ಸಂಡೇ ಸ್ಪೆಷಲ್‌ಗಾಗಿ ಕೋವಿಡ್‌ ನಿಯಮ ಮರೆತ ಜನ: ಮಾಂಸಕ್ಕಾಗಿ ಮುಗಿಬಿದ್ದ ಮಂದಿ!

ಮೈಸೂರು: ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮೈಸೂರು 3ನೇ ಸ್ಥಾನದಲ್ಲಿದೆ. ಹೀಗಿದ್ದರೂ ಜನಸಂದಣಿ ವಾತ್ರ ಕಡಿಮೆಯಾಗಿಲ್ಲ. ಅದಕ್ಕೆ ಇಂಬು ಕೊಡುವಂತೆ ಭಾನುವಾರ ಬೆಳಿಗ್ಗೆ ನಗರದಾದ್ಯಂತವಿರುವ ಮಾಂಸ ಮಾರಾಟ ಮಳಿಗೆಗಳಲ್ಲಿ ಜನಜಂಗುಳಿಯೇ ನೆರೆದಿತ್ತು.

ಕೊರೊನಾ ಹೆಚ್ಚುತ್ತಿರುವ ಕಾರಣ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸಾರಿಸಾರಿ ಹೇಳುತ್ತಿದೆ. ಆದರೆ, ಜನರು ಮಾತ್ರ ಸರ್ಕಾರ ಹಾಗೂ ಜಿಲ್ಲಾಡಳಿತದ ಮನವಿಯನ್ನು ಕಿವಿಗೇ ಹಾಕಿಕೊಳ್ಳುತ್ತಿಲ್ಲ.
ಹೀಗಾಗಿ ಭಾನುವಾರ ಬೆಳಿಗ್ಗೆ 6 ಗಂಟೆಯಿಂದಲೇ ಮಾಂಸ ಮಾರಾಟ ಮಳಿಗೆಗಳ ಮುಂದೆ ನೂರಾರು ಜನರು ಜಮಾಯಿಸಿದ್ದರು. ಕೋಳಿ, ಕುರಿ, ಮೇಕೆ ಹಾಗೂ ಮೀನು ಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಕೆಲ ಮಳಿಗೆಗಳ ಮುಂದೆ ಸರತಿ ಸಾಲು ಇತ್ತಾದರೂ, ಮತ್ತೆ ಕೆಲ ಮಳಿಗಳಲ್ಲಿ ನೂಕುನುಗ್ಗುಲು ಕಂಡುಬಂತು.

ಕೆಲ ಮಾಂಸ ಮಾರಾಟ ಮಳಿಗೆಗಳಲ್ಲಿ ಮದ್ಯರಾತ್ರಿಯಿಂದಲೇ ಮಾಂಸವನ್ನು ಕತ್ತರಿಸಿಟ್ಟುಕೊಂಡಿದ್ದರು. ಅರ್ದ, ಒಂದು, ಎರಡು ಕೆಜಿ ಮಾಂಸವನ್ನು ತೂಕ ಮಾಡಿ ಕವರ್‌ಗಳಲ್ಲಿ ಹಾಕಿಟ್ಟಿದ್ದರು. ಹೀಗಾಗಿ ಬೆಳಿಗ್ಗೆ 10 ಗಂಟೆಯ ಒಳಗಾಗಿ ನೂರಾರು ಕೆಜಿ ಮಾಂಸವನ್ನು ಮಾರಾಟ ಮಾಡಿ ಹಣ ಮಾಡಿಕೊಂಡರು.

9.50ರ ವೇಳೆಗೆ ಪೊಲೀಸರ ವಾಹನಗಳು ಮಳಿಗೆಗಳನ್ನು ಬಂದ್ ಮಾಡಿಸಿಕೊಂಡು ಬರತೊಡಗಿದರು. ಆದರೂ ಕೆಲ ಮಾಂಸ ಮಾರಾಟ ಮಳಿಗಗಳ ಮಾಲೀಕರು ಅರ್ದ ಶೆಟರ್‌ನ್ನು ಮುಚ್ಚಿ ಮಾಂಸ ಮಾರಾಟ ಮಾಡಿದರು. ಒಟ್ಟಾರೆ ದಿನೇ, ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಜನರು ಮಾತ್ರ ತಲೆ ಕೆಡಿಸಿಕೊಂಡಿಲ್ಲ ಎಂಬುದು ಸಾಭೀತಾಯಿತು.