ಸೆ.9 ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ: ಪ್ರಧಾನಿ ಮೋದಿ ಅಧ್ಯಕ್ಷತೆ

ಹೊಸದಿಲ್ಲಿ: ಬ್ರಿಕ್ಸ್ ದೇಶಗಳ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ) 13ನೇ ಶೃಂಗಸಭೆ ಇದೇ 9ರಂದು ನಡೆಯಲಿದೆ. ಈ ವರ್ಚುಯಲ್ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಭಯೋತ್ಪಾದಕನೆ ನಿಗ್ರಹ, ಕೋವಿಡ್ ಪಿಡುಗು ಸೇರಿದಂತೆ ಪ್ರಮುಖ ವಿಷಯಗಳು ಸಭೆಯಲ್ಲಿ ಚರ್ಚೆಯಾಗಲಿದೆ.

ಈ ಶೃಂಗಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸನಾರೋ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಭಾಗವಹಿಸುವರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ, ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್(ಎನ್‌ಡಿಬಿ) ಅಧ್ಯಕ್ಷ ಮಾರ್ಕೋಸ್ ಟ್ರಾಯ್‌ಜೋ, ಬ್ರಿಕ್ಸ್ ಉದ್ಯಮ ಮಂಡಳಿ ಅಧ್ಯಕ್ಷ ಓಂಕಾರ್ ಕನ್ವರ್, ಬ್ರಿಕ್ಸ್ ಮಹಿಳಾ ಉದ್ಯಮ ಮೈತ್ರಿ ಅಧ್ಯಕ್ಷೆ ಸಂಗೀತಾ ರೆಡ್ಡಿ ಪಾಲ್ಗೊಳ್ಳುವರು.

ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅಧ್ಯಕ್ಷತೆ ವಹಿಸುತ್ತಿರುವುದು ಎರಡನೇ ಬಾರಿ. 2016ರಲ್ಲಿ ಗೋವಾದಲ್ಲಿ ನಡೆದ ಶೃಂಗಸಭೆಗೂ ನರೇಂದ್ರ ಮೋದಿ ಅಧ್ಯಕ್ಷರಾಗಿದ್ದರು. ಸದೃಢತೆ ಮತ್ತು ಒಮ್ಮತಕ್ಕಾಗಿ ಬ್ರಿಕ್ಸ್ ಅಂತರ್ ಸಹಕಾರ ಎಂಬುದು ಈ ಬಾರಿಯ ಬ್ರಿಕ್ಸ್ ಸಮಾವೇಶದ ಧ್ಯೇಯವಾಕ್ಯವಾಗಿದೆ.

ಬ್ರಿಕ್ಸ್ ರಾಷ್ಟ್ರಗಳ ನಡುವೆ ಬಹುಪಕ್ಷೀಯ ವ್ಯವಸ್ಥೆ ಸುಧಾರಣೆ, ಭಯೋತ್ಪಾದನೆ ನಿಗ್ರಹ, ಜನ ಸಂವಹನ ಹೆಚ್ಚಳಕ್ಕೆ ಒತ್ತು, ಕೋವಿಡ್ ಸೋಂಕು ನಿಯಂತ್ರಣ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.

× Chat with us