ಪಾಟ್ನಾ ಬಾಂಬ್ ಸ್ಫೋಟ ಪ್ರಕರಣ: 9 ಮಂದಿ ದೋಷಿಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2013 ರಲ್ಲಿ ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿ ವೇಳೆ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ 10 ಆರೋಪಿಗಳ ಪೈಕಿ 9 ಮಂದಿ ದೋಷಿಗಳು ಎಂದು ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಒಬ್ಬನನ್ನು ನಿರಪರಾಧಿ ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣ ನವೆಂಬರ್ 1ರಂದು ಪ್ರಕಟವಾಗಲಿದೆ.

ಬ್ಲ್ಯಾಕ್ ಬ್ಯೂಟಿ ಅಲಿಯಾಸ್ ಹೈದರ್ ಅಲಿ, ನಮನ್ ಅನ್ಸಾರಿ, ಮುಜಾಬುಲ್ ಅನ್ಸಾರಿ, ಇಮ್ತಿಯಾಜ್ ಅಲಂ, ಅಹಮದ್ ಹುಸೇನ್, ಫಿರೋಜ್ ಅಸ್ಲಾಂ, ಇಮ್ತಿಯಾಜ್ ಅನ್ಸಾರಿ, ಇಫ್ತಿಕಾರ್ ಅಲಂ ಮತ್ತು ಅಜರುದ್ದೀನ್ ಖುರೇಷಿ ಅವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಫಕ್ರುದ್ದೀನ್ ಎಂಬಾತನನ್ನು ನಿರಪರಾಧಿ ಎಂದು ಘೋಷಿಸಿದೆ.

ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಹುಂಕಾರ್ ಹೆಸರಿನಲ್ಲಿ ರ‍್ಯಾಲಿ ಹಮ್ಮಿಕೊಂಡಿದ್ದರು. ಈ ವೇಳೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 9 ಮಂದಿ ಮೃತಪಟ್ಟು ೬೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ದಾಳಿಯ ವೇಳೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ೭ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಮೊದಲ ಸ್ಫೋಟ ಪಾಟ್ನಾ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದರೆ, ಉಳಿದ ಬಾಂಬ್‌ಗಳು ನರೇಂದ್ರ ಮೋದಿ ಭಾಷಣ ಮಾಡಿದ ನಂತರ ಕೆಲವೇ ನಿಮಿಷಗಳಲ್ಲಿ ರ‍್ಯಾಲಿ ನಡೆದ ಮೈದಾನದಲ್ಲಿ ಸಂಭವಿಸಿತ್ತು.