ಪಂಜು ಗಂಗೊಳ್ಳಿ
ಅಭಿಯಾನದಿಂದ ಗಮನಾರ್ಹ ಬದಲಾವಣೆ, ಉತ್ತಮ ಸಮಾಜಕ್ಕೆ ಪ್ರೇರಣೆ
ಇತ್ತೀಚಿನ ವರ್ಷಗಳಲ್ಲಿ ‘ಅಭಿಯಾನ್’ ಎಂಬ ಹಿಂದಿ ಪದ ಬಹಳವಾಗಿ ಬಳಕೆಯಲ್ಲಿದೆ. ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಪಡಾವೋ ಬೇಟಿ ಬಚಾವೋ ಅಭಿಯಾನ್, ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್ …ಹೀಗೆ. ಹೀಗೆಯೇ, ಗಾಲಿ ಬಂದ್ ಅಭಿಯಾನ್ ಎಂಬ ಇನ್ನೊಂದು ಅಭಿಯಾನ ಇರುವುದು ಬಹುಶಃ ಹೆಚ್ಚಿನವರು, ಮುಖ್ಯವಾಗಿ ದಕ್ಷಿಣ ಭಾರತದವರು ತಿಳಿದಿರಲಿಕ್ಕಿಲ್ಲ. ಸ್ವಚ್ಛ ಭಾರತ್ ಅಭಿಯಾನ್ ಸ್ವಚ್ಛ ತೆಯ ಬಗ್ಗೆ ಆಗಿದ್ದರೆ, ಬೇಟಿ ಪಡಾವೋ ಬೇಟಿ ಬಚಾವೋ ಅಭಿಯಾನ್ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ರಕ್ಷಣೆಗಾಗಿದ್ದರೆ ಮತ್ತು ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್ ಗರ್ಭಿಣಿಯರ ಸುರಕ್ಷತೆಯ ಕುರಿತಾಗಿದ್ದರೆ ‘ಗಾಲಿ ಬಂದ್ ಅಭಿಯಾನ್’ ಬೈಗುಳ ನಿಲ್ಲಿಸುವ ಅಭಿಯಾನವಾಗಿದೆ! ಹೌದು, ಬೈಗುಳ ನಿಲ್ಲಿಸುವ ಅಭಿಯಾನ.
ಮೇಲೆ ಹೇಳಿದ ಮೊದಲ ಮೂರು ಅಭಿಯಾನ್‌ಗಳ ಹಿಂದಿರುವವರು ಯಾರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಗಾಲಿ ಬಂದ್ ಅಭಿಯಾನದ ಜನಕ ಯಾರು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇದರ ಜನಕ ಸುನಿಲ್ ಜಗ್ಲಾನ್ ಎನ್ನುವವರು. ಇದಕ್ಕೂ ಮೊದಲು ಇವರು ೨೦೧೫ರಲ್ಲಿ ‘ಸೆಲ್ಛಿ ವಿದ್ ಡಾಟರ್ (ಮಗಳೊಂದಿಗೆ ಸೆಲ್ಛಿ)’ ಎಂಬ ಒಂದು ಆಂದೋಲನವನ್ನು ಶುರು ಮಾಡಿದ್ದರು. ಈ ಆಂದೋಲನ ಹೆಣ್ಣು ಮಕ್ಕಳ ರಕ್ಷಣೆಗಾಗಿ ಅವರು ಶುರು ಮಾಡಿದ ಡಿಜಿಟಲ್ ಅಭಿಯಾನವಾಗಿತ್ತು. ಹಾಗೆಯೇ, ಗಾಲಿ ಬಂದ್ ಅಭಿಯಾನ ಕೂಡಾ ಹೆಣ್ಣುಗಳ ಕುರಿತಾದುದೇ ಆಗಿದೆ.
ಗಾಲಿ ಬಂದ್ ಅಭಿಯಾನಕ್ಕೆ ಕಾರಣವಾದುದು ಒಂದು ಗ್ರಾಮ ಪಂಚಾಯಿತಿ ಸಭೆ. ಹಳ್ಳಿಗಳಲ್ಲಿ ಮಾತುಗಳ ನಡುವೆ ಬೈಗುಳಗಳು ಎಷ್ಟು ಸಹಜವೆಂಬುದು ಎಲ್ಲರೂ ಬಲ್ಲರು. ಹಾಗೆಯೇ, ಈ ಬೈಗಳಗಳೆಲ್ಲ ಹೆಚ್ಚೂಕಡಿಮೆ ಅಮ್ಮ, ಅಕ್ಕ, ತಂಗಿ, ಮಗಳು ಮೊದಲಾಗಿ ಹೆಣ್ಣುಗಳನ್ನುಗುರಿಯಾಗಿಸಿಕೊಂಡಿರುವವು ಎಂಬುದು ಅವುಗಳ ಅರ್ಥ ಬಲ್ಲ ಎಲ್ಲರಿಗೂ ತಿಳಿದ ಸಂಗತಿ. ೨೦೧೪ರ ಒಂದು ಮಧ್ಯಾಹ್ನದ ಹೊತ್ತು ಹರ‍್ಯಾಣದ ಜಿಂದ್ ಜಿಲ್ಲೆಯ ಬೀಬಿಪುರ ಗ್ರಾಮದ ಪಂಚಾಯಿತಿ ಸಭೆಯಲ್ಲಿ ಮಾತುಕತೆ ಚರ್ಚೆಗೆ ತಿರುಗಿ, ಚರ್ಚೆಗೆ ಬಿಸಿಯೇರಿ, ಬಿಸಿ ಚರ್ಚೆ ಕೊನೆಗೆ ಪಂಚಾಯಿ ಸದಸ್ಯರು ಪರಸ್ಪರ ಬೈಸಿ ಕೊಳ್ಳುವುದರೊಂದಿಗೆ ಮುಕ್ತಾಯಗೊಂಡಿತು. ಹಾಗೆ ಬೈಸಿಕೊಂಡ ಸದಸ್ಯರಿಗೆ ಅದೇನೂ ವಿಶೇಷವಾಗಿರಲಿಲ್ಲ. ಏಕೆಂದರೆ, ಅವರಗಳು ತಮ್ಮ ದಿನ ನಿತ್ಯದ ಮಾತುಕತೆಗಳಲ್ಲಿ ಯಥೇಚ್ಛವಾಗಿ ಬೈಗುಳಗಳನ್ನು ಬಳಸುತ್ತಿದ್ದವರು. ಹಾಗಾಗಿ, ಅವರೆಲ್ಲರೂ ಅದನ್ನು ತೀರಾ ಸಾಮಾನ್ಯವೆಂಬಂತೆ ಪರಿಗಣಿಸಿದರು. ಆದರೆ, ಅಲ್ಲಿದ್ದವರಲ್ಲಿ ಒಬ್ಬರು ಮಾತ್ರ ಅದನ್ನು ಸಹಜವಾಗಿ ಸ್ವೀಕರಿಸಲು ಒಪ್ಪಲಿಲ್ಲ. ಅವರೇ ಸುನಿಲ್ ಜಗ್ಲಾನ್.
ಆ ಪಂಚಾಯಿತಿ ಸಭೆ ಬೈಗುಳಗಳ ಜುಗಲ್‌ಬಂದಿಯಾಗಿ ಪರಿವರ್ತನೆಯಾದುದುನ್ನು ಕಂಡ ಸುನಿಲ್ ಜಗ್ಲಾನ್ ತನ್ನ ಬೀಬೀಪುರ ಗ್ರಾಮದಿಂದ ‘ಗಾಲಿ ಬಂದ್ ಭಿಯಾನ್’ ಶುರು ಮಾಡಿದರು. ಅವರ ಅಭಿಯಾನ ಬಹಳ ಸರಳವಾದುದು-ಬೈಗುಳ ಬಳಕೆಯನ್ನು ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಗಣಿಸುವುದು, ಬಳಸಲಾದ ಬೈಗುಳಗಳ ಸಂಖ್ಯೆ ಮತ್ತು ಅರ್ಥವನ್ನು ಲೆಕ್ಕವಿಡುವುದು ಮತ್ತು ತಮ್ಮ ತಮ್ಮ ಮನೆಗಳಲ್ಲಿ ಅವುಗಳನ್ನು ನಿಷೇಧಿಸುವುದು. ಅವರ ಪ್ರಕಾರ, ‘ಯಾವುದೇ ಬದಲಾವಣೆ ಮನೆಯಿಂದ ಶುರುವಾಗುತ್ತದೆ. ಮಕ್ಕಳು ಬೈಗುಳಗಳನ್ನು ಕಲಿಯುವುದು ತಮ್ಮ ತಮ್ಮ ಮನೆಗಳಲ್ಲಿ. ನಂತರ ಅವರು ಆ ಬೈಗುಳಗಳನ್ನು ಶಾಲೆಗೆ ಕೊಂಡೊಯ್ಯುತ್ತಾರೆ. ತಮ್ಮ ಸ್ನೇಹಿತ ಬಳಗಕ್ಕೂ ರವಾನಿಸುತ್ತಾರೆ. ಮನೆಗಳು ಬೈಗುಳ ಮುಕ್ತವಾದರೆ ಮಕ್ಕಳ ಭಾಷೆಯೂ ಬದಲಾಗುತ್ತದೆ’.
ಇದೇ ನಂಬಿಕೆಯಿಂದ ಸುನಿಲ್ ಜಗ್ಲಾನ್ ಮತ್ತು ಅವರ ಸಹಚರರು ದೇಶದಾದ್ಯಂತ ‘ಗಾಲಿ ಬಂದ್ ಘರ್ (ಬೈಗಳ ಮುಕ್ತ ಮನೆ)’ ಎಂಬ ಹೆಸರಿನ ಚಳವಳಿ ನಡೆಸಿದರು. ಅವರು ೨೮ ರಾಜ್ಯ ಹಾಗೂ ೮ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಾಯಂದಿರು, ಸಹೋದರಿಯರು ಹಾಗೂ ಹೆಣ್ಣು ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡ ಬೈಗುಳಗಳನ್ನು ಇತರರಿಗೆ ಬಳಸುವ ಮತ್ತು ಇತರರಿಂದ ಕೇಳುವ ಸುಮಾರು ೭೦,೦೦೦ ಸ್ಥಳೀಯರನ್ನು ಭೇಟಿಯಾಗಿ ಒಂದು ಸಮೀಕ್ಷೆಯನ್ನು ನಡೆಸಿದರು. ಆ ಸಮೀಕ್ಷೆಯಲ್ಲಿ ಹಲವಾರು ಸ್ವಾರಸ್ಯಕರವಾದ ಅಂಶಗಳು ಬೆಳಕಿಗೆ ಬಂದವು.
ಮೊದಲಿಗೆ ಅವರು ರಾಜ್ಯವಾರು ಸಮೀಕ್ಷೆಗಳನ್ನು ನಡೆಸಿದರು. ಅದರಲ್ಲಿ ದೇಶದ ರಾಜಧಾನಿ ದೆಹಲಿ ಶೇ.೮೦ ಪಡೆದು ಬೈಗುಳಗಳನ್ನು ಬಳಸುವುದರಲ್ಲೂ ತಾನು ದೇಶದ ರಾಜಧಾನಿಯಾಗಿದೆ ಎಂಬುದನ್ನು ಸಾಬೀತುಪಡಿಸಿತು. ಉಳಿದಂತೆ, ಪಂಜಾಬಿನಲ್ಲಿ ಶೇ.೭೮, ಮರ್ಯಾದಾ ಪುರುಷೋತ್ತಮ ರಾಮನಮಂದಿರವಿರುವ ಉತ್ತರಪ್ರದೇಶದಲ್ಲಿ ಶೇ.೭೪ , ಬಿಹಾರದಲ್ಲಿ ಶೇ.೭೪ , ರಾಜಸ್ತಾನದಲ್ಲಿ ಶೇ.೬೮ , ಮಹಾರಾಷ್ಟ್ರದಲ್ಲಿ ಶೇ.೫೮, ಗುಜರಾತಲ್ಲಿ ಶೇ.೫೫, ಮಧ್ಯಪ್ರದೇಶದಲ್ಲಿ ಶೇ.೪೮, ಉತ್ತರಾಖಂಡದಲ್ಲಿ ಶೇ.೪೫ ಹಾಗೂ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಮಿಝೋರಾಮ್ ಮತ್ತುಮೇಘಾಲಯ ಮೊದಲಾದ ರಾಜ್ಯಗಳಲ್ಲಿ ಶೇ.೧೫ ರಿಂದ ಶೇ.೧೮. ಎಲ್ಲಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೈಗುಳ ಬಳಸುವ ರಾಜ್ಯ ಕಾಶ್ಮೀರ. ಅಲ್ಲಿ ಕೇವಲ ಶೇ.೧೫.
ಹಾಗೆಯೇ, ವಿವಿಧ ರೀತಿಯ ವೃತ್ತಿಗಳನ್ನು ಮಾಡುವವರನ್ನೂ ಅವರು ಸಮೀಕ್ಷೆಗೆ ಒಳಪಡಿಸಿದ್ದರು. ಅದರ ಪ್ರಕಾರ ಅತ್ಯಂತ ಹೆಚ್ಚು ಬೈಗುಳ ಬಳಸುವವರೆಂದರೆ ಪೊಲೀಸರು- ಶೇ.೭೭! ಅದರ ನಂತರದ ಸ್ಥಾನ ಲಾಯರುಗಳದ್ದು-ಶೇ.೭೩, ಅದರ ನಂತರ ಶೇ.೭೧ರಾಜಕಾರಣಿಗಳು, ಶೇ.೭೦ ಕಾರ್ಪೊರೇಟ್ ಉದ್ಯೋಗಿಗಳು, ಶೇ.೬೮ ಪತ್ರಕರ್ತರು, ಶೇ.೬೪ ಪೌರ ಕಾರ್ಮಿಕರು ಮತ್ತು ಕೂಲಿಗಳು, ಶೇ.೫೨ ಕ್ರೀಡಾಪಟುಗಳು, ಶೇ.೪೨ ಆರೋಗ್ಯ ಕ್ಷೇತ್ರದ ಉದ್ಯೋಗಿಗಳು, ಶೇ.೪೧ ಶಿಕ್ಷಕರು. ಹಾಗೆಯೇ, ಹೆಣ್ಣನ್ನು ಕೇಂದ್ರವಾಗಿರಿಸಿಕೊಂಡ ಈ ಬೈಗುಳಗಳನ್ನು ಬಳಸುವುದರಲ್ಲಿ ಮಹಿಳೆಯರೇನೂ ಕಡಿಮೆ ಇಲ್ಲ. ಸುನಿಲ್ ಜಗ್ಲಾನ್‌ರ ತಂಡ ಸಮೀಕ್ಷೆ ಮಾಡಿದ ಮಹಿಳೆಯರಲ್ಲಿ ಶೇ.೩೦ ಮಹಿಳೆಯರು ತಾವೂ ಈ ಬೈಗುಳಗಳನ್ನು ಬಳಸುತೇವೆ ಅಂದಿದ್ದಾರೆ! ಈ ಅಂಕಿಅಂಶಗಳು ಕರಾರುವಾಕ್ಕಾದ ವಾಸ್ತವಾಂಶಗಳಲ್ಲ. ಆದರೆ, ಇವುಗಳು ನಮ್ಮ ಸಾಮಾಜಿಕ ನಡವಳಿಕೆಗೆ ಕನ್ನಡಿ ಹಿಡಿಯುತ್ತವೆ ಎಂದು ಹೇಳಬಹುದು.
ಗಾಲಿ ಬಂದ್ ಆಂದೋಲನದ ಅತ್ಯಂತ ಪ್ರಭಾವಶಾಲಿ ಅಸ್ತ್ರವೆಂದರೆ ಒಂದು ಖಾಲಿ ಕಾಗದದ ಹಾಳೆ. ಕುಟುಂಬಗಳು ಈ ಖಾಲಿ ಕಾಗದದ ಹಾಳೆಯನ್ನು ತಮ್ಮ ಮನೆ ಗೋಡೆಗೆ ಲಗತ್ತಿಸಬೇಕು. ಪ್ರತೀದಿನ ಮನೆಯ ಯಾವ ಯಾವ ಸದಸ್ಯರು ಮಾತಾಡುವಾಗ ಎಷ್ಟು ಬಾರಿ ಯಾವ ಯಾವ ಬೈಗುಳಗಳನ್ನು ಬಳಸಿದ್ದಾರೆ ಎಂಬುದನ್ನು ಆ ಕಾಗದದ ಹಾಳೆಯ ಮೇಲೆ ದಾಖಲಿಸಬೇಕು. ನಂತರ ದಿನದ ಕೊನೆಯಲ್ಲಿ ಎಲ್ಲರೂ ಕುಳಿತು ಯಾವ ಸದಸ್ಯರು ಎಷ್ಟು ಬಾರಿ ಯಾವ ಬೈಗುಳಗಳನ್ನು ಬಳಸಿದ್ದಾರೆ ಎಂದು ಲೆಕ್ಕ ಹಾಕಬೇಕು. ಮತ್ತು, ಆ ಬೈಗುಳಗಳ ಅರ್ಥವೇನು ಎಂಬುದನ್ನು ವಿವರಿಸಬೇಕು.
ಹೀಗೆ ಮಾಡುವುದರಿಂದ ಬೈಗುಳ ಬಳಸುವವರು ತಾವು ಬಳಸುವ ಭಾಷೆಯತ್ತ ಗಮನ ಹರಿಸಿ ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ ಎಂದು ಜಗ್ಲಾನ್ ಹೇಳುತ್ತಾರೆ. ಆ ಬದಲಾವಣೆಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕೆ ಕೆಲವು ಉದಾಹರಣೆಗಳು- ಒಬ್ಬಳು ಕಾಲೇಜು ವಿದ್ಯಾರ್ಥಿನಿ ಸುನಿಲ್ ಜಗ್ಲಾನಿಯವರಿಗೆ ಫೋನ್ ಮಾಡಿ ‘ನನ್ನ ತಂದೆ ದಿನವಿಡೀ ಬೈಗುಳ ಬಳಸುತ್ತಿದ್ದರು. ಆಗ ನಾನು ಗೋಡೆಗೆ ಅಂಟಿಸಿದ ಕಾಗದದ ಹಾಳೆಯ ಮೇಲೆ ಅವರು ಬಳಸಿದ ಬೈಗುಳ ಮತ್ತು ಅವುಗಳ ಸಂಖ್ಯೆಯನ್ನು ಬರೆಯುತ್ತ ಹೋದೆ. ಒಂದು ದಿನದಲ್ಲಿ ಅವರು ೫೦, ೬೦, ೭೦ ಇಷ್ಟೊಂದು ಸಂಖ್ಯೆಯ ಬೈಗುಳಗಳನ್ನು ಬಳಸುತ್ತಿದ್ದರು. ನಂತರ ನಾನು ಅವರಿಗೆ ಆ ಕಾಗದವನ್ನು ತೋರಿಸಿ, ಈ ಬೈಗುಳಗಳ ಅರ್ಥ ಹೇಳಿ ಅಂದೆ. ಅಂದಿನಿಂದ ಅವರ ಮಾತಿನಲ್ಲಿ ಅಗಾಧ ಪ್ರಮಾಣದ ಬದಲಾವಣೆಯಾಗಿ ಅವರು ಬೈಗುಳಗಳನ್ನು ಬಳಸುವುದು ನಿಂತಿತು’ ಅಂದಳು. ಇನ್ನೊಂದು ಉದಾಹರಣೆ ಹಿಸ್ಸಾರಿನ ಒಬ್ಬ ಶಿಕ್ಷಕರದ್ದು. ಅವರು ಪ್ರತೀ ಬಾರಿ ತಾನು ಬೈಗುಳಗಳನ್ನು ಬಳಸಿದಾಗ ಅವುಗಳನ್ನು ಕಾಗದದ ಮೇಲೆ ಬರೆದಿಡುವಂತೆ ತಮ್ಮ ಮೊಮ್ಮಕ್ಕಳಿಗೆ ಹೇಳಿದರು. ನಂತರ ಅವರ ಮಾತಿನ ವರಸೆ ಎಷ್ಟು ಬದಲಾಯಿತೆಂದರೆ, ‘ನಾನೀಗ ಒಬ್ಬ ಒಳ್ಳೆಯ ಅಜ್ಜನಾಗಿ ನಿವೃತ್ತನಾಗಲು ಸಾಧ್ಯವಾಯಿತು. ಅದಕ್ಕಾಗಿ ತಮಗೆ ಧನ್ಯವಾದ’ ಎಂದು ಬರೆದಿದ್ದರು. ರಕ್ಷಾ ಬಂಧನದ ಸಮಯದಲ್ಲಿ ಹಲವೆಡೆ ಹೆಣ್ಣು ಮಕ್ಕಳು, ‘ರಕ್ಷಾ ಬಂಧನ್ ಕೀ ದೋರ್, ಗಾಲಿ ಬಂಧ್ ಕೀ ಓರ್ (ರಕ್ಷಾ ಬಂಧನದ ದಾರ, ಬೈಗುಳ ನಿಷೇಧದ ಕಡೆಗೆ)’ ಎಂದು ಹೇಳಿ ಸಹೋದರರಿಂದ ದಾರ ಕಟ್ಟಿಸಿಕೊಳ್ಳುತ್ತಾರೆ. ಸುನಿಲ್ ಜಗ್ಲಾನ್‌ರ ಮಗಳು ತನ್ನ ಸಹಪಾಠಿಗಳನ್ನು ಸೇರಿಸಿಕೊಂಡು ‘ಗಾಲಿ ಮುಕ್ತ್ ಸ್ಕೂಲ್ (ಬೈಗುಳ ಮುಕ್ತ ಶಾಲೆ)’ ಆಂದೋಲನ ಶುರು ಮಾಡಿದಳು.
ಸುನಿಲ್ ಜಗ್ಲಾನ್‌ರ ಪ್ರಕಾರ ಒಮ್ಮೆ ಮನೆಗಳಲ್ಲಿ ಬಳಸುವ ಭಾಷೆ ಬದಲಾದರೆ ಆ ಬದಲಾವಣೆ ಶಾಲೆಗಳಲ್ಲೂ ಕಾಣಿಸಿಕೊಳ್ಳುತ್ತದೆ. ಶಾಲೆಯಲ್ಲಾಗುವ ಬದಲಾವಣೆ ಇಡೀ ಜನ ಸಮುದಾಯವನ್ನು ಬದಲಾಯಿಸುತ್ತದೆ. ಪ್ರಾರಂಭದ ದಿನಗಳಲ್ಲಿ ಸ್ವತಃ ಸನಿಲ್ ಜಗ್ಲಾನ್‌ರವರ ಸ್ನೇಹಿತರೂ ಗಾಲಿ ಬಂದ್ ಆಂದೋಲನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು, ಬೈಗುಳಗಳು ಭಾಷೆಯ ಅವಿಭಾಜ್ಯ ಅಂಗ. ಹಾಗಾಗಿ, ಅವುಗಳನ್ನು ನಿವಾರಿಸುವುದು ಅಸಾಧ್ಯ ಎಂದು ವಾದಿಸುತ್ತಿದ್ದರು. ಆದರೆ, ಇಂದು ಆ ಸ್ನೇಹಿತರು ಮಾತ್ರವಲ್ಲದೆ ಜಗ್ಲಾನ್‌ರವರ ಪರಿಚಿತರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರೂ ಕೂಡ ಅವರೆದುರು ಮಾತಿನ ನಡುವೆ ಬೈಗುಳ ಪದಗಳನ್ನು ಬಳಸದಂತೆ ಎಚ್ಚರಿಕೆ ವಹಿಸುತ್ತಾರೆ.
” ‘ಯಾವುದೇ ಬದಲಾವಣೆ ಮನೆಯಿಂದ ಶುರುವಾಗುತ್ತದೆ. ಮಕ್ಕಳು ಬೈಗುಳಗಳನ್ನು ಕಲಿಯುವುದು ತಮ್ಮ ತಮ್ಮ ಮನೆಗಳಲ್ಲಿ. ನಂತರ ಅವರು ಆ ಬೈಗುಳಗಳನ್ನು ಶಾಲೆಗೆ ಕೊಂಡೊಯ್ಯುತ್ತಾರೆ. ತಮ್ಮ ಸ್ನೇಹಿತ ಬಳಗಕ್ಕೂ ರವಾನಿಸುತ್ತಾರೆ. ಮನೆಗಳು ಬೈಗುಳ ಮುಕ್ತವಾದರೆ ಮಕ್ಕಳ ಭಾಷೆಯೂ ಬದಲಾಗುತ್ತದೆ’.”
ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…
ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ…
ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ…
ಲಕ್ಷ್ಮಿಕಾಂತ್ ಕೊಮಾರಪ್ಪ ಬ್ರಿಟಿಷರ ಕಾಲದ ಕಬ್ಬಿಣದ ಸೇತುವೆ ತೆರವು; ನೂತನ ಸೇತುವೆ ನಿರ್ಮಾಣ ಕಾರ್ಯ ಶುರು ಸೋಮವಾರಪೇಟೆ: ಮಡಿಕೇರಿ- ಹಾಸನ…
ಕಾಲುವೆಗೆ ಸೇರುತ್ತಿದೆ ಕಲ್ಯಾಣ ಮಂಟಪಗಳ ತ್ಯಾಜ್ಯ ರಾಸಾಯನಿಕ ನೀರಿನಿಂದ ಬೆಳೆ ಹಾಳು, ಜಾನುವಾರು ಸಾವು ಈಗಲಾದರೂ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು…