ಗುವಾಹಟಿ: ಶೀಘ್ರದಲ್ಲೇ ಹಿಂಸಾಚಾರ ಪೀಡಿತ ಮಣಿಪುರಕ್ಕೆ ತೆರಳುತ್ತೇನೆ ಮತ್ತು ಮೂರು ದಿನಗಳ ಕಾಲ ಈಶಾನ್ಯ ರಾಜ್ಯದಲ್ಲಿ ಇದ್ದು ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಜನರೊಂದಿಗೆ ಮಾತನಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಹೇಳಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರದ ಹೊಸ ಘಟನೆಗಳು ವರದಿಯಾದ ನಂತರ ಹೇಳಿಕೆ ನೀಡಿರುವ ಶಾ, ನ್ಯಾಯಾಲಯದ ತೀರ್ಪಿನ ನಂತರ ಮಣಿಪುರದಲ್ಲಿ ಘರ್ಷಣೆಗಳು ನಡೆಯುತ್ತಿವೆ. ಶಾಂತಿ ಕಾಪಾಡಬೇಕು ಮತ್ತು ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ನಾನು ಎರಡೂ ಗುಂಪುಗಳಿಗೆ ಮನವಿ ಮಾಡುತ್ತೇನೆ ಎಂದರು.
ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಬುಡಕಟ್ಟು ಅಲ್ಲದ ಮೈಟೀಸ್ಗಳ ಬೇಡಿಕೆಯನ್ನು ಪ್ರತಿಭಟಿಸಿ ಚುರಾಚಂದ್ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಎಲ್ಲ ಬುಡಕಟ್ಟು ವಿದ್ಯಾರ್ಥಿ ಸಂಘ ಮಣಿಪುರ (ATSUM) ಕರೆದ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ಯ ಸಂದರ್ಭದಲ್ಲಿ ಮಣಿಪುರದ ಹಲವು ಜಿಲ್ಲೆಗಳಲ್ಲಿ ಮೇ ತಿಂಗಳ ಆರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಆಂದೋಲನದ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಆದಿವಾಸಿಗಳಲ್ಲದವರ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದವು.
ಮೈಟೆಯಿ ಮತ್ತು ಕುಕಿ ಸಮುದಾಯದ ಜನರ ನಡುವೆ ಜನಾಂಗೀಯ ಹಿಂಸಾಚಾರ 70 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ ಟೀಕೆ
ಶಾ ಅವರ ಅಸ್ಸಾಂ ಭೇಟಿಯ ಬಗ್ಗೆ ಕಾಂಗ್ರೆಸ್ ಗುರುವಾರ ವಾಗ್ದಾಳಿ ನಡೆಸಿದ್ದು, ಗುವಾಹಟಿಯವರೆಗೂ ಹೋಗುತ್ತಾರೆ ಆದರೆ “22 ದಿನಗಳಿಂದ ಉರಿಯುತ್ತಿರುವ” ಮಣಿಪುರಕ್ಕೆ ಭೇಟಿ ನೀಡಲು ಸೂಕ್ತವೆಂದು ಭಾವಿಸುವುದಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, “ಕೇಂದ್ರ ಗೃಹ ಸಚಿವರು ಇಂದು ಗುವಾಹಟಿಗೆ ಹೋಗುತ್ತಾರೆ, ಆದರೆ ಮಣಿಪುರವು 22 ದಿನಗಳಿಂದ ಹೊತ್ತಿ ಉರಿಯುತ್ತಿರುವಾಗ ಇಂಫಾಲಕ್ಕೆ ಭೇಟಿ ನೀಡುವುದು ಸೂಕ್ತವೆಂದು ಭಾವಿಸುವುದಿಲ್ಲ.” “ಕರ್ನಾಟಕದಲ್ಲಿ 16 ರ್ಯಾಲಿಗಳು ಮತ್ತು 15 ರೋಡ್ ಶೋಗಳನ್ನು ನಡೆಸಿದ ಇದೇ ಕೇಂದ್ರ ಗೃಹ ಸಚಿವರು, ಆದರೆ ಡಬಲ್ ಇಂಜಿನ್ ಸರ್ಕಾರ್ ಎಂದು ಕರೆಯಲ್ಪಡುವ ಸಿದ್ಧಾಂತ ಮತ್ತು ರಾಜಕೀಯದಿಂದ ಸಾಕಷ್ಟು ಬಳಲುತ್ತಿರುವ ಮಣಿಪುರದ ಜನರಿಗೆ ಸಮಯ ಸಿಗುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶಾ ಅವರು ಅಸ್ಸಾಂಗೆ ಒಂದು ದಿನದ ಭೇಟಿಯಲ್ಲಿದ್ದಾರೆ.