ಟೆಲಿಪ್ರಾಂಪ್ಟರ್ ʼಕೈʼಕೊಟ್ಟಿದ್ದರ ಸತ್ಯಾಸತ್ಯತೆಯ ಹಿಂದಿನ ಸುಳ್ಳೇನು?

ವಾರೆನೋಟ

 

ದಾವೋಸ್ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್)ಯಲ್ಲಿ ಆನ್‌ಲೈನ್‌ ಮೂಲಕ ಆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿದ್ದವರೆಲ್ಲರೂ ಟೆಲಿಪ್ರಾಂಪ್ಟರ್ ಕೈಕೊಟ್ಟಿದ್ದು ನಿಜಾ ಎಂದೇ ನಂಬಿದ್ದಾರೆ. ಏಕೆಂದರೆ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿಯವರು ಒಂದರೆಕ್ಷಣ ಕಕ್ಕಾಬಿಕ್ಕಿಯಾಗಿ ಅತ್ತಿತ್ತ ತಿರುಗಿ ನೋಡುತ್ತಿದ್ದರು. ಆ ಕ್ಷಣಕ್ಕೆ ಅವರ ಮುಖದಲ್ಲಿ ಒಂದಿಷ್ಟು ಗಾಬರಿ ಇದ್ದದ್ದು ಬರೀ ಗಾಸಿಪ್ ಅಂತೂ ಅಲ್ಲ!

ಹಾಗಂತ ಟೆಲಿಪ್ರಾಂಪ್ಟರ್ ‘ಪ್ರಾಮ್ಟ್’ಆಗಿ ಕೆಲಸ ಮಾಡಲಿಲ್ಲ ಎನ್ನುವುದು ಎಷ್ಟು ಸರಿ? ಎಂಬುದು ಸದ್ಯಕ್ಕೆ ಐದು ಟ್ರಿಲಿಯನ್ ಡಾಲರ್ ಪ್ರಶ್ನೆ!

 

 

ಅವತ್ತಿಡೀ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಮುಖ ಆರ್ಥಿಕ ವಿಷಯಗಳಿಗಿಂತ ಟೆಲಿಪ್ರಾಮ್ಟ್ ಕೈಕೊಟ್ಟ ವಿಷಯವೇ ‘ಪ್ರಧಾನ’ ಸುದ್ಧಿಯಾಗಿಬಿಟ್ಟಿತು. ಯಾವಾಗಲೂ ‘ಪ್ರಧಾನಿ ಸುದ್ದಿ’ಯನ್ನೇ ‘ಪ್ರಧಾನ ಸುದ್ದಿ’ಯಾಗಿ ಪ್ರಸಾ(ಚಾ)ರ ಮಾಡುತ್ತಿದ್ದ ‘ಆಯ್ದ’ ಸುದ್ದಿವಾಹಿನಿಗಳೂ ಕೂಡಾ ಟೆಲಿಪ್ರಾಮ್ಟ್ ಕೈಕೊಟ್ಟ ಸುದ್ದಿಯನ್ನು ‘ಪ್ರಧಾನ ಸುದ್ದಿ’ಯಾಗಿ ಪ್ರಸಾರ ಮಾಡಿ ಅಚ್ಚರಿ ಮೂಡಿಸಿದ್ದವು. ಸೋಷಿಯಲ್ ಮೀಡಿಯಾಗಳಲ್ಲಂತೂ ಮೋದಿಯವರ ‘ಮೀಮ್’ಗಳ ಮಹಾಪ್ರವಾಹವೇ ಹರಿಯಿತು!

ಕಾಂಗ್ರೆಸ್, ಟಿಸಿಎಂ, ಆಪ್ ಮತ್ತಿತರ ಪಕ್ಷಗಳ ನಾಯಕರಂತೂ ಈ ‘ಸಣ್ಣ ಘಟನೆ’ಯನ್ನು ‘ಮಹಾ ಘಟನೆ’ ಎಂಬಂತೆ ಬಿಂಬಿಸಲು ಯತ್ನಿಸಿದರು. ರಾಹುಲ್ ಗಾಂಧಿ ಹಿಂದೆಂದೊ ‘ಪ್ರಧಾನಿ ಮೋದಿ ಅವರಿಗೆ ಟೆಲಿಪ್ರಾಮ್ಟರ್ ಇಲ್ಲದೇ ಮಾತನಾಡಲು ಬರುವುದಿಲ್ಲ’ ಎಂದು ಹೇಳಿದ್ದ ವಿಡಿಯೋ ತುಣುಕಿಗಂತೂ ಭಾರಿ ಬೇಡಿಕೆ ಬಂತು. ರಾಹುಲ್ ಗಾಂಧಿ ಎಷ್ಟು ‘ಪ್ರಾಮ್ಟ್’ ಆಗಿ ಹೇಳಿದ್ದಾರಲ್ಲ ಎಂಬ ಮೆಚ್ಚುಗೆ ನುಡಿಗಳ ಸುರಿಮಳೆಯಾಯ್ತು. ಫೇಸ್ಬುಕ್ಕು, ಟ್ವಿಟ್ಟರ್ರು, ಇನ್‌ಸ್ಟಾಗ್ರಾಮುಗಳಲ್ಲೂ ಇದೇ ಟ್ರೆಂಡು! ಆ ಹೊತ್ತಿಗೆ ಬಿಜೆಪಿ ಸೋಷಿಯಲ್ ಮೀಡಿಯಾ ಸೆಲ್ ಕೂಡಾ ಡಲ್ ಹೊಡೆದಿತ್ತು! ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೇ ತಬ್ಬಿಬ್ಬಾಗಿತ್ತು. ಏಕೆಂದರೆ ಬಿಜೆಪಿ ಸೋಷಿಯಲ್ ಮೀಡಿಯಾ ಸೆಲ್ಲಿಗೂ ಅದು ಟೆಲಿಪ್ರಾಮ್ಟರ್ ದೋಷವೋ ಅಥವಾ ತಾಂತ್ರಿಕ ದೋಷವೋ ಎಂಬುದು ಸ್ಪಷ್ಟವಾಗಿರಲಿಲ್ಲ.

ದೋಷವೇನು ಎಂಬುದು ಗೊತ್ತಾಗದಿದ್ದರೂ ರೋಷವಂತೂ ಇದ್ದೇ ಇತ್ತು. ಅದೆಷ್ಟೋ ಹೊತ್ತಿನ ನಂತರ ಬಿಜೆಪಿ ವಕ್ತಾರರು ಅದು ಟೆಲಿಪ್ರಾಮ್ಟರ್ ಕೈಕೊಟ್ಟಿದ್ದಲ್ಲ, ತಾಂತ್ರಿಕದೋಷದಿಂದ ಆದ ಲೋಪ ಎಂದು ಸಮಜಾಯಿಷಿ ನೀಡಿದರು.

ಆ ವೇಳೆಗೆ ಮೋದಿಯವರು ಒಂದೆಡರು ಸೆಕೆಂಡುಗಳ ಕಾಲ ಕಕ್ಕಾಬಿಕ್ಕಿಯಾಗಿದ್ದ ವಿಡಿಯೋ ತುಣುಕು ವೈರಲ್ಲಾಗಿದ್ದಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಾಚೆಗೂ ಜಿಗಿದಿತ್ತು. ರಾಜಕೀಯಾಸಕ್ತ ವಲಯದಲ್ಲೆಲ್ಲಾ ಅದರ ಚರ್ಚೆ ಷುರುವಾಗಿತ್ತು!!

ವಾಸ್ತವವಾಗಿ ಪ್ರಧಾನಿ ಮೋದಿ ಅವರು ಕಕ್ಕಾಬಿಕ್ಕಿಯಾಗಿದ್ದರೋ ಇಲ್ಲವೋ? ಆದರೆ, ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವ ‘ಬಿಜೆಪಿ ಸೆಲ್’ ಕಕ್ಕಾಬಿಕ್ಕಿಯಾಗಿದ್ದಂತೂ ನಿಜಾ.

ಇಷ್ಟೆಲ್ಲಾ ಆದಮೇಲೆ ಏನಾಯ್ತು ಅಂದರೆ- ಫ್ಯಾಕ್ಟ್ ಚೆಕ್ ಮಾಡೋ ಆಲ್ಟ್ ನ್ಯೂಸ್ ಪ್ರವೇಶವಾಯ್ತು! ಬಿಜೆಪಿಯ ಅದೆಷ್ಟೋ ತಿರುಚಿದ ವಿಡಿಯೋಗಳು ಮತ್ತು ಮಾರ್ಫ್ ಮಾಡಿದ ಫೋಟೋಗಳನ್ನು ಪತ್ತೆ ಹಚ್ಚಿ ಬಯಲಿಗೆಳೆದು, ಕೆಂಗಣ್ಣಿಗೆ ಗುರಿಯಾಗಿದ್ದ ಆಲ್ಟ್ ನ್ಯೂಸ್ ಬಿಜೆಪಿ ಪಾಲಿಗೆ ‘‘ಆಪದ್ಭಾಂಧವ’’ ಆಗಿದ್ದು ಆ ಹೊತ್ತಿನ ಸೋಜಿಗವೇ! ಅಷ್ಟಕ್ಕೂ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿ ಕಂಡು ಹಿಡಿದ ಸತ್ಯಾಂಶ ಏನೆಂದರೆ- ಮೋದಿ ‘ನೋಡಿಕೊಂಡು ಓದುತ್ತಿದ್ದ’ ಟೆಲಿಪ್ರಾಮ್ಟರ್ ಕೈ ಕೊಟ್ಟಿರಲಿಲ್ಲ! ಮೋದಿ ಭಾಷಣ ಪ್ರಾರಂಭಿಸುವ ಮುನ್ನ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕಾರಿ ಅಧ್ಯಕ್ಷ ಕ್ಲಾಸ್ ಸ್ಕ್ತ್ರ್ವಾಬ್ ಅವರು ಮೋದಿ ಅವರನ್ನು ಔಪಚಾರಿಕವಾಗಿ ಪರಿಚಯಿಸಬೇಕಿತ್ತು. ಆದರೆ, ಹಾಗಾಗಲಿಲ್ಲ. ಈ ಹೊತ್ತಿನಲ್ಲಿ ಮೋದಿಗೆ ನೆರವಾಗಲು ನಿಂತಿದ್ದ ತಾಂತ್ರಿಕ ಸಹಾಯಕರು, ‘ನನ್ನ ಮಾತು ನಿಮಗೆಲ್ಲರಿಗೂ ಕೇಳಿಸುತ್ತಿದೆಯೇ’ ಎಂದು ಕೇಳುವಂತೆ ಮೋದಿಗೆ ಸಲಹೆ ಮಾಡುತ್ತಾರೆ.

 

ಆರಂಭದಲ್ಲಿ ಆದ ಈ ಅಡೆತಡೆ ದಾಟಿದ ನಂತರ ಮೋದಿ ಭಾಷಣ ಮಾಡುವಾಗ (ಟೆಲಿಪ್ರಾಮ್ಟರ್ ಮೂಲಕ ಓದುವಾಗ) ಗ್ರಾಫಿಕ್ಸ್ ಎಂದು ತಾಂತ್ರಿಕ ಸಹಾಯಕರು ಹೇಳುತ್ತಾರೆ. ಈ ಹಂತದಲ್ಲಿ ಮೋದಿ ಕೊಂಚ ತಬ್ಬಿಬ್ಬಾದಂತೆ ಕಾಣುತ್ತಾರೆ. ಜಾಗತಿಕ ಆರ್ಥಿಕ ವೇದಿಕೆ ನೇರ ಪ್ರಸಾರ ಮಾಡುವಾಗ ಈ ತುಣುಕಿಗೆ ಹೆಚ್ಚಿನ ಒತ್ತು ನೀಡಿದೆ ಎಂಬುದು ಆಲ್ಟ್ ನ್ಯೂಸ್ ನಡೆಸಿದ ಸತ್ಯಶೋಧನೆ! ಈಗ ಸದ್ಯಕ್ಕೆ ದೂರದರ್ಶನದ ವಿಡಿಯೋ ಯೂಟೂಬ್ ನಲ್ಲಿ ಲಭ್ಯವಿದೆ. ಅದರಲ್ಲಿ ಮೋದಿ ಅವರು ತಬ್ಬಿಬ್ಬಾದ ಭಾಗಕ್ಕೆ ಕತ್ತರಿ ಬಿದ್ದಿದೆ. ಮೋದಿ ಎಂದಿನಂತೆ ಆಕರ್ಷಕವಾಗಿ ಭಾಷಣ ಮಾಡುತ್ತಾರೆ! ಆಲ್ಟ್ ನ್ಯೂಸ್ ಸತ್ಯ ಶೋಧನೆ ಆಗುವ ಮುನ್ನ ಪ್ರಧಾನಿ ತಬ್ಬಿಬ್ಬಾದ ವಿಡಿೋಂ ಎಷ್ಟೊಂದು ವೈರಲ್ಲಾಗಿದೆಯೆಂದರೆ- ವಿರೋಧಿಗಳ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದ ಬಿಜೆಪಿ ಸೋಷಿಯಲ್ ಮೀಡಿಯಾ ಸೆಲ್ ಕೂಡಾ ತಬ್ಬಿಬ್ಬಾಗಿಬಿಟ್ಟಿದೆ!

ಅಷ್ಟಾವಕ್ರಾ