ಹಾಸನ| ಸೇತುವೆ ಮೇಲಿಂದ ಬಿದ್ದು ನವವಿವಾಹಿತೆ ಸಾವು: ಪೋಷಕರಿಂದ ಕೊಲೆ ಆರೋಪ

ಹಾಸನ: ಜಿಲ್ಲೆಯ ಸಕಲೇಶಪುರದ ಸೇತುವೆ ಮೇಲಿಂದ ಬಿದ್ದು ನವವಿವಾಹಿತೆ ಮೃತಪಟ್ಟಿರುವ ಘಟನೆ ನಡೆದಿದೆ.

ಪೂಜಾ (22) ಮೃತ ಗೃಹಿಣಿ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಆಗಸ್ಟ್ 5ರಂದು ಸಕಲೇಶಪುರದ ಸೇತುವೆಯ ಮೇಲಿಂದ ಬಿದ್ದು ಪೂಜಾ ಮೃತಪಟ್ಟಿದ್ದರು. ನಂತರ ನಾಲ್ಕು ದಿನಗಳ ಹುಡುಕಾಟದ ಬಳಿಕ ಹೇಮಾವತಿ ನದಿಯಲ್ಲಿ ಅಗ್ನಿ ಶಾಮಕ‌ ಸಿಬ್ಬಂದಿ ಪೂಜಾಳ ಮೃತದೇಹ ಪತ್ತೆ ಹಚ್ಚಿದ್ದಾರೆ.

ಮಗಳನ್ನು ಅಳಿಯ ಅಶ್ವತ್ಥ್ ನದಿಗೆ ತಳ್ಳಿ‌ ಕೊಲೆ ಮಾಡಿದ್ದಾನೆಂದು ಪೋಷಕರು ಆರೋಪ ಮಾಡಿದ್ದಾರೆ. ಪೂಜಾ ಸಾವಿನ ಕೆಲ ದಿನಗಳ ಹಿಂದೆ ಪತಿ ಮನೆಯವರಿಂದ ಕಿರುಕುಳವಾಗುತ್ತಿದೆ ಎಂದು ತನ್ನ ಮನೆಯವರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಳಂತೆ. ಹೀಗಾಗಿ, ಇದೇ ವಿಚಾರವಾಗಿ ಮಾತನಾಡಲು ಪೂಜಾ ಪತಿ ಅಶ್ವತ್ಥ್ ಮನೆಗೆ ಪೋಷಕರು ಬಂದಿದ್ದರು. ಪೋಷಕರು ಮನೆಗೆ ಬರುತ್ತಿದ್ದಂತೆ ಅಶ್ವತ್ಥ್ ಮನೆ ಬಿಟ್ಟು ಓಡಿಹೋಗಿದ್ದ. ಈ ವೇಳೆ ಅಶ್ವತ್ಥ್‌ನನ್ನು ಕರೆತರುವುದಾಗಿ ಹೇಳಿ ಪೂಜಾ, ಪತಿಯನ್ನು ಹಿಂಬಾಲಿಸಿ ಹೋಗಿದ್ದಳು. ಈ ವೇಳೆ ಪತಿಯೇ ಪೂಜಾಳನ್ನು ನದಿಗೆ ತಳ್ಳಿದ್ದಾಗಿ ಪೋಷಕರು ಆರೋಪ ಮಾಡಿದ್ದಾರೆ.

ಪೂಜಾ ಹಾಗೂ ಅಶ್ವತ್ಥ್‌ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.