ಓದು ಬರಹ: ಸಾಹಿತ್ಯ; ಲೇಖಕ ಮತ್ತು ಓದುಗರ ನಡುವೆ

ಓದುಗ – ಸಾಹಿತಿಗಳ ಸಂಬಂಧ ಇಂದು ನಿನ್ನೆಯದಲ್ಲ. ಅದು ಸಾಹಿತಿ ಮತ್ತು ವಿಮರ್ಶಕರ ಸಂಬಂಧಕ್ಕಿಂತಲು ಹೆಚ್ಚು ವೈಯಕ್ತಿಕವಾದದ್ದೂ ಹೌದು. ಓದುಗರಿಲ್ಲದೆ ಸಾಹಿತ್ಯವೇ ಇಲ್ಲ. ಸಾಹಿತ್ಯವಿಲ್ಲದೆ ಓದುಗರೂ ಇಲ್ಲ. ಇಂತಹ ಒಂದು ಸಾಮಾನ್ಯ ಸಂಬಂಧದ ಮೇಲೆ ಸಾಹಿತ್ಯ ಮೌಲ್ಯಗಳು ಸೌಧ ಕಟ್ಟುತ್ತವೆ.

ಓದುಗರಿಗಾಗಿ

ನಾನು ನನಗಾಗಿಯೇ ಬರೆಯುತ್ತೇನೆಂದು ಯಾರೆಷ್ಟೇ ಹೇಳಿಕೊಂಡರೂ, ಓದುಗರಿಗಾಗಿ ಬರೆಯುತ್ತೇವೆ, ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತೇವೆ, ಕಾವ್ಯತಂತ್ರಗಳನ್ನು ಬಳಸುತ್ತೇವೆ, ಪ್ರತಿ ಸಲವೂ ಹೊಸದಾದ್ದನ್ನೆ ಕೊಡಲು ಪ್ರಯತ್ನಿಸುತ್ತೇವೆ, ಎಲ್ಲವೂ ಓದುಗರಿಗಾಗಿ. ಜನಮೇಜಯ ಇಲ್ಲದೆ ಮಹಾಭಾರತ ಇಲ್ಲ.
ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಓದಬಲ್ಲ ಯಾರೇ ಆದರೂ ಓದುಗರಾಗಿರಬಹುದು, ವಿದ್ಯಾಭ್ಯಾಸದ ವಿವಿಧ ಹಂತಗಳಲ್ಲಿ. ಆದರೆ ಇವರಿಗೆಲ್ಲ ಮಿಕ್ಕ ಸಾಮಾನ್ಯ ಓದುಗರ ಸಮೂಹವಿದೆ. ಯಾರು ಸಾಮಾನ್ಯ ಓದುಗ ಎಂದರೆ? ಸಾಮಾನ್ಯ ಓದುಗ ಅಥವಾ ಕಾಮನ್ ರೀಡರ್ ಎಂದಾಗ ನನ್ನ ಮನಸ್ಸಿನಲ್ಲಿರುವುದು ಯಾವುದೊಂದೇ ನಿರ್ದಿಷ್ಟ ಪಂಗಡವಲ್ಲ. ಸುಸಂಸ್ಕೃತರಾದ ಸಹೃದಯ ಓದುಗರು ಯಾರೇ ಇರಲಿ ಅವರೆಲ್ಲರೂ ಸಾಮಾನ್ಯ ಓದುಗರೇ. ಮುಖ್ಯವಾಗಿ ಎಕಡೆಮಿಕ್ ಇಂಟ್ರೆಸ್ಟ್ ಇದ್ದೊ ಇಲ್ಲದೆಯೋ ಸುಮ್ಮನೆ ಆಸಕ್ತಿಯಿಂದ ಓದುವ ಜನರು. ಹೆಚ್ಚಾಗಿ ಸಾಹಿತ್ಯದ ಓದನ್ನು ಒಂದು ಹವ್ಯಾಸ ಮಾಡಿಕೊಂಡವರು. (ವರ್ಜೀನಿಯಾ ವೂಲ್ಫ್  ತನ್ನ ಪುಸ್ತಕಗಳನ್ನು ಈ ಅರ್ಥದಲ್ಲಿ ಕಾಮನ್ ರೀಡರ್ ಎಂದು ಕರೆದಳು.)

ಓದುಗನ ಜವಾಬ್ದಾರಿ

ಎಸ್. ಟಿ. ಕಾಲರಿಜ್‌ನ ೧೮೦೨ರ ಡಿಜೆಕ್ಶನ್ ಓಡ್ ನಿಮ್ಮಲ್ಲಿ ಕೆಲವರು ಓದಿರಬಹುದು. ಅದರಲ್ಲಿ (ಕಾವ್ಯ) ಸೃಷ್ಟಿಯ ಕುರಿತು ಒಂದು ಮುಖ್ಯ ವಿಚಾರ ಬರುತ್ತದೆ: ಕಾವ್ಯಸೃಷ್ಟಿ ಅರ್ಧ ಇರುವುದು, ಇನ್ನರ್ಧ ಕಂಡುಕೊಳ್ಳುವುದು ಎನ್ನುವ ವಿಚಾರ ಇದು. ಕಂಡುಕೊಳ್ಳುವುದು ಎನ್ನುವುದನ್ನು ಗಮನಿಸಿ. ಎಂದರೆ ಕವಿಗೆ ಕಾಣುವುದು ಸಾಧ್ಯವಾಗಬೇಕು. ಕಾಲರಿಜ್‌ನ ವಿಹ್ವಲತೆಗೆ ಕಾರಣವೆಂದರೆ, ತನ್ನದೇ ಖಾಸಗಿ ವೈಯಕ್ತಿಕ ಸಂಕಷ್ಟಗಳಿಂದಾಗಿ ಕಾಣುವುದು ಸಾಧ್ಯವಾಗದೆ ಇರುವುದು. ಕಾಣದೆ ಇದ್ದಾಗ ಕಾಣಿಸುವುದು (ಕಾವ್ಯಸೃಷ್ಟಿ) ಹೇಗೆ ಸಾಧ್ಯ? ಇದೇ ಮಾತು ಓದುಗನಿಗೂ ಅನ್ವಯಿಸಬಹುದು. ಓದುಗನಿಗೆ ದೊರಕುವ ಸಾಹಿತ್ಯ ಕೃತಿ ಸಹಾ ಓದುಗನ ಮಟ್ಟಿಗೆ ಅರ್ಧ ಇರುವುದು, ಅರ್ಧ ಓದುಗನು ಕಂಡುಕೊಳ್ಳಬೇಕಾದುದು. ಕೃತಿ ರಚನೆಯ ಜವಾಬ್ದಾರಿ ಸಾಹಿತಿಯ ಮೇಲೆ, ಅದನ್ನು ಕಂಡುಕೊಳ್ಳುವ ಅರ್ಥಾತ್ ಓದುವ ಜವಾಬ್ದಾರಿ ಓದುಗನ ಮೇಲೆ. ಜವಾಬ್ದಾರಿ ಎಂದ ತಕ್ಷಣ ಗಾಬರಿಗೆ ಕಾರಣವಿಲ್ಲ, ಇದು ಸಹಜವಾಗಿ, ಶ್ರಮರಹಿತವಾಗಿ ಎಂಬಂತೆ ಓದುಗನಲ್ಲಿ ಉಂಟಾಗುವ ಪ್ರಕ್ರಿಯೆ – ಪುನರ್ ಸೃಷ್ಟಿ ಅಥವಾ ಸಮಾನಾಂತರ ಸೃಷ್ಟಿ.

ಈ ವಿದ್ಯಮಾನಕ್ಕೆ ಓದುಗ ತನ್ನನ್ನು ತಾನು ತೆರೆದುಕೊಳ್ಳಬೇಕು. ಅದರಂತೆ ಅವನ ಅಭಿರುಚಿ ಬೆಳೆಯುತ್ತ ಹೋಗುತ್ತದೆ. ಹೆಚ್ಚೆಚ್ಚು ಓದುತ್ತ ಅವನ ಅಕ್ಷರ ವಲಯ (ಅನುಭವ ವಲಯ) ಹಿಗ್ಗುತ್ತದೆ, ಹೀಗೆ ಸಮಾಜದಲ್ಲಿ ಓದುವ ಸಂಸ್ಕೃತಿ ಬೆಳೆಯುವುದು ಒಂದು ಚಲನಶೀಲ ಕ್ರಿಯೆ, ಒಂದು ಪುಸ್ತಕ ಓದಿದವನು ಇನ್ನೊಂದು ಪುಸ್ತಕ ಓದುವ ಸಾಧ್ಯತೆ ಜಾಸ್ತಿ. ಬಹುಶಃ ಅವನು ಇನ್ನೊಬ್ಬನಿಗೆ ಆ ಕುರಿತು ಹೇಳಲೂ ಬಹುದು. ಆದರೆ ಅರ್ಥದ ಪ್ರಶ್ನೆ ಏಳುತ್ತದೆ.

ಅರ್ಥವಾಗುವುದಿಲ್ಲ

ನಮಗೆ ಅರ್ಥವಾಗುವುದಿಲ್ಲ ಎಂಬ ಓದುಗರ ಮಾತು ಲೇಖಕರನ್ನು ಬೆನ್ನಟ್ಟಿಸಿಕೊಂಡು ಬರುತ್ತದೆ, ಅದೂ ವಿಶೇಷವಾಗಿ ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಇಡೀ ಅರ್ಥದ ಪ್ರಶ್ನೆಯೇ ತೊಡಕಿನಲ್ಲಿ ಸಿಲುಕಿರುವಾಗ. ಅರ್ಥಮಾಡುವುದೊದು ಪಾಲ್ಗೊಳ್ಳುವಿಕೆ. ತಯಾರಿಲ್ಲದ ಓದುಗ ಕೃತಿಯನ್ನೇ ನಿರಾಕರಿಸುತ್ತಾನೆ. ಅರ್ಥಮಾಡಲು ಪ್ರಯತ್ನಿಸಿದ್ದೀರಾ? ಕುರಿತಾಗಿ ಸ್ವಲ್ಪ ಚಿಂತಿಸಿದ್ದೀರಾ? ಬೇರೆ ಬೇರೆ ಕೋನಗಳಿಂದ ನೋಡಿದ್ದೀರಾ? ಅನಿಶ್ಚಿತತೆಯನ್ನು ಸ್ವೀಕರಿಸಲು ನೀವು ತಯಾರಿಲ್ಲವೇ? ಎಲ್ಲವೂ ಸರಳ ಸುಂದರ ನಿಖರವಾಗಿರಬೇಕೆ? ಹೊಸತನ್ನು, ವಿಲಕ್ಷಣವಾದ್ದನ್ನು ಒಪ್ಪಲು ನಿಮಗೆ ಕಷ್ಟವಾಗುತ್ತದೆಯೇ? ಮೇಲ್ನೋಟಕ್ಕೆ ಅರ್ಥಮುಕ್ತವಾಗಿದ್ದೂ ಹಲವು ಕೃತಿಗಳು ಸಾಹಿತ್ಯಕ್ಷೇತ್ರದಲ್ಲಿ ಸ್ಥಾನ ಪಡೆದಿವೆಯಲ್ಲ? ಅಲ್ಲದೆ ಕಲೆಯ (ಮತ್ತು ಜೀವನದ) ಎಲ್ಲಾ ಕ್ಷೇತ್ರಗಳಲ್ಲೂ ಇಂತಹ ಬದಲಾವಣೆಗಳು ಆಗುತ್ತಿವೆ ಯಾಕೆ?
ಈ ಪ್ರಶ್ನೆಗಳಿಗೆ ಓದುಗ ಉತ್ತರಿಸಬಲ್ಲನೆ, ಉತ್ತರಿಸಬೇಕೆ? ಸಾಹಿತ್ಯಕ್ರಿಯೆಯಲ್ಲಿ ಸಹೃದಯಿಯಾಗಿ ಪಾಲ್ಗೊಳ್ಳುವವನೇ ಸಾಮಾನ್ಯ ಓದುಗ, ಗ್ರಾಹಕನಾಗಿ ಅಲ್ಲ. ದುರದೃಷ್ಟವಶಾತ್ ಪುಸ್ತಕ ಸಂಸ್ಕೃತಿಯನ್ನು ಗ್ರಾಹಕ ಸಂಸ್ಕೃತಿಯೊಂದಿಗೆ ತಾಳೆಹಾಕಲಾಗುತ್ತಿದೆ; ಪುಸ್ತಕಗಳು ಓದಿಸಿಕೊಂಡು ಹೋಗಬೇಕು, ಸುಲಭವಾಗಿ ಅರ್ಥವಾಗಬೇಕು, ಜನಪ್ರಿಯ ಪುಸ್ತಕವೇ (ಟಾಪ್ ಟೆನ್) ಶ್ರೇಷ್ಠ ಪುಸ್ತಕ ಇತ್ಯಾದಿ. ಈ ತರದ ಕನ್ಸ್ಯೂಮರಿಸಂ ಸಾಹಿತ್ಯಕ್ಕೆ ಒಳಿತಲ್ಲ ಅನಿಸುತ್ತದೆ. ಮಾರಾಟದ ಸೂಚ್ಯಾಂಕದಿಂದ ಸಾಹಿತ್ಯಕೃತಿಯ ಗುಣ ನಿರ್ಧರಿತವಾಗದು.

ವಿರೋಧಾಭಾಸ

ಲೇಖಕ ಮತ್ತು ಓದುಗರ ನಡುವೆ ಒಂದು ಅವ್ಯಕ್ತ ಮೇಲಾಟ ಇರುತ್ತದೆ. ಕೃತಿಯನ್ನು ತಾನು ಓದಿ ಕರಗತ ಮಾಡಿಕೊಂಡ ಹೆಮ್ಮೆ ಒದುಗನದ್ದಾದರೆ, ತನ್ನ ಕೃತಿ ಇನ್ನೂ ಅದರ ಮಿಸ್ಟರಿಯನ್ನು ಪೂರ್ತಿ ಬಿಟ್ಟುಕೊಡಬಾರದೆಂಬ ಅಂತರ್ಯ ಲೇಖಕನದ್ದಾಗಿರುತ್ತದೆ. ಅದ್ದರಿಂದಲೆ ಕೃತಿ ಕ್ಲಿಷ್ಟವಾಯಿತೆಂದರೆ ಲೇಖಕರಿಗೆ – ಉದಾಹರಣೆಗೆ ಜೇಮ್ಸ್ ಜಾಯ್ಸ್ಸ್‌ಗೆ – ಬೇಸರವಿಲ್ಲ. ಕ್ಲಿಷ್ಟತೆಯೇ ಒಂದು ಆಕರ್ಷಣೆಯಾಗುತ್ತದೆ. ಲೇಖಕರನ್ನು ಓದುಗರು ಹಿಂಬಾಲಿಸುವುದಲ್ಲದೆ, ಓದುಗರನ್ನು ಲೇಖಕರು ಹಿಂಬಾಲಿಸುವುದು ಒಳ್ಳೆಯ ಸಾಹಿತ್ಯದ ಲಕ್ಷಣವಲ್ಲ. ಸಕ್ಸೆಸ್ ಎನ್ನುವುದು ಲೇಖಕನಿಗೆ ಶತ್ರು. ಯಾಕೆಂದರೆ ಅದು ಲೇಖಕನಿಗೆ ಸಭಾಕಂಪನ ಮೂಡಿಸುವುದಲ್ಲದೆ ಪುನರಾವರ್ತಿಸಲು ಪ್ರೇರೇಪಿಸುತ್ತದೆ. ಒಂದು ಮಾದರಿಯ ವರ್ಣಚಿತ್ರ ಜನಪ್ರಿಯವಾಯಿತೆಂದು ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸುವ ಕಲಾವಿದರನ್ನು ನಾವು ಕಾಣುತ್ತೇವೆ. ಆಗ ಕಲೆ ಕಮರ್ಶಿಯಲ್ ಆಗುತ್ತದೆ.

ಪರಿಧಿಯ ವಿಸ್ತರಣೆ

ಈ ವ್ಯವಹಾರ ಸಾಹಿತ್ಯಚರಿತ್ರೆಯನ್ನು ಸೃಷ್ಟಿಸಿಕೊಂಡು ಬರುವುದರಲ್ಲಿ ದೊಡ್ಡದೊಂದು  ಪಾತ್ರ ವಹಿಸಿದೆ, ಹೊಸ ತಂತ್ರಗಳಿಗೆ, ಪ್ರಯೋಗಗಳಿಗೆ, ಮತ್ತು ಪ್ರಭಾವಗಳಿಗೆ ಆಸ್ಪದವಿತ್ತಿದೆ. ಲೇಖಕ ಹೊಸ ಅವೆನ್ಯೂಗಳನ್ನು ತೆರೆದರೆ, ಓದುಗ ಹೊಸ ದೃಷ್ಟಿಕೋನಗಳನ್ನು ಬೆಳೆಸಿಕೊಂಡಿದ್ದಾನೆ. ಸಾಹಿತ್ಯ ಜಗತ್ತು ಇದರಿಂದಾಗಿ ವಿಸ್ತರಿಸಿದೆ. ವಿಮರ್ಶೆ, ಶಿಕ್ಷಣ, ಕೈಪಿಡಿ ಮುಂತಾದುವು ಪ್ರವೇಶಿಸುವುದು ಇಲ್ಲಿಯೇ. ತಮ್ಮ ಹೊಸ ಪ್ರಯೋಗಗಳ ಕುರಿತು ಲೇಖಕ ಕಲಾವಿದರಿಗೂ ಆತಂಕವಿರುತ್ತದೆ, ತಾವು ನಿರ್ಲಿಪ್ತರಾಗಿರಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅಲ್ಲದೆ ಇದೆಲ್ಲವೂ ಯಾವಾಗಲೂ ಪ್ರಜ್ಞಾಪೂರ್ವಕ ನಡೆಯತ್ತದೆಯೆಂದೂ ಹೇಳುವಂತಿಲ್ಲ. ಸಾಹಿತ್ಯದ ಬರಹ ಮತ್ತು ಓದಿನಲ್ಲಿ ಬಹಳಷ್ಟು ಅನಿರೀಕ್ಷಿತಗಳೂ ಆಕಸ್ಮಿಕಗಳೂ ಇರುತ್ತವೆ. ಇಲ್ಲದಿದ್ದರೆ ಅದೊಂದು ಯಾಂತ್ರಿಕ ಕ್ರಿಯೆಯಾಗಿರುತ್ತಿತ್ತು.

 

ಕೆ. ವಿ. ತಿರುಮಲೇಶ್
kvtirumalesh@rediffmail.com

× Chat with us