ಬೆಂಗಳೂರು : : ರಾಜ್ಯದ ಬಿಜೆಪಿ ಸರ್ಕಾರ ತೌಡು ಕುಟ್ಟುವ ಕೆಲಸ ಮಾಡಿಲ್ಲ. ತೌಡು ಕುಟ್ಟುವುದು ಏನಿದ್ದರೂ ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸ. ಭತ್ತ ಕುಟ್ಟಿ ಅಕ್ಕಿ ತೆಗೆಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ ತೌಡು ಕುಟ್ಟಿದಂತಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಟೀಕೆಗೆ ವಿಧಾನಸಭೆಯಲ್ಲಿಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿ, ತೌಡು ಕುಟ್ಟುವ ಕೆಲಸ ಕಾಂಗ್ರೆಸ್ನವರು ಮಾಡಿದ್ದಾರೆ. ಆ ಅನುಭವದ ಮೇಲೆ ವಿರೋಧ ಪಕ್ಷದ ನಾಯಕರು ಆ ರೀತಿ ಮಾತನಾಡಿದ್ದಾರೆ. ನಾವು ನಿಖರವಾಗಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಭತ್ತದಿಂದ ಅಕ್ಕಿ ತೆಗೆಯುವ ಕೆಲಸ ಮಾಡಿದ್ದೇವೆ. ತೌಡು ಕುಟ್ಟುವ ಕೆಲಸ ಮಾಡಿಲ್ಲ ಎಂದರು. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಅವರು ಎಷ್ಟು ಭಾಗ್ಯಗಳನ್ನು ಕೊಟ್ಟರು, ಯಾವ ಭಾಗ್ಯಗಳು ಏನಾದವು ಎಂಬುದು ಗೊತ್ತಿದೆ. ಹಿಂದಿನ ಸರ್ಕಾರಗಳು ಪ್ರಣಾಳಿಕೆಯಲ್ಲಿ ಹೇಳಿದ್ದನೆಲ್ಲ ಎಷ್ಟು ಮಾಡಿವೆ ಎಂಬುದು ನನಗೆ ಗೊತ್ತಿದೆ. ಅವುಗಳನ್ನೆಲ್ಲ ವಿವರ ನೀಡಲು ಹೋಗಲ್ಲ ಎಂದರು.
ಕೋವಿಡ್ನ ಆರ್ಥಿಕ ಹಿಂಜರಿಕೆಯ ನಡುವೆಯೂ ಅಮೃತ ಯೋಜನೆ, ಶಾಲಾ ಕೊಠಡಿಗಳ ನಿರ್ಮಾಣ, ಅಂಗನವಾಡಿ, ಆಸ್ಪತ್ರೆ ಕಟ್ಟಡಗಳ ನಿರ್ಮಾಣ, ರೈತ ಕಲ್ಯಾಣ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿ ಸರ್ಪ್ಲಸ್ ಬಜೆಟ್ನ್ನು ಕೊಡಲು ಸಾಧ್ಯವಾಗಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಲ್ಲಿ ಶೇ. 38 ರಷ್ಟು ಭರವಸೆಗಳನ್ನು ಮಾತ್ರ ಈಡೇರಿಸಿದೆ. ಹಲವು ಉದಾಹರಣೆಗಳನ್ನು ಕೊಡಬಲ್ಲೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಗಳಂತೆ 5 ವರ್ಷಕ್ಕೆ 50 ಸಾವಿರ ಕೋಟಿ ರೂ.ಗಳನ್ನು ಕೊಡುತ್ತೇವೆ ಎಂದರು. ಆದರೆ 5 ವರ್ಷಗಳಲ್ಲಿ ಕೊಟ್ಟಿದ್ದ 7500 ಕೋಟಿ ರೂ. ಮಾತ್ರ ಎಂದು ಮುಖ್ಯಮಂತ್ರಿಗಳು ಹೇಳಿ, ಬಿಜೆಪಿ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.