ದೇಗುಲ ತೆರವು: ಮೈಸೂರು ಡಿಸಿ, ನಂಜನಗೂಡು ತಹಸಿಲ್ದಾರ್‌ಗೆ ನೊಟೀಸ್

ಬೆಂಗಳೂರು: ದೇಗುಲ ಒಡೆದ ಪ್ರಕರಣಕ್ಕೆ ಕಾರಣ ಕೇಳಿ ಮೈಸೂರು ಜಿಲ್ಲಾಕಾರಿ ಹಾಗೂ ನಂಜನಗೂಡು ತಹಸಿಲ್ದಾರ್ ಅವರಿಗೆ ಕಾರಣ ಕೇಳಿ ಸರ್ಕಾರ ನೋಟಿಸ್ ಜಾರಿಗೊಳಿಸಿದೆ.

ರಾಜ್ಯದ ಯಾವುದೇ ಭಾಗದಲ್ಲಿಯೂ ದಿಢೀರ್ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬಾರದು ಎಂದು ಅಕಾರಿಗಳಿಗೆ ಸೂಚಿಸಿರುವ ಸರ್ಕಾರ, ಪರಿಸ್ಥಿತಿ ಅವಲೋಕಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸುವುದಾಗಿ ಹೇಳಿದೆ.

ಮೈಸೂರು ಜಿಲ್ಲೆಯಲ್ಲಿ ಮೂರು ದಿನದಿಂದ ಅನಕೃತ ಧಾರ್ಮಿಕ ಕಟ್ಟಡಗಳ ತೆರವು ವಿವಾದ ಉಂಟಾದ ಹಿನ್ನೆಲೆಯಲ್ಲಿ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮಂಗಳವಾರ ಬೆಂಗಳೂರಿನಲ್ಲಿ ಈ ಸ್ಪಷ್ಟನೆ ನೀಡಿದರು.

ಚಳಿಗಾಲದ ಅವೇಶನ ನಡೆಯುತ್ತಿರುವ ವಿಧಾನಸೌಧದ ಹೊರ ಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಧಾರ್ಮಿಕ ಕಟ್ಟಡಗಳ ದಿಢೀರ್ ತೆರವು ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಅವಸರದ ನಿರ್ಧಾರ ಕೈಗೊಳ್ಳುವುದು ಬೇಡ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪೂರ್ವಾಪರ ಪರಿಶೀಲಿಸಲಾಗುವುದು. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಘಟನೆ ಕುರಿತಂತೆ ವಿವರಣೆ ನೀಡುವಂತೆ ಡಿಸಿ ಹಾಗೂ ತಹಸಿಲ್ದಾರ್ ಅವರಿಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಡಿಸಿಗಳಿಗೆ ಅಶೋಕ್ ಸೂಚನೆ: ಇದಕ್ಕೂ ಮೊದಲು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ, ಜನರ ಭಾವನೆಗಳಿಗೆ ಧಕ್ಕೆ ತಂದು ದೇವಾಲಯಗಳನ್ನು ತೆರವುಗೊಳಿಸಬಾರದು. ಸರ್ಕಾರದಿಂದ ನಿರ್ದೇಶನ ಬರುವವರೆಗೂ ಸ್ಥಗಿತ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲಾಕಾರಿಗಳು ಮತ್ತು ಕಂದಾಯ ಇಲಾಖೆ ಅಕಾರಿಗಳ ಜೊತೆ ನಾನೇ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ಕೆಲವು ಕಡೆ ದೇವಸ್ಥಾನಗಳನ್ನು ತೆರವು ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಯಾಲಯದ ನಿರ್ದೇಶನದ ಬಗ್ಗೆ ಸರ್ಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ. ಸರ್ಕಾರ ನಿರ್ದೇಶನ ನೀಡುವವರೆಗೂ ತೆರವುಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಕ್ರಮಕ್ಕೆ ಚರ್ಚೆ: ನಂಜನಗೂಡು ಪುರಾತನ ದೇವಾಲಯವನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾಕಾರಿ ಹಾಗೂ ಅಲ್ಲಿನ ತಹಶೀಲ್ದಾರ್ ಅವರ ಜತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಜನರು ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬಾರದು ಎಂದು ಅಶೋಕ್ ಹೇಳಿದರು.

ʻಮೈಸೂರಿನಲ್ಲಿ ಧಾರ್ಮಿಕ ಮಂದಿರಗಳನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಸಿದಂತೆ ಶಾಸಕರು ಹಾಗೂ ಧಾರ್ಮಿಕ ಮುಖಂಡರನ್ನು ಒಳಗೊಂಡ ಸಭೆ ಕರೆಯಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ತೀರ್ಮಾನ ಮಾಡಬೇಕು. ಕೋವಿಡ್ ನಿಂದ ಈಗಾಗಲೇ ಜನ ನೊಂದಿದ್ದಾರೆ. ಧಾರ್ಮಿಕ ವಿಚಾರದಲ್ಲಿ ನೋವು ಕೊಡುವುದು ಬೇಡʼ.

-ಸಾ.ರಾ.ಮಹೇಶ್, ಶಾಸಕ

ʻಸರ್ಕಾರ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಲಿದೆ. ದೇವಾಲಯ ಸೇರಿದಂತೆ ಎಲ್ಲ ಮಂದಿರಗಳ ಜತೆ ಪ್ರತಿಯೊಬ್ಬರೂ ಶ್ರದ್ಧಾ ಭಕ್ತಿ ಇಟ್ಟುಕೊಂಡಿರುತ್ತಾರೆ. ಏಕಾಏಕಿ ತೆರವುಗೊಳಿಸಿದರೆ ಸಹಜವಾಗಿ ಅವರ ಭಾವನೆಗಳಿಗೆ ಧಕ್ಕೆ ಬರುತ್ತದೆ. ಸಾರ್ವಜನಿಕ ಸ್ಥಳ ಅಥವಾ ಎಲ್ಲೇ ದೇವಾಲಯಗಳಿರಲಿ ಸರ್ಕಾರ ನಿರ್ದೇಶನ ನೀಡುವವರೆಗೂ ತೆರವುಗೊಳಿಸುವ ಅಗತ್ಯವಿಲ್ಲʼ.

-ಆರ್.ಅಶೋಕ್, ಕಂದಾಯ ಸಚಿವ

× Chat with us