ಆನ್ಲೈನ್ ವಂಚನೆ: ವ್ಯಕ್ತಿಗೆ ದೊಡ್ಡ ಮೊತ್ತದ ಹಣ ವಾಪಸ್ !
* 1.75 ಲಕ್ಷ ರೂ. ಕೊಡಿಸಿದ ಸೈಬರ್ ಪೊಲೀಸರು
* ಸಾಲದ ಆಮಿಷವೊಡ್ಡಿ ಹಣ ಪಡೆದಿದ್ದ ಕಿಡಿಗೇಡಿಗಳು
ಚಾಮರಾಜನಗರ: ಆನ್ಲೈನ್ ವಂಚನೆ ಪ್ರಕರಣವನ್ನು ನಗರದ ಸೈಬರ್ ಠಾಣೆಯ ಪೊಲೀಸರು ಭೇದಿಸಿ 1.75 ಲಕ್ಷ ರೂ.ಗಳನ್ನು ವ್ಯಕ್ತಿಯೊಬ್ಬರಿಗೆ ವಾಪಸ್ ಕೊಡಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ತಿಳಿಸಿದರು.
ತಾಲ್ಲೂಕಿನ ಕುಮಚಹಳ್ಳಿಯ ನಾಗಮಲ್ಲಪ್ಪ ಎಂಬವರು ಆನ್ಲೈನ್ ವಂಚನೆಗೆ ಒಳಗಾಗಿದ್ದರು. ಇವರ ದೂರು ಆಧರಿಸಿ ಪೊಲೀಸರು ಚುರುಕಿನ ತನಿಖೆ ನಡೆಸಿ ದೊಡ್ಡ ಮೊತ್ತದ ಹಣವನ್ನು ಕೊಡಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಪ್ರಿಲ್ 14 ರಂದು ಲೈಟ್ಸ್ಟಿಮ್ ಕಂಪನಿಯಿಂದ ನಾಗಮಲ್ಲಪ್ಪ ಮೊಬೈಲ್ಗೆ ಸಂದೇಶವೊಂದು ಬಂದಿತ್ತು. ಅದರಲ್ಲಿದ್ದ ಲಿಂಕ್ನಲ್ಲಿ 50 ಪೈಸೆ ಬಡ್ಡಿದರದಲ್ಲಿ 5 ಲಕ್ಷ ರೂ. ಸಾಲ ನೀಡುವುದಾಗಿ ಹಾಗೂ ಜಿಎಸ್ಟಿ ಮತ್ತು ಕಮೀಷನ್ ಹಣ ನೀಡಿದರೆ ಸಾಲ ಮಂಜೂರು ಮಾಡುವುದಾಗಿ ಭರವಸೆಯಿತ್ತು. ಇದನ್ನು ನಾಗಮಲ್ಲಪ್ಪ ನಂಬಿದ್ದರು ಎಂದು ತಿಳಿಸಿದರು.
ಏ.14 ರಿಂದ 17 ರವರೆಗೆ ನಾಗಮಲ್ಲಪ್ಪ ಅವರ ಎಸ್ಬಿಐ ಖಾತೆಯಿಂದ ಕಂಪನಿಯ ಐಸಿಐಸಿಐ ಬ್ಯಾಂಕ್ ಖಾತೆಗೆ ವಿವಿಧ ಹಂತಗಳಲ್ಲಿ 1.75 ಲಕ್ಷ ರೂ.ಗಳನ್ನು ಪಡೆದುಕೊಳ್ಳಲಾಗಿತ್ತು. ಇಷ್ಟೊಂದು ದೊಡ್ಡ ಮೊತ್ತದ ಹಣ ಪಡೆದಿರುವುದು ವಂಚನೆ ಎಂದು ಮನಗಂಡ ನಾಗಮಲ್ಲಪ್ಪ ಸೈಬರ್ ಠಾಣೆಗೆ ಏ.21 ರಂದು ದೂರು ನೀಡಿದ್ದರು ಎಂದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹಣ ಕಟ್ಟಿದ್ದ ಐಸಿಐಸಿಐ ಬ್ಯಾಂಕ್ನ ಐಎಫ್ಎಸ್ಸಿ ಕೋಡ್ ಐಸಿಐಸಿಐ0006281 ಆಧಾರದ ಮೇಲೆ ಉತ್ತರ ಪ್ರದೇಶದ ಹಜರತ್ಗಂಜ್ನ ಶಾಖೆಗೆ ಅಕೌಂಟ್ ಸಂಖ್ಯೆ 628105038047ರ ಡೆಬಿಟ್ ಫ್ರೀಜ್ ನೀಡುವಂತೆ ಇ-ಮೇಲ್ ಕಳುಹಿಸಿದ್ದರು ಎಂದು ತಿಳಿಸಿದರು.
ಶಾಖೆ ವ್ಯವಸ್ಥಾಪಕರು ಈ ಅಕೌಂಟ್ ಅನ್ನು ಡೆಬಿಟ್ ಫ್ರೀಜ್ ಮಾಡಿ ಖಾತೆಯಲ್ಲಿ 2..39,242 ರೂ. ಇದೆ ಎಂದು ಉತ್ತರಿಸಿದ್ದರು. ನಂತರ ಪೊಲೀಸರು ನ್ಯಾಯಾಲಯದ ಆದೇಶ ಪಡೆದು ಹಣವನ್ನು ಬಿಡುಗಡೆ ಮಾಡಿಕೊಳ್ಳುವಂತೆ ನಾಗಮಲ್ಲಪ್ಪಗೆ ಸೂಚಿಸಿದ್ದರು. ಬಳಿಕ ನ್ಯಾಯಾಲಯದ ಆದೇಶವನ್ನು ಪೊಲೀಸ್ ಠಾಣೆಗೆ ಹಾಗೂ ಬ್ಯಾಂಕ್ ಶಾಖೆಗೆ ಕಳುಹಿಸಿ 1.75 ಲಕ್ಷ ರೂ.ಗಳನ್ನು ವಾಪಸ್ ಪಡೆದರು ಎಂದು ಮಾಹಿತಿ ನೀಡಿದರು.
ಆನ್ಲೈನ್ ಮೂಲಕ ಸಾಲ ನೀಡುವುದಾಗಿ ಬರುವ ಸಂದೇಶ ಮತ್ತು ಲಿಂಕ್ಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಹೆಚ್ಚಿನ ಬಡ್ಡಿ ಆಸೆಗೆ ಮರುಳಾಗಿ ಹಣ ಕಳಹಿಸಬಾರದು. ಆನ್ಲೈನ್ ವಂಚನೆ ಬಗ್ಗೆ ಅರಿವಿರದವರು ಹೆಚ್ಚು ಹಣ ತಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾದರೆ ತಕ್ಷಣ ಸೈಬರ್ ಠಾಣೆಯ 1930ಗೆ ಕರೆ ಮಾಡಿ ದೂರು ನೀಡಬೇಕು ಎಂದು ಮನವಿ ಮಾಡಿದರು.