ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸಲ್ಮಾನರ ಪ್ರಮಾಣ ಶೇ.೩೯. ಜೈಲಿನಲ್ಲಿರುವ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳ ಪೈಕಿ ಇವರ ಪ್ರಮಾಣ ಶೇ.೫೧.
ಭರತ ಭೂಮಿಯಲ್ಲಿ ಬಡವರಾಗಿ ಹುಟ್ಟುವುದು ಅಪರಾಧ. ದಲಿತರು ಮತ್ತು ಆದಿವಾಸಿಗಳಾಗಿ ಜನಿಸುವುದು ನೂರುಪಟ್ಟು ಅಪರಾಧ. ದಲಿತರಾಗಿ ರೈತ-ಕಾರ್ಮಿಕರ ಹಕ್ಕುಗಳ ಪರವಾಗಿ ದನಿಯೆತ್ತುವುದೆಂದರೆ ಅಪನಿಂದೆ, ಬಂಧನ ಚಿತ್ರಹಿಂಸೆಗಳಿಗೆ ಆಹ್ವಾನ ನೀಡಿದಂತೆಯೇ. ಪಂಜಾಬ್-ಹರ್ಯಾಣ ಹೈಕೋರ್ಟಿನಿಂದ ಮೊನ್ನೆ ಜಾಮೀನು ಪಡೆದು ೪೪ ದಿನಗಳ ಬಂಧನದಿಂದ ಹೊರಬಿದ್ದ ನೌದೀಪ್ ಕೌರ್ ಬಡವರಷ್ಟೇ ಅಲ್ಲ ದಲಿತ ಜಾತಿಗೆ ಸೇರಿದವರು ಕೂಡ. ಮೇಲಾಗಿ ರೈತ ಕಾರ್ಮಿಕರ ಹಕ್ಕುಗಳಿಗೆ ಹೋರಾಟ ಮಾಡುವ ದಿಟ್ಟ ಹೆಣ್ಣುಮಗಳು.
ಈಕೆಯ ಕುಟುಂಬದ ಎಲ್ಲ ಹೆಣ್ಣುಮಕ್ಕಳೂ ಹೋರಾಟಗಾರರೇ. ದಲಿತ ಜಾತಿ ಮತ್ತು ಬಡತನದ ಕಾರಣ ಎದುರಿಸಿದ ದಬ್ಬಾಳಿಕೆಯೇ ಹಕ್ಕುಗಳಿಗಾಗಿ ಹೋರಾಡುವುದನ್ನು ಕಲಿಸಿಕೊಟ್ಟಿದೆ. ನೌದೀಪ್ ಅಕ್ಕ ರಾಜವೀರ್ ಕೌರ್ ಕೂಡ ಆಂದೋಲನಗಳಲ್ಲಿ ಸಕ್ರಿಯವಾಗಿರುವ ಹೆಣ್ಣುಮಗಳು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ.
ಅನ್ಯಾಯದ ವಿರುದ್ಧ ಸಿಡಿದೇಳುವ ದಿಟ್ಟತನ ನೌದೀಪ್ಗೆ ರಕ್ತಗತ. ಆಕೆಯ ತಾಯಿ ಪಂಜಾಬಿನ ಮುಖ್ತಸರ್ ಸಾಹೀಬ್ನ ಖೇತ್ ಯೂನಿಯನ್ ಸದಸ್ಯೆ. ಹೋರಾಟಗಳಿಂದಾಗಿ ಜೈಲು ಪಾಲಾಗಿದ್ದಾಕೆ. ತಮ್ಮ ಹಳ್ಳಿಯಲ್ಲಿ ಭೂಹೀನ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿದ ಮೇಲ್ಜಾತಿಯ ಜಮೀನುದಾರನ ವಿರುದ್ಧ ಪ್ರತಿಭಟಿಸಿದಾಕೆ. ಪರಿಣಾಮವಾಗಿ ಈ ಕುಟುಂಬ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿ ತೆಲಂಗಾಣಕ್ಕೆ ವಲಸೆ ಹೋಗಬೇಕಾಯಿತು. ತಂದೆ ಹೈದರಾಬಾದಿನಲ್ಲಿ ವಾಹನ ಚಾಲಕ. ನೌದೀಪ್ ಓದುಬರೆಹಕ್ಕೆ ಅಡಚಣೆಯಾಯಿತು. ೧೨ನೆಯ ತರಗತಿಯನ್ನು ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಪೂರೈಸಬೇಕಾಯಿತು.
೨೦೧೯ರಲ್ಲಿ ದಿಲ್ಲಿಗೆ ಬಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಓದಬಯಸಿದರು. ಅಕ್ಕ ರಾಜವೀರ್ ಜೊತೆ ವಿಶ್ವವಿದ್ಯಾಲಯದ ಭಗತ್ ಸಿಂಗ್ ವಿದ್ಯಾರ್ಥಿ ಐಕ್ಯ ವೇದಿಕೆಯ ಸದಸ್ಯೆಯಾಗಿ ಪೌರತ್ವ ಕಾಯಿದೆ ತಿದ್ದುಪಡಿಯ ವಿರುದ್ಧದ ಹೋರಾಟ ಸೇರಿದಂತೆ ಹಲವು ಆಂದೋಲನಗಳಲ್ಲಿ ಭಾಗವಹಿಸಿದರು. ದೇಶದ್ರೋಹದ ಆರೋಪ ಹೊತ್ತು ಜೈಲು ಪಾಲಾಗಿರುವ ವಿದ್ಯಾರ್ಥಿ ನಾಯಕಿಯರಾದ ದೇವಾಂಗನಾ ಕಾಲಿತಾ ಮತ್ತು ನತಾಶಾ ನರ್ವಾಲ್ ಸಂಗದಲ್ಲಿ ಹೋರಾಡಿದವರು.
ಹಣಕಾಸಿನ ಬಿಕ್ಕಟ್ಟಿನ ಕಾರಣ ಹರ್ಯಾಣದ ಸೋನಿಪತ್ ಜಿಲ್ಲೆಯ ಕುಂಡಲಿ ಕೈಗಾರಿಕೆ ಪ್ರದೇಶದ ಕಂಪನಿಯೊಂದನ್ನು ಸೇರಿದರು. ಅಲ್ಲಿ ಕಾರ್ಮಿಕರ ಶೋಷಣೆ ಮತ್ತು ಅವಮಾನ ಕಂಡು ಆಕೆಯ ಮನಸ್ಸು ಕುದಿಯಿತು. ಕನಿಷ್ಠ ಕೂಲಿ ಕಾಯಿದೆಯ ಪ್ರಕಾರ ಕೂಲಿದರಗಳನ್ನು ನೀಡುವಂತೆ ಆಗ್ರಹಿಸಿದರು. ಮತ್ತು ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡಿದಲ್ಲಿ ಅವರಿಗೂ ಸಮಾನ ವೇತನ ಸಲ್ಲಬೇಕೆಂಬ ಬೇಡಿಕೆ ಇಟ್ಟರು. ಓವರ್ ಟೈಮ್ಗೆ ಪ್ರತ್ಯೇಕವಾಗಿ ಕೂಲಿ ಪಾವತಿಗೆ ಒತ್ತಾಯಿಸಿದರು. ಈ ದಿಸೆಯಲ್ಲಿ ಮಜದೂರ್ ಅಧಿಕಾರ್ ಸಂಘಟನೆಯನ್ನು ಸೇರಿದರು. ಸಮೀಪದ ಸಿಂಘು ಗಡಿಯಲ್ಲಿ ಜರುಗಿದ್ದ ರೈತ ಹೋರಾಟವನ್ನು ಬೆಂಬಲಿಸಿ ೧,೨೦೦ ಮಂದಿ ಕಾರ್ಮಿಕರನ್ನು ಸಂಘಟಿಸಿ ಮೆರವಣಿಗೆ ನಡೆಸಿದರು.
ನಿತ್ಯ ೩೦೦ ಮಂದಿ ಕಾರ್ಮಿಕರು ರೈತರ ಪರವಾಗಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದರು ನೌದೀಪ್. ಕುಂಡ್ಲಿ ಕೈಗಾರಿಕೆಗಳು ಕಾರ್ಮಿಕರನ್ನು ಮನಬಂದಂತೆ ನಡೆಸಿಕೊಳ್ಳುತ್ತಿದ್ದು, ರೈತ ಆಂದೋಲನವನ್ನು ಬೆಂಬಲಿಸಿದ ಕಾರಣಕ್ಕಾಗಿ ಅನೇಕ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿವೆ. ಹೀಗೆ ಬಂಧನಕ್ಕೆ ಮುನ್ನವೇ ನೌದೀಪ್ ಕೂಡ ಉದ್ಯೋಗ ಕಳೆದುಕೊಳ್ಳಬೇಕಾಗಿತ್ತು.
ಉತ್ತರ ಪ್ರದೇಶ, ಬಿಹಾರ, ಪಂಜಾಬ್ನಿಂದ ಉದ್ಯೋಗ ಅರಸಿ ವಲಸೆ ಬಂದಿರುವ ಎರಡು ಲಕ್ಷಕ್ಕೂ ಹೆಚ್ಚು ನಿರ್ಗತಿಕರು ಕುಂಡ್ಲಿ ಕೈಗಾರಿಕೆ ಪ್ರದೇಶದಲ್ಲಿ ಕೂಲಿಗಾಗಿ ಸೇರಿದ್ದಾರೆ. ಇವರ ಪೈಕಿ ವಿಶೇಷವಾಗಿ ಭೂಹೀನ ರೈತರು, ಬಡರೈತರು, ದಲಿತರು ಮುಸಲ್ಮಾನರದೇ ದೊಡ್ಡ ಸಂಖ್ಯೆ.
ಜನವರಿ ೧೨. ಕೆಲ ಕಾರ್ಮಿಕರ ಕೂಲಿ ಬಾಕಿಯನ್ನು ಪಾವತಿ ಮಾಡುವಂತೆ ಆಗ್ರಹಪಡಿಸಿ ಫ್ಯಾಕ್ಟರಿ ಮುಂದೆ ಪ್ರತಿಭಟನಾ ಸಭೆ ನಡೆದಿತ್ತು. ಕೈಗಾರಿಕೆಗಳ ಸಂಘವು ನೇಮಕ ಮಾಡಿಕೊಂಡಿರುವ ಖಾಸಗಿ ಭದ್ರತಾ ಸಿಬ್ಬಂದಿಯು ಪ್ರದರ್ಶನಕಾರರನ್ನು ಥಳಿಸುತ್ತಾರೆ. ಬೆದರಿಸಲು ಗಾಳಿಯಲ್ಲಿ ಗುಂಡುಗಳನ್ನೂ ಹಾರಿಸುತ್ತಾರೆ. ಪ್ರದರ್ಶನಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವಣ ಜಗ್ಗಾಟವು ಪೊಲೀಸ್ ಬಂದ ನಂತರವೂ ಮುಂದುವರಿದಿರುತ್ತದೆ. ಸಿಂಘುವಿನ ರೈತ ಆಂದೋಲನದ ಸ್ಥಳದಲ್ಲಿ ಹಾಕಲಾಗಿದ್ದ ಮಜದೂರ್ ಅಧಿಕಾರ್ ಸಂಘಟನೆಯ ಟೆಂಟ್ನಿಂದ ನೌದೀಪ್ ಕೌರ್ ಅವರನ್ನು ರಾತ್ರಿಯ ವೇಳೆ ಬಂಧಿಸಿ ಸುಲಿಗೆ ಮತ್ತು ಕೊಲೆ ಪ್ರಯತ್ನದ ಕೇಸುಗಳನ್ನು ಹಾಕಲಾಗುತ್ತದೆ.
ಪುರುಷ ಪೊಲೀಸರು ರಾತ್ರಿಯ ವೇಳೆ ನೌದೀಪ್ ಅವರನ್ನು ಕುಂಡ್ಲಿ ಕೈಗಾರಿಕೆ ಪ್ರದೇಶದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಥಳಿಸಿ ಚಿತ್ರಹಿಂಸೆ ನೀಡುತ್ತಾರೆ. ಪೊಲೀಸ್ ಠಾಣೆಯಲ್ಲಿ ಮತ್ತೆ ಮತ್ತೆ ಥಳಿಸುತ್ತಾರೆ, ಗುಪ್ತಾಂಗಗಳ ಮೇಲೆ ಬಾರಿಸುತ್ತಾರೆ. ಇಬ್ಬಿಬ್ಬರು ಮೈಮೇಲೆ ಕುಳಿತು ಖಾಲಿ ಕಾಗದದ ಮೇಲೆ ರುಜು ಹಾಕುವಂತೆ ಬಲವಂತ ಮಾಡುತ್ತಾರೆ. ಜಾತಿಯ ಹೆಸರಿಡಿದು ಅಶ್ಲೀಲ ಬೈಗುಳ ಬೈಯ್ಯುತ್ತಾರೆ. ತಲೆಗೂದಲು ಹಿಡಿದು ಎಳೆದಾಡಿದ್ದಾರೆ. ಕಪಾಳಕ್ಕೆ ಬಾರಿಸಿದ್ದಾರೆ. ಪೊಲೀಸರು ಎಂದಿನಂತೆ ಥಳಿಸಿದ ಆಪಾದನೆಯನ್ನು ನಿರಾಕರಿಸಿದ್ದಾರೆ.
ಆಕೆಯೊಂದಿಗೆ ದಸ್ತಗಿರಿಯಾದ ಮತ್ತೊಬ್ಬ ಯುವ ಕಾರ್ಮಿಕ ಹೋರಾಟಗಾರ ಶಿವಕುಮಾರ್ ಅವರನ್ನೂ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ. ಎಡಗೈ ಮತ್ತು ಬಲಪಾದದಲ್ಲಿ ಮೂಳೆಗಳು ಮುರಿದಿವೆ. ನೌದೀಪ್ಗೆ ಎರಡು ಸಲ ಜಾಮೀನು ನಿರಾಕರಿಸಲಾಗುತ್ತದೆ.
ಸುಲಿಗೆಯ ಆಪಾದನೆ ಸುಳ್ಳೆಂದು ಸಾರುವ ವಿಡಿಯೋಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ನೌದೀಪ್ ಹೇಳಿದ್ದಾರೆ. ಐದು ಸಾವಿರ ರೂಪಾಯಿ ಕೂಲಿ ಬಾಕಿ ಪಾವತಿ ಮಾಡುವಂತೆ ಒತ್ತಾಯಿಸುವುದು ಸುಲಿಗೆಯೇ ಎಂಬುದು ಆಕೆಯ ಪ್ರಶ್ನೆ. ೩೦೦ ಮಂದಿ ಕೆಲಸಗಾರರ ಐದು ಲಕ್ಷ ರೂಪಾಯಿ ಕೂಲಿ ಬಾಕಿಯನ್ನು ಪ್ರತಿಭಟನೆಗಳ ಮೂಲಕವೇ ಪಡೆಯಲಾಗಿತ್ತು.
ಕಾರ್ಮಿಕರು ಮತ್ತು ರೈತರು ದೈಹಿಕ ಶ್ರಮವನ್ನೇ ನಂಬಿ ಬದುಕುವ ಶ್ರಮಜೀವಿಗಳು. ಇಬ್ಬರೂ ಉತ್ಪಾದಕರು. ರೈತ ಹೊಲಗದ್ದೆಗಳಲ್ಲಿ ಉತ್ಪಾದಿಸಿದರೆ, ಕಾರ್ಮಿಕರು ಗಿರಣಿಗಳಲ್ಲಿ ಉತ್ಪಾದನೆಯಲ್ಲಿ ತೊಡಗಿಕೊಂಡವರು. ಸರ್ಕಾರಗಳು ಈ ಇಬ್ಬರ ಹಕ್ಕುಗಳನ್ನೂ ಬಿಕರಿಗಿಟ್ಟಿವೆ. ಸರ್ಕಾರಿ ಉದ್ಯಮಗಳು ಕಂಪನಿಗಳನ್ನು ಮಾರಾಟಕ್ಕಿಡಲಾಗಿದೆ? ಹೀಗಾಗಿ ಇಬ್ಬರೂ ಒಟ್ಟಾಗಿ ಹೋರಾಡಬೇಕಿದೆ. ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದಿದ್ದರೆ, ರೈತರ ವಿರೋಧಿ ಕಾನೂನುಗಳನ್ನು ರದ್ದು ಮಾಡದೆ ಹೋದರೆ ನಾವು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುತ್ತೇವೆ. ಕಂಪನಿಗಳಿಗೆ ಬೀಗ ಹಾಕಿಸುತ್ತೇವೆ ಎಂಬ ನೌದೀಪ್ ಹೇಳಿಕೆ ಕಾರ್ಖಾನೆಗಳ ಮಾಲೀಕರನ್ನು ಕೆರಳಿಸಿತ್ತು.
ತುಳಿಸಿಕೊಂಡವರ ಪರ ನಿರಂತರ ಹೋರಾಡುತ್ತಿರುವ ಅಕ್ಕ ರಾಜವೀರ್ ನನ್ನ ಪ್ರೇರಣೆ. ಕೇವಲ ೨೩ನೆಯ ವಯಸ್ಸಿನಲ್ಲಿ ದೇಶಕ್ಕಾಗಿ ನೇಣುಗಂಬ ಏರಿದ ಭಗತ್ ಸಿಂಗ್ ನನ್ನ ಸ್ಫೂರ್ತಿ. ಆ ಕಾಲದಲ್ಲಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆಯಲಾಗಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರೆಂದು ಇಂದು ಆದರಿಸುತ್ತೇವೆ. ಹೀಗಾಗಿ ವಿರೋಧ ಎಷ್ಟಿದ್ದರೂ ಲೆಕ್ಕಿಸದೆ ಹೋರಾಡುವುದು ಬಲು ಮುಖ್ಯ. ಜಾಮೀನು ದೊರೆತ ಮರುದಿನವೇ ನೌದೀಪ್ ಸಿಂಘು ಗಡಿಯ ರೈತ ಹೋರಾಟವನ್ನು ಸೇರಿಕೊಂಡಿದ್ದಾರೆ.
ಓದುವ ಆಸೆಯೇನೋ ಇತ್ತು. ಆದರೆ ನೋಡಿ, ಒಂದಲ್ಲ ಹಲವು ಡಿಗ್ರಿಗಳನ್ನು ಪಡೆದವರೇ ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ. ಜನ ನನ್ನಲ್ಲಿ ಇಟ್ಟಿರುವ ವಿಶ್ವಾಸ ದೊಡ್ಡದು. ಅವರಿಗಾಗಿ ಹೋರಾಡುತ್ತೇನೆ. ಮೂರು ಕರಾಳ ಕಾನೂನುಗಳನ್ನು ರದ್ದು ಮಾಡಬೇಕೆಂಬ ರೈತರ ಹೋರಾಟದಲ್ಲಿ ದುಡಿಯುವೆ. ಬದಲಾವಣೆ ತರಬಲ್ಲ ಶಕ್ತಿ ಯುವಜನರಿಗಿದೆ. ಈ ಕಾರಣಕ್ಕಾಗಿಯೇ ಸರ್ಕಾರ ಅವರ ದನಿಯನ್ನು ಅದುಮುತ್ತಲಿದೆ. ಯುವಜನರು ಹಿಂಜರಿದರೆ ಜನವಿರೋಧಿ ಕಾಯಿದೆ ಕಾನೂನುಗಳಿಗೆ ಅಡೆತಡೆಯೇ ಇರದು ಎನ್ನುತ್ತಾರೆ.
ದಲಿತ ಜಾತಿ ಮತ್ತು ಬಡವರ್ಗಕ್ಕೆ ಸೇರಿದ ಕಾರಣವೇ ಮುಖ್ಯವಾಹಿನಿ ಮಾಧ್ಯಮಗಳು ನೌದೀಪ್ ಅವರ ಬಂಧನ ಮತ್ತು ಚಿತ್ರಹಿಂಸೆಯನ್ನು ನಿರ್ಲಕ್ಷಿಸಿದವು. ರೂಪಿ ಕೌರ್ ಎಂಬ ಸಾಮಾಜಿಕ ಕಾರ್ಯಕರ್ತೆ ಸಾಮಾಜಿಕ ಜಾಲತಾಣಗಳ ಮೂಲಕ ನೌದೀಪ್ಗೆ ಆದ ಅನ್ಯಾಯವನ್ನು ಅಂತಾರಾಷ್ಟ್ರೀಯಗೊಳಿಸಿದ ನಂತರ ಭಾರತೀಯ ಮಾಧ್ಯಮಗಳು ಒಲ್ಲದ ಮನಸಿನಿಂದ ಅರೆಗಣ್ಣು ತೆರೆಯುತ್ತವೆ.
ಭಾರತದಲ್ಲಿ ದಲಿತರು ಆದಿವಾಸಿಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.೩೯. ದೇಶದ ಜೈಲು ಪಾಲಾಗಿರುವ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳ ಪೈಕಿ ಈ ಸಮುದಾಯಗಳ ಪ್ರಮಾಣ ಶೇ.೫೧. ಅಮೆರಿಕದಲ್ಲಿ ಭೇದಭಾವ ಎದುರಿಸಿರುವ ಕಪ್ಪು ವರ್ಣೀಯರ ದುರಂತವೂ ಇಂತಹುದೇ ಆಗಿದೆ. ಅಲ್ಲಿನ ಜನಸಂಖ್ಯೆಯ ಶೇ.೧೩ರಷ್ಟಿದ್ದಾರೆ. ಆದರೆ ಜೈಲುಪಾಲಾಗಿರುವ ಅಮೆರಿಕದ ನಾಗರಿಕರ ಪೈಕಿ ಇವರ ಪ್ರಮಾಣ ಶೇ.೪೦.ಶೋಷಣೆ, ಬಡತನ, ಪೂರ್ವಗ್ರಹಗಳು, ಅನಕ್ಷರತೆ, ತಾರತಮ್ಯಕ್ಕೆ ಬಲಿಯಾಗುತ್ತಿರುವ ದನಿ ಸತ್ತ ಜನಸಮುದಾಯಗಳಿವು.
ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಸರ್ಕಾರಿ ಅಂಕಿ ಅಂಶ ಕಟುಸತ್ಯದ ಕತೆಯನ್ನು ಕಿರುಚಿ ಹೇಳುತ್ತಿದೆ. ಉಳ್ಳವರ ಕಿವಿಗಳ ಮೇಲೆ ಅದು ಬೀಳುತ್ತಿಲ್ಲ.
ಡಿ.ಉಮಾಪತಿ