ಸಚಿವರಾಗಲಿಲ್ಲ ಎಂಬ ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ
ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಮಂತ್ರಿ ಆಗಬೇಕಿತ್ತು, ಅವರ ಪಕ್ಷ ಕೊಟ್ಟಿಲ್ಲ. ಹಿಗಾಗಿ ಹತಾಶೆಯಿಂದ ಹೀಗೆ ಮಾತಾಡುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿದರೆ ಅಯ್ಯೋ ಅನ್ನಿಸುತ್ತೆ. ರಮೇಶ್ ಜಾರಕಿಹೊಳಿಯನ್ನು ಬಿಜೆಪಯವರು ಆಸ್ಪತ್ರೆಗೆ ತೋರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ನ್ನು ಸೋಮವಾರ ಸಿಡಿಸಿದ್ದರು. ಸದ್ಯ ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸಿಬಿಐ ತನಿಖೆ ಮಾಡಿಸಲು ಜಾರಕಿಹೊಳಯನ್ನು ಯಾರು ತಡೆದಿದ್ದಾರೆ. ನಾನೇನು ಪ್ರತಿಕ್ರಿಯೆ ಕೊಡಲ್ಲ, ಯಾವ ತನಿಖೆ ಬೇಕಾದರೂ ಮಾಡಲಿ ಎಂದು ವ್ಯಂಗ್ಯವಾಡಿದವರು.
ಇನ್ನು ವಿದೇಶದಲ್ಲಿ ಡಿ.ಕೆ.ಶಿವಕುಮಾರ್ ಫ್ಲ್ಯಾಟ್ ಇದೆ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ಶೇ. 10 ಆದರೂ ಬರುವ ಹಾಗೆ ಮಾಡಿ, ನಾನೇ ಹೋಗಿ ಬರುತ್ತೇನೆ. ಐ ವಿಷ್ ಹಿಮ್ ಆಲ್ ದ ಬೆಸ್ಟ್, ಶುಭವಾಗಲಿ ಯಶಸ್ಸಾಗಲಿ ಎಂದು ಜಾರಕಿಹೊಳಿಗೆ ಟಾಂಗ್ ನೀಡಿದರು.
ಚುನಾವಣೆಯಲ್ಲಿ ಭೇಟಿ ಮಾಡೋಣ ಎಂದಿದ್ದಾರೆ, ಭೇಟಿಯಾಗೋಣ. ಯಾವ ಆಸ್ತಿ, ಯಾವ ಆಡಿಯೋ ಬೇಕಾದರೂ ಮಾಡಿಕೊಳ್ಳಲಿ. ಅವರಲ್ಲಿ ಏನೇನು ಪಟ್ಟುಗಳು, ಆಸನಗಳು ಇದ್ದಾವೆ ತೋರಿಸಲಿ ನೋಡಿಕೋಳ್ತಿವಿ ಎಂದು ಜಾರಕಿಹೊಳಿಗೆ ತಿರುಗೇಟು ನೀಡಿದರು.
ಬಾಲಚಂದ್ರ ಜಾರಕಿಹೊಳಿ ಮನವಿ
ಈ ಬಗ್ಗೆ ಗೋಕಾಕ್ನಲ್ಲಿ ಪ್ರತಿಕ್ರಿಯಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪ ಪ್ರತ್ಯಾರೋಪ ಮುಂದುವರಿದರೆ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಗಳಿಗೆ ಡ್ಯಾಮೇಜ್ ಆಗುತ್ತದೆ. ಮೂರೂ ಕುಟುಂಬಗಳು ದೊಡ್ಡದಿವೆ. ಸಿಡಿ ಪ್ರಕರಣವನ್ನು ಇಲ್ಲಿಗೆ ಬಿಡಿ, ಮುಂದುವರಿಸಬೇಡಿ ಎಂದು ಮನವಿ ಮಾಡಿದ್ದಾರೆ.