ಔರಾದ್: ಬಿಜೆಪಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ, ಆಪರೇಷನ್ ಕಮಲ ಮಾಡಿ ಆಡಳಿತ ನಡೆಸುತ್ತಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಔರಾದ್ ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು.113 ಸ್ಥಾನಗಳಲ್ಲಿ ಗೆದ್ದರೆ ಮಾತ್ರ ಆ ಸರ್ಕಾರಕ್ಕೆ ಜನಾಶೀರ್ವಾದ ಇದೆ ಎಂದರ್ಥ. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 104, ಜೆಡಿಎಸ್ 37 ಮತ್ತು ಕಾಂಗ್ರೆಸ್ 80 ಸ್ಥಾನ ಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಪಕ್ಷ 38.18% ಮತ, ಬಿಜೆಪಿ 36.42% ಮತಗಳನ್ನು ಪಡೆದಿತ್ತು. ಬಿಜೆಪಿ ನಮಗಿಂತ ಕಡಿಮೆ ಪ್ರಮಾಣದ ಮತಗಳನ್ನು ಪಡೆದಿದ್ದರೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿತ್ತು. ಇದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಸರ್ಕಾರ ರಚನೆಗೆ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ ರಾಜ್ಯಪಾಲರು, ಬಹುಮತ ಸಾಬೀತು ಮಾಡುವಂತೆ ತಿಳಿಸಿದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದ್ದರಿಂದ ಅವರ ಸರ್ಕಾರ ಬಿದ್ದುಹೋಯಿತು. ನಂತರ ನಾವು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ, ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಕುಮಾರಸ್ವಾಮಿ ಸರ್ಕಾರ 1 ವರ್ಷ 2 ತಿಂಗಳಿಗೆ ಬಿದ್ದುಹೋಯಿತು. ಇದಕ್ಕೆ ಕಾರಣ ಕುಮಾರಸ್ವಾಮಿ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡು ಶಾಸಕರು, ಸಚಿವರ ಭೇಟಿಗೆ ಅವಕಾಶ ನೀಡಲಿಲ್ಲ. ಶಾಸಕರ ಅಸಮಾಧಾನದಿಂದ ಸರ್ಕಾರ ಬಿದ್ದು ಹೋಯಿತು ಎಂದರು.
ನಾಯಿ ಕಾದಿತ್ತು, ಅನ್ನ ಹಳಸಿತ್ತು ಎಂಬ ಗಾದೆ ಮಾತಿನಂತೆ ಈ ಸಂದರ್ಭವನ್ನು ಕಾಯುತ್ತಿದ್ದ ಬಿಜೆಪಿಯವರು ಒಬ್ಬೊಬ್ಬ ಶಾಸಕರಿಗೆ 15 ರಿಂದ 20 ಕೋಟಿ ಹಣ ನೀಡಿ ಖರೀದಿಸಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡಿದರು. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ನಾವು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆವು. ಸಮ್ಮಿಶ್ರ ಸರ್ಕಾರವನ್ನು ಕುಮಾರಸ್ವಾಮಿ ಅವರಿಂದ ಉಳಿಸಿಕೊಳ್ಳಲಾಗಲಿಲ್ಲ. ಅಲ್ಲಮಪ್ರಭು ಅವರ ಮಾತಿನಂತೆ ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ, ಹೀಗೆ ಕುಮಾರಸ್ವಾಮಿಗೆ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿ ಪೂರ್ಣ 5 ವರ್ಷಗಳ ಕಾಲ ಆಡಳಿತ ನಡೆಸಿದ್ದೆ, ದೇವರಾಜ ಅರಸು ಅವರನ್ನು ಬಿಟ್ಟರೆ ಪೂರ್ಣಾವಧಿಗೆ ಆಡಳಿತ ನಡೆಸಿದ್ದು ನಾನು ಮಾತ್ರ ಎಂದು ಹೇಳಿದರು.
2013ರಲ್ಲಿ ನಾವು ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ಅದರ ಜತೆಗೆ 30 ಹೊಸ ಕಾರ್ಯಕ್ರಮಗಳನ್ನು ಕೂಡ ಜಾರಿ ಮಾಡಿದ್ದೆವು. ಇದು ಬಸವಾದಿ ಶರಣರ ಕರ್ಮಭೂಮಿ, ನಾವು ಕೂಡ ಬಸವಾದಿ ಶರಣರಂತೆ ನುಡಿದಂತೆ ನಡೆದಿದ್ದೇವೆ. ಬಿಜೆಪಿ ಪಕ್ಷ 2018ರಲ್ಲಿ 600 ಭರವಸೆಗಳನ್ನು ನೀಡಿ ಅವುಗಳಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಬೇರೆಯವರ ತಾಕತ್, ಧಮ್ ಪ್ರಶ್ನೆ ಮಾಡುವ ಬಸವರಾಜ ಬೊಮ್ಮಾಯಿ ಒಂದೇ ವೇದಿಕೆಯ ಮೇಲೆ ಚುನಾವಣಾ ಪ್ರಣಾಳಿಕೆ ಮತ್ತು ಅವುಗಳ ಈಡೇರಿಕೆ ಬಗ್ಗೆ ಚರ್ಚೆಗೆ ಬರಲಿ. ಸ್ಥಳವನ್ನು ಕೂಡ ಬೊಮ್ಮಾಯಿ ಅವರೇ ನಿಗದಿ ಮಾಡಲಿ ಎಂದು ಸವಾಲು ಹಾಕಿದ್ದೆ, ಅದರ ಬಗ್ಗೆ ಈ ವರೆಗೆ ಬೊಮ್ಮಾಯಿ ಮಾತನಾಡಿಲ್ಲ. ಬಿಜೆಪಿ ಬಂದಮೇಲೆ ಒಂದೇ ಒಂದು ಹೊಸ ಮನೆ ನಿರ್ಮಾಣ ಮಾಡಿಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ದೂರಿದರು.
ಇಂದು ಬೆಲೆಯೇರಿಕೆ ಗಗನಕ್ಕೇರಿದೆ. ಪೆನ್ನು, ಪೆನ್ಸಿಲ್, ಬುಕ್, ಮಂಡಕ್ಕಿ, ಹಾಲು, ಮೊಸರಿನ ಮೇಲೆ 18% ತೆರಿಗೆ ಹಾಕಿ ಬಡವರು ಬದುಕದಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಾವು ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿಯಂತೆ ವರ್ಷಕ್ಕೆ 24,000 ರೂ. ಮತ್ತು ಪ್ರತೀ ಮನೆಗೆ ತಿಂಗಳಿಗೆ 200 ಯುನಿಟ್ ಅನ್ನು ಉಚಿತವಾಗಿ ನೀಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಕನ್ನಡ, ಹಿಂದಿ, ಮರಾಠಿ ಯಾವ ಭಾಷೆಯೂ ಪೂರ್ತಿಯಾಗಿ ಬಾರದ ಪ್ರಭು ಚೌಹಾನ್ ಅವರನ್ನು ನಿಮ್ಮ ಶಾಸಕರಾಗಿ ಮತ್ತೆ ಮಾಡಿಕೊಳ್ತೀರ? ನರೇಂದ್ರ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, ಆಗಿದೆಯಾ? ಮೋದಿ ಅವರ ಮೇಲೆ ಕೋಪ ಬರಲ್ವಾ? ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ 50 ಕೆ.ಜಿ ಡಿಎಪಿ ಬೆಲೆ 450 ಇತ್ತು, ಇಂದು ಅದು 1350 – 1400 ರೂ. ಆಗಿದೆ.
ಈ ಭಾಗದಲ್ಲಿ ಬೆಳೆದ ತೊಗರಿ ಬೆಳೆ ಹಾಳಾಗಿದೆ, ಒಂದು ರೂಪಾಯಿ ಪರಿಹಾರ ನೀಡಿಲ್ಲ. ಹೆಕ್ಟೇರ್ ಗೆ 10,000 ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ, ಕೊಡ್ತಾರೋ ಇಲ್ವೋ ಗೊತ್ತಿಲ್ಲ ಕಾರಣ ಈ ಹಿಂದೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಹಲವು ಜನರಿಗೆ ಪರಿಹಾರ ನೀಡಿಲ್ಲ. ಬೀದರ್, ಯಾದಗಿರಿಗೆ ಭೇಟಿ ನೀಡಿ ರೈತರ ಕಷ್ಟ ಕೇಳಿದಿಯೇನಪ್ಪಾ ಬಿ.ಸಿ ಪಾಟೀಲ್ ಎಂದು ಕೇಳಿದರೆ ಹುಷಾರಿರಲಿಲ್ಲ, ಅದಕ್ಕೆ ಹೋಗಿಲ್ಲ ಎಂದರು. ಕಬ್ಬು, ತೆಂಗು, ರಾಗಿ, ಜೋಳ, ಭತ್ತ ಈ ಯಾವ ಬೆಳೆನಷ್ಟಕ್ಕೂ ಪರಿಹಾರ ನೀಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.