿದ್ದಾರೆ ಎಂದು ಹೇಳಿದರು.
ವಜಾಗೊಳಿಸಿ: ಇಂತಹ ಹೇಳಿಕೆ ನೀಡಿದ ಅಶ್ವತ್ಥ ನಾರಾಯಣ ಅವರನ್ನು ತಕ್ಷಣ ಸಚಿವ ಸಂಪುಟದಿಂದ ರಾಜ್ಯಪಾಲರು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರಲ್ಲದೇ, ನಾನು ದೂರು ಕೊಡಲ್ಲ. ಸಚಿವರ ವಿರುದ್ಧ ಪೊಲೀಸರೇ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ, ರೈತರ, ಬಡವರ, ದಲಿತರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬರುವ ಚುನಾವಣೆಯಲ್ಲಿ ಟಿಪ್ಪು ಹಾಗೂ ಸಾವರ್ಕರ್ ಎಂದು ಬರೆದುಕೊಳ್ಳಲಿ. ಇದನ್ನು ಜನರು ತೀರ್ಮಾನ ಮಾಡಲಿ ಅವರಿಗೆ ಪ್ರಚೋದನೆ ನೀಡುವ ಮೂಲಕ ಇದಕ್ಕೆಲ್ಲಾ ಪ್ರೋತ್ಸಾಹ ನೀಡುತ್ತಿರುವುದು ಖಂಡನೀಯ.
-ಸಿದ್ದರಾಮಯ್ಯ, ವಿಪಕ್ಷ ನಾಯಕ