ಸುರಿದು ಹೋಗಿದ್ದ ದ್ರಾಕ್ಷಿಗಾಗಿ ಮುಗಿಬಿದ್ದ ಜನತೆ !

ಮಂಡ್ಯ: ರಸ್ತೆಬದಿಯಲ್ಲಿ ಯಾರೋ ಸುರಿದುಹೋಗಿದ್ದ ದ್ರಾಕ್ಷಿಯನ್ನು ತೆಗೆದುಕೊಳ್ಳಲು ಜನರು ಮುಗಿಬಿದ್ದ ಘಟನೆ ನಗರದ ಹೊರವಲಯದಲ್ಲಿ ಶನಿವಾರ ನಡೆಯಿತು.
ಬೆಂಗಳೂರು-ಮೈಸೂರು ಹೆದ್ದಾರಿ ವಿ.ಸಿ. ಫಾರಂ ಗೇಟ್ ಸಮೀಪದ ಫುಟ್‌ಪಾತ್‌ನಲ್ಲಿ ದ್ರಾಕ್ಷಿ ಬೆಳೆದ ರೈತ ಅಥವಾ ವರ್ತಕರು ಒಂದು ಟನ್‌ಗಿಂತಲೂ ಹೆಚ್ಚು ಸೀಡ್ಲೆಸ್ ದ್ರಾಕ್ಷಿಯನ್ನು ಸುರಿದು ಹೋಗಿದ್ದರು.
ಇದನ್ನು ನೋಡಿದ ಸಾರ್ವಜನಿಕರು ಕೈಗೆ ಸಿಕ್ಕಿದಷ್ಟು ದ್ರಾಕ್ಷಿಯನ್ನು ದೋಚಿಕೊಳ್ಳಲು ಮುಂದಾದರೆ, ಬ್ಯಾಗ್‌ವುಳ್ಳವರು ಚೆನ್ನಾಗಿರುವ ದ್ರಾಕ್ಷಿಯನ್ನು ಆಯ್ದುಕೊಂಡು ತುಂಬಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಮತ್ತೊಂದೆಡೆ ರೈತನೋ ಅಥವಾ ವರ್ತಕನೋ ತನ್ನ ಅನನುಕೂಲದಿಂದ ಸುರಿದು ಹೋಗಿದ್ದ ದ್ರಾಕ್ಷಿಯನ್ನು ಕಂಡ ರೈತರು ದ್ರಾಕ್ಷಿಯನ್ನು ಮುಟ್ಟದೆ ಇಲ್ಲಿ ತಂದು ಸುರಿದವನ ಸಮಸ್ಯೆ ಏನಿತ್ತೋ ಎಂದು ಕನಿಕರ ವ್ಯಕ್ತಪಡಿಸುತ್ತಿದ್ದರು.
ಸಾರ್ವಜನಿಕರು ಸಿಕ್ಕಷ್ಟು ದೋಚಿಕೊಂಡು ಹೋದ ಬಳಿಕ ಸ್ಥಳದಲ್ಲಿದ್ದ ಅಳಿದುಳಿದ ಕೊಳೆತ ದ್ರಾಕ್ಷಿ ಕಸದಂತೆ ಕಂಡುಬಂದಿತು.