ತೇರು ಎಳೆಯುವ ವಿಚಾರವಾಗಿ ಪೊಲೀಸರು, ಜನರ ನಡುವೆ ಗಲಾಟೆ: ಲಾಠಿ ಚಾರ್ಜ್‌

ಬಳ್ಳಾರಿ: ಯುಗಾದಿ ಹಬ್ಬದಂದು ತೇರು ಎಳೆಯುವ ವಿಷಯದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಗಲಾಟೆಯಾಗಿರುವ ಘಟನೆ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಜಾತ್ರೆಯಲ್ಲಿ ನಡೆದಿದೆ.

ತೆಕ್ಕಲಕೋಟೆಯ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಗಲಾಟೆ ನಡೆದಿದೆ.

ಯುಗಾದಿ ಪ್ರಯುಕ್ತ ಜಾತ್ರೆಯಲ್ಲಿ ತೇರು ಎಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ಅಗತ್ಯ. ಹೀಗಾಗಿ, ಸಾಂಪ್ರದಾಯಿಕವಾಗಿ ತೇರನ್ನು ಸ್ವಲ್ಪ ದೂರ ಎಳೆಯುವಂತೆ ಪೊಲೀಸರು ಸಲಹೆ ನೀಡಿದ್ದರು. ಅದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿಲ್ಲ. ತೇರನ್ನು ಪೂರ್ತಿ ಎಳೆಯುತ್ತೇವೆ ಎಂದು ಹಟ ಹಿಡಿದಿದ್ದಾರೆ.

ಜನಸಂದಣಿ ನಿಯಂತ್ರಿಸಲು ಪೊಲೀಸರು ಹಾಕಿದ್ದ ಬ್ಯಾರಿಕೇಟ್‌ಗಳನ್ನೇ ತಳ್ಳಿಕೊಂಡು ತೇರು ಎಳೆಯಲು ಮುಂದಾದರು. ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದರು. ಗಲಾಟೆಯಲ್ಲಿ ಪೊಲೀಸ್‌ ಒಬ್ಬರಿಗೆ ಗಾಯಗಳಾಗಿವೆ.

ಉದ್ವಿಗ್ನಗೊಂಡ ಜನರ ಗುಂಪು ಬ್ಯಾರಿಕೇಟ್‌ಗಳನ್ನು ಬೀಳಿಸಿ, ಕಲ್ಲು ಎತ್ತಿಹಾಕಿ ಹಾನಿಗೊಳಿಸಿತು.