ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ದೊರೆತಿದೆ. ಹೊಸ ಸಂಸತ್ ಭವನದಲ್ಲಿ ನಡೆಯುವ ಇಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ ಎಂಬುದು ತಿಳಿದುಬಂದಿದೆ.
ಈ ನಡುವೆಯೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಹಿಳಾ ಮೀಸಲಾತಿ ಮಸೂದೆ ನಮ್ಮದು ಎಂದಿದ್ದಾರೆ. ಸಂಸತ್ತಿಗೆ ಪ್ರವೇಶಿಸುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಹಿಳಾ ಮೀಸಲಾತಿ ಬಿಲ್ ನಮ್ಮದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನಾವು ಕೇಂದ್ರ ಸಚಿವ ಸಂಪುಟದ ವರದಿಯ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಮಸೂದೆಯ ವಿವರಗಳಿಗಾಗಿ ಕಾಯುತ್ತಿದ್ದೇವೆ. ವಿಶೇಷ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷಗಳ ಸಭೆಯಲ್ಲೇ ಈ ಬಗ್ಗೆ ಚೆನ್ನಾಗಿ ಚರ್ಚಿಸಬಹುದಿತ್ತು. ಗೌಪ್ಯತೆಯೊಂದಿಗೆ ಕೆಲಸ ಮಾಡುವ ಬದಲು ಒಮ್ಮತದ ನಿರ್ಧಾರ ಕೈಗೊಳ್ಳಬಹುದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನ ಮತ್ತೊಬ್ಬ ನಾಯಕ ಪಿ.ಚಿದಂಬರಂ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಜಯ ಸಿಕ್ಕಂತಾಗುತ್ತದೆ ಎಂದಿದ್ದಾರೆ.
ಮಹಿಳಾ ಸಂಸದರು ಲೋಕಸಭೆಯ 15% ಗಿಂತ ಕಡಿಮೆ ಪಾಲನ್ನು ಹೊಂದಿದ್ದಾರೆ. ಮಹಿಳೆಯರ ಪ್ರಾತಿನಿಧ್ಯವು ಅನೇಕ ರಾಜ್ಯಗಳ ವಿಧಾನಸಭೆಗಳಲ್ಲಿ 10% ಗಿಂತ ಕಡಿಮೆಯಾಗಿದೆ. ಈ ಮಸೂದೆಯನ್ನು ಆರಂಭದಲ್ಲಿ ಸೆಪ್ಟೆಂಬರ್ 12, 1996 ರಂದು ಸಂಸತ್ತಿನಲ್ಲಿ ಪರಿಚಯಿಸಲಾಗಿತ್ತು. ಆ ನಂತರ 2010ರ ಮಾರ್ಚ್ 9 ರಂದು ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಕೈಬಿಡಲಾಗಿತ್ತು.