ನವದೆಹಲಿ : ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನ ಉಭಯಸದನಗಳಲ್ಲಿ ಮಂಡನೆಯಾಗಿದ್ದು,ಇನ್ನು ಮುಂದೆ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ.
ನೂತನ ಮಸೂದೆಯನ್ನು ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆಯಲಾಗುವುದು.ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು ಮಂಡಿಸಲಾಗಿದೆ ಆದರೆ ಪದೇ ಪದೇ ಅದಕ್ಕೆ ತಡೆಯೊಡ್ಡಲಾಗಿತ್ತು. ಮಸೂದೆಯು ಕಾಯಿದೆಯಾಗಿ ಜಾರಿಗೆ ಬಂದ ನಂತರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ನೀಡಬೇಕು. ಪ್ರತಿ ರಾಜಕೀಯ ಪಕ್ಷವು ತನ್ನ ಟಿಕೆಟ್ಗಳ ಶೇ 20ರಷ್ಟನ್ನು ಮಹಿಳೆಯರಿಗೆ ಹಂಚಬೇಕು. ಮೀಸಲಾತಿ ಶೇ 20 ಸೀಟುಗಳನ್ನು ಮೀರಬಾರದು. ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ಮಹಿಳೆಯರಿಗೆ ಕೋಟಾ ಇರಬೇಕು. ಅಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ನೀಡಬೇಕು.ಶೇ.33ರಷ್ಟು ಮೀಸಲಾತಿ ಅನುಷ್ಠಾನಕೆ ಬಂದರೆ ಲೋಕಸಭೆಯಲ್ಲಿ 165 ಸ್ಥಾನಗಳನ್ನು ಆಲಂಕರಿಸಲಿದ್ದಾರೆ.
ಈ ಮಸೂದೆಗೆ ಸೋಮವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕಾರ ದೊರಕಿತ್ತು. ವಿಧೇಯಕವನ್ನು ಸಚಿವ ಮೇಘವಾಲ್ ಅವರು ಮಂಗಳವಾರ ಕೆಳಮನೆಯಲ್ಲಿ ಮಂಡಿಸಲಿದ್ದಾರೆ ಎಂದು ಲೋಕಸಭೆ ನೋಟಿಸ್ನಲ್ಲಿ ತಿಳಿಸಿತ್ತು. ಅದರಂತೆ ಮಧ್ಯಾಹ್ನ ಹೊಸ ಸಂಸತ್ನಲ್ಲಿ ಶುರುವಾದ ಅಧಿವೇಶನದಲ್ಲಿ ಮೊದಲ ಚರ್ಚೆಯನ್ನಾಗಿ ವಿಧೇಯಕದ ಮಂಡನೆ ಮಾಡಲಾಯಿತು.
ಈ ನಡುವೆ, ಈ ಮಹಿಳಾ ಮೀಸಲಾತಿ ಮಸೂದೆ ನಮ್ಮದು ಎಂದು ವಿಪಕ್ಷಗಳು ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದು, ಈ ಹಿನ್ನೆಲೆ ಗದ್ದಲ ಗಲಾಟೆಯ ನಡುವೆಯೇ ಮಂಡನೆಯಾಯಿತು. ಕೆಳಮನೆಯ ಕಲಾಪ ಮುಂದೂಡಿಕೆಯಾಗಿದ್ದು, ಈ ಹಿನ್ನೆಲೆ ಬಹುತೇಕ ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಲಿದೆ ಎನ್ನಲಾಗುತ್ತಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಮಹಿಳೆಯರ ದೊಡ್ಡ ಮಟ್ಟದ ಪಾಲ್ಗೊಳ್ಳುವಿಕೆಗೆ ಇದು ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಈ ಪ್ರಸ್ತಾಪಿತ ಕಾನೂನು ಅಂಗೀಕಾರವಾದರೂ 2024ರ ಲೋಕಸಭೆ ಚುನಾವಣೆಯಿಂದಲೇ ಅಸ್ತಿತ್ವಕ್ಕೆ ಬರುವುದು ಸಾಧ್ಯವಿಲ್ಲ. 2029ರ ಬಳಿಕವೇ ಇದು ಅನುಷ್ಠಾನಗೊಳ್ಳಲಿದೆ ಎನ್ನಲಾಗಿದೆ.
ಹೊಸ ಸಂಸತ್ ಭವನದಲ್ಲಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಸೂದೆಯನ್ನು ಘೋಷಿಸಿದರು. ನಾರಿಶಕ್ತಿ ವಂದನ್ ಅಧಿನಿಯಂ ಅನ್ನು ಪರಿಚಯಿಸುವ ಸಂದರ್ಭದಲ್ಲಿ ಪ್ರಧಾನಿಯವರು ಎಲ್ಲಾ ಶಾಸಕರಲ್ಲಿ ಒಮ್ಮತವನ್ನು ಕೇಳಿದರು.
ಹೊಸ ಸಂಸತ್ ಕಟ್ಟಡದಲ್ಲಿ ಈ ಐತಿಹಾಸಿಕ ಸಂದರ್ಭದಲ್ಲಿ, ಸದನದ ಮೊದಲ ಕಲಾಪವಾಗಿ, ಎಲ್ಲಾ ಸಂಸದರು ಮಹಿಳಾ ಶಕ್ತಿಗಾಗಿ ಹೆಬ್ಬಾಗಿಲುಗಳನ್ನು ತೆರೆಯುವ ಪ್ರಾರಂಭವನ್ನು ಈ ನಿರ್ಣಾಯಕ ನಿರ್ಧಾರದಿಂದ ಮಾಡಲಾಗುತ್ತಿದೆ. ಮಹಿಳೆಯರ ನೇತೃತ್ವದ ಅಭಿವೃದ್ಧಿಯ ನಮ್ಮ ಸಂಕಲ್ಪವನ್ನು ಮುಂದಕ್ಕೆ ತೆಗೆದುಕೊಂಡು, ನಮ್ಮ ಸರ್ಕಾರವು ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತರುತ್ತಿದೆ ಎಂದು ಹೇಳಿದರು.
ಈ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರ ಸದಸ್ಯತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ನಾರಿ ಶಕ್ತಿ ವಂದನ್ ಅಧಿನಿಯಮ್ ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುತ್ತದೆ. ಮಹಿಳಾ ಮೀಸಲಾತಿ ಮಸೂದೆಯ ಚರ್ಚೆ ಬಹಳ ಸಮಯದಿಂದ ನಡೆಯಿತು. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಮಸೂದೆಯನ್ನು ಅಂಗೀಕರಿಸಲು ಸಾಕಷ್ಟು ಬಹುಮತ ಇರಲಿಲ್ಲ, ಮತ್ತು ಈ ಕಾರಣದಿಂದಾಗಿ ಈ ಕನಸು ಅಪೂರ್ಣವಾಗಿ ಉಳಿಯಿತು.ಇಂದು, ಇದನ್ನು ಮುಂದುವರಿಸಲು ದೇವರು ನನಗೆ ಅವಕಾಶವನ್ನು ನೀಡಿದ್ದಾನೆ. ನಮ್ಮ ಸರ್ಕಾರವು ಉಭಯ ಸದನಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಹೊಸ ಮಸೂದೆಯನ್ನು ತರುತ್ತಿದೆ ಎಂದರು.
ಪ್ರಧಾನಿ ಭಾಷಣಕ್ಕೆ ಕೆಲವೇ ನಿಮಿಷಗಳ ಮೊದಲು, ಕೇಂದ್ರ ಸರ್ಕಾರವು ಸಂವಿಧಾನ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ, 2023 ಅನ್ನು ಲೋಕಸಭೆಯಲ್ಲಿ ಮೇಘವಾಲ್ ಮಂಡಿಸಲು ಪಟ್ಟಿಮಾಡಲಾಯಿತು.
ಅರ್ಜುನ್ ರಾಮ್ ಮೇಘವಾಲ್ ವಿಧೇಯಕವನ್ನು ಮಂಡಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ ಅವರು ಮಸೂದೆಯ ಇತಿಹಾಸದ ಬಗ್ಗೆ ಪ್ರಶ್ನಿಸಿದ್ದು ಸಂಸತ್ನಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಚೌಧರಿ ಅವರ ಹೇಳಿಕೆಗಳನ್ನು ಖಂಡಿಸಿದ್ದು ಅವರ ವಾದಗಳಿಗೆ ಪುರಾವೆಗಳನ್ನು ಪ್ರಸ್ತುತಪಡಿಸಬೇಕು ಎಂದು ಹೇಳಿದರು.
ಏನಿದು ಮಹಿಳಾ ಮೀಸಲಾತಿ? : ಹಾಲಿ ಸಂಸತ್ ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 14ರಷ್ಟಿದೆ. ಸಾಕಷ್ಟು ವರ್ಷಗಳಿಂದ ಶೇ 33ರಷ್ಟು ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇತ್ತು. 1996ರಲ್ಲಿ ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಈ ಮಸೂದೆ ಮಂಡನೆಯಾಗಿತ್ತು. ಆದರೆ ಸಂಸತ್ ನಲ್ಲಿ ಇದುವರೆಗೂ ಈ ಮಸೂದೆ ಅಂಗೀಕಾರವಾಗಿಲ್ಲ.
ಹಾಲಿ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.14ರಷ್ಟಿದೆ. ಹೀಗಾಗಿ, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡಬೇಕು ಎಂಬುದು ಈ ಮಸೂದೆ ಉದ್ದೇಶವಾಗಿದೆ. ರಾಜ್ಯಸಭೆ 2010ರಲ್ಲಿ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಲೋಕಸಭೆಯ ಒಪ್ಪಿಗೆ ಪಡೆಯುವಲ್ಲಿ ಯಶಸ್ಸು ಕಾಣಲಿಲ್ಲ.ಪ್ರಸ್ತುತ ಲೋಕಸಭೆಯಲ್ಲಿ 78 ಮಹಿಳಾ ಸದಸ್ಯರಿದ್ದಾರೆ. ಇದು ಶೇಕಡಾ 15 ಕ್ಕಿಂತ ಕಡಿಮೆ. ರಾಜ್ಯಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯ ಶೇ 14ರಷ್ಟಿದೆ ಎಂದು ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ನಲ್ಲಿ ಸಂಸತ್ತಿಗೆ ಅಂಕಿಅಂಶಗಳು ನೀಡಿದೆ. ಹಲವಾರು ರಾಜ್ಯಗಳ ವಿಧಾನಸಭೆಗಳು ಶೇ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಹೊಂದಿವೆ.
ಈ ಮಸೂದೆ ಮಂಡನೆ ಇದೇ ಮೊದಲಲ್ಲ : ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುತ್ತಿರುವುದು ಇದೇ ಮೊದಲಲ್ಲ. 1996ರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿಡಲು ಸಂವಿಧಾನವನ್ನು ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಈ ಮಸೂದೆಯನ್ನು ಮಂಡಿಸಿತ್ತು.ಮಸೂದೆಯು ಸಂವಿಧಾನದ 330 ಮತ್ತು 332ನೇ ವಿಧಿಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿತ್ತು.
1996ರ ಸೆಪ್ಟೆಂಬರ್ ನಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಲಾಗಿದ್ದು 1966ರ ಸೆಪ್ಟೆಂಬರ್ 12ರಂದು ಅಂಗೀಕರಿಸಲಾಯಿತು. ಆದರೆ, ಆ ಸಮಯದಲ್ಲಿ ಸರ್ಕಾರಕ್ಕೆ ಬಹುಮತದ ಕೊರತೆಯಿದ್ದ ರಾಜ್ಯಸಭೆಯಲ್ಲಿ ಅದು ಸ್ಥಗಿತಗೊಂಡಿತು. 1997ರಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗುವ ಮುನ್ನವೇ ಸಂಯುಕ್ತ ರಂಗ ಸರ್ಕಾರ ಪತನಗೊಂಡಿತು.
ನಂತರ 1998, 1999, 2008 ಮತ್ತು 2010ರಲ್ಲಿ ಲೋಕಸಭೆಯಲ್ಲಿ ಮಸೂದೆಯನ್ನು ಪುನಃ ಪರಿಚಯಿಸಲಾಯಿತು. ಆದರೆ ಹೆಚ್ಚಿನ ಪ್ರಮುಖ ರಾಷ್ಟ್ರೀಯ ಪಕ್ಷಗಳ ಬೆಂಬಲದ ಹೊರತಾಗಿಯೂ ಅಂಗೀಕಾರವಾಗಲಿಲ್ಲ. ಮಸೂದೆಯನ್ನು 1998ರಲ್ಲಿ ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು. ಇದು ಪರಿಷ್ಕೃತ ಕರಡು ಮಸೂದೆಯೊಂದಿಗೆ 1999ರಲ್ಲಿ ತನ್ನ ಅಂತಿಮ ವರದಿಯನ್ನು ಮಂಡಿಸಿತು. ಆದರೆ, ಆಗಿನ ಸರ್ಕಾರ ಶಾಸನ ರೂಪಿಸಲು ಮುಂದಾಗಿರಲಿಲ್ಲ.
2008ರಲ್ಲಿ ಮಸೂದೆಯನ್ನು ಮತ್ತೆ 14ನೇ ಲೋಕಸಭೆಯಲ್ಲಿ ಪರಿಚಯಿಸಲಾಯಿತು. ಅಲ್ಲಿ ಅದನ್ನು ಕೆಲವರ ಸಭಾತ್ಯಾಗದ ನಡುವೆ 9 ಮಾರ್ಚ್ 2010ರಂದು ಅಂಗೀಕರಿಸಲಾಯಿತು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರವು ಅದನ್ನು 9 ಮಾರ್ಚ್ 2010 ರಂದು ರಾಜ್ಯಸಭೆಯಲ್ಲಿ ಮಂಡಿಸಿತು. ಆದಾಗ್ಯೂ, 2014ರಲ್ಲಿ 15ನೇ ಲೋಕಸಭೆಯ ವಿಸರ್ಜನೆಯ ನಂತರ ಮಸೂದೆ ರದ್ದಾಗಿತ್ತು.
2019ರಲ್ಲಿ ಲೋಕಸಭೆ ಚುನಾವಣೆ ಮತ್ತು ರಾಜ್ಯಸಭೆಯ ರಚನೆಯ ಬದಲಾವಣೆಯು ಮಸೂದೆಯನ್ನು ಅಂಗೀಕರಿಸುವ ಭರವಸೆಯನ್ನು ಪುನರುಜ್ಜೀವನಗೊಳಿಸಿದೆ. ಮೋದಿ ಸರ್ಕಾರ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದೆ. ಕಾಂಗ್ರೆಸ್ ತನ್ನ ನಿಲುವನ್ನು ಪರಿಶೀಲಿಸಲು ಮತ್ತು ಆರಂಭಿಕ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಮಾರ್ಗಗಳನ್ನು ಶಿಫಾರಸು ಮಾಡಲು ಮನೀಶ್ ತಿವಾರಿ ನೇತೃತ್ವದ ಸಮಿತಿಯನ್ನು 2019ರಲ್ಲಿ ನೇಮಿಸಿತ್ತು.