ಬೆಂಗಳೂರು: ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ್ದ ಪಂಚಖಾತ್ರಿಗಳ ಜಾರಿಗೆ ಸುಪ್ರೀಂಕೋರ್ಟಿನ ತೀರ್ಮಾನ ಕಂಟಕವಾಗಲಿದೆಯೇ ಎಂಬ ಚರ್ಚೆಗಳು ಕೇಳಿಬರಲಾರಂಭಿಸಿವೆ.
ಬಿಜೆಪಿಯ ನಾಯಕರಾದ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಕಳೆದ ವರ್ಷ ಆಗಸ್ಟ್ 3 ರಂದು ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಿತ್ತು. ಅದರ ಪ್ರಕಾರ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳು, ವಿಪಕ್ಷ ನಾಯಕರು, ನೀತಿ ಆಯೋಗ, ಚುನಾವಣಾ ಆಯೋಗ, ಹಣಕಾಸು ಆಯೋಗ, ಆರ್ಬಿಐ ಸೇರಿದಂತೆ ವಿವಿಧ ಸಂಸ್ಥೆಗಳ ತಜ್ಞರೊಳಗೊಂಡ ಸಮಿತಿ ರಚಿಸಲಾಗಿದೆ. ಜೊತೆಗೆ ವಿವಿಧ ತಜ್ಞರುಗಳಿಂದ ಅಭಿಪ್ರಾಯಗಳನ್ನು ಕ್ರೂಢೀಕರಿಸಲಾಗಿದೆ.
ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಈವರೆಗೂ ವರದಿ ನೀಡಿಲ್ಲ. ವಿಚಾರಣೆ ಹಲವಾರು ಬಾರಿ ಮುಂದೂಡಿಕೆಯಾಗಿವೆ. ಚುನಾವಣೆ ವೇಳೆ ರಾಜಕೀಯ ಪಕ್ಷಗಳು ನೀಡುವ ಆಶ್ವಾಸನೆಗಳು, ಉಡುಗೊರೆಗಳು ಹಾಗೂ ಕೊಡುಗೆಗಳಿಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕ ಹಿತಾಸಕ್ತಿಯ ಮೂಲ ಆಶಯ.
ಆದರೆ ಯಾವ ರೀತಿಯ ಕಡಿವಾಣ ಹಾಕಬೇಕು ಎಂಬುದು ಬೆಕ್ಕಿಗೆ ಗಂಟೆ ಕಟ್ಟುವಂತಹ ಸಂಗತಿಯಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮತದಾನರ ಮನ ಗೆಲ್ಲಲು ಉಚಿತ ಉಡುಗೊರೆಗಳು ಮತ್ತು ಆಶ್ವಾಸನೆ ನೀಡುತ್ತಲೇ ಪ್ರಚಾರ ಮಾಡುತ್ತವೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿದೆ. ಈ ಮೊದಲು ದೆಹಲಿಯ ವಿಧಾನಸಭೆಯ ಚುನಾವಣೆ ವೇಳೆ ಅಮ್ ಆದ್ಮಿ ಪಕ್ಷ ಉಚಿತ ವಿದ್ಯುತ್ ಮತ್ತು ಬಸ್ಪ್ರಯಾಣದ ಭರವಸೆ ನೀಡಿತ್ತು. ಬಳಿಕ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಇದನ್ನು ಭಾರಿ ಪ್ರಮಾಣದ ಭರವಸೆಗಳ ಘೋಷಣೆಯ ಪ್ರಯೋಗ ಮಾಡಿದೆ.
ಇತ್ತೀಚೆಗೆ ನಡೆದ ಕರ್ನಾಟಕ ಉಪಚುನಾವಣೆಯಲ್ಲಂತೂ ಪಂಚಖಾತ್ರಿಗಳದೇ ಭಾರಿ ಸದ್ದಾಗಿತ್ತು. ಜನ ಅದಕ್ಕೆ ಸ್ಪಂದಿಸಿ ಬಾರಿ ಬಹುಮತದ ಸರ್ಕಾರವನ್ನು ಚುನಾಯಿಸಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಮಧ್ಯಪ್ರದೇಶ, ರಾಜಸ್ಥಾನದ ಚುನಾವಣೆಗಳಲ್ಲೂ ಉಚಿತ ವಿದ್ಯುತ್, ಬಸ್ ಪ್ರಯಾಣ ಸೌಲಭ್ಯ, ಅಡುಗೆ ಅನಿಲ ಸಿಲಿಂಡರ್ಗಳ ಭರವಸೆಗಳನ್ನು ನೀಡುತ್ತಿದೆ. ಇದು ಯಾವ ಹಂತಕ್ಕಿದೆ ಎಂದರೆ ಆಡಳಿತಾರೂಢ ಬಿಜೆಪಿ ಅಸಹನೆಯಿಂದ ಮೈ ಪರಚಿಕೊಳ್ಳುವಷ್ಟು ವಿಪರೀತವಾಗಿದೆ.
ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಕಾಂಗ್ರೆಸಿನ ಉಚಿತ ಉಡುಗೊರೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಇವು ಅನುಷ್ಠಾನ ಯೋಗ್ಯವಲ್ಲ ಎಂದು ಕಿಡಿಕಾರಿದ್ದಾರೆ. ಈಗ ಬಿಜೆಪಿ ಪಾಳೆಯ ಕಾಂಗ್ರೆಸ್ ಚುನಾವಣೆ ವೇಳೆ ನೀಡಿದ್ದ ಪಂಚಖಾತ್ರಿಗಳನ್ನು ಭೇಷರತ್ತಾಗಿ ಜಾರಿಗೊಳಿಸಬೇಕೆಂಬ ಬೇಡಿಕೆ ಪ್ರಬಲವಾಗಿ ಕೇಳಿಬರುತ್ತಿವೆ.
ಅದೇ ವೇಳೆಗೆ ಸುಪ್ರೀಂಕೋರ್ಟ್ ಉಚಿತ ಉಡುಗೊರೆಗಳು ಹಾಗೂ ಆಶ್ವಾಸನೆಗಳ ಪರಿಶೀಲನೆಗೆ ರಚಿಸಲಾಗಿರುವ ತಜ್ಞರ ತಂಡದ ಚರ್ಚೆ ಕೂಡ ನಡೆಯುತ್ತಿದೆ. ತಜ್ಞರ ತಂಡ ಈವರೆಗೂ ವರದಿ ನೀಡಿಲ್ಲ. ಅದರ ಆಧಾರದ ಮೇಲೆ ಸುಪ್ರೀಂಕೋರ್ಟ್ ಯಾವುದೇ ಆದೇಶಗಳನ್ನು ಹೊರಡಿಸಿಲ್ಲ.
ಒಂದು ವೇಳೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿ ಉಚಿತ ಉಡುಗೊರೆಗಳು ಅಮಾನ್ಯ ಎಂದರೆ ಕಾಂಗ್ರೆಸ್ ಸರ್ಕಾರದ ಪಂಚಖಾತ್ರಿಗಳು ಇಕ್ಕಟ್ಟಿಗೆ ಸಿಲುಕಲಿವೆ. ಉಚಿತ ಪ್ರಯಾಣ, 2,000 ರೂ. ಆರ್ಥಿಕ ನೆರವು, ಪದವೀಧರರ ಮಾಸಾಶನ, 200 ಯೂನಿಟ್ ವಿದ್ಯುತ್ ಮತ್ತು 10 ಕೆ.ಜಿ. ಅಕ್ಕಿಗಾಗಿ ಕಾಯುತ್ತಿರುವವರಿಗೆ ನಿರಾಶೆಯಾಗಲಿದೆ. ಆದರೆ ಸದ್ಯಕ್ಕೆ ಅಂತಹ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿ ಪಂಚಖಾತ್ರಿಗಳು ಅಬಾದ್ಯಿತ ಎಂದು ಹೇಳಲಾಗಿದೆ.