ಬೆಂಗಳೂರು- ವಿಧಾನಸಭೆ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು,ಡಿಸೆಂಬರ್ 9 ಇಬ್ಬರು ನಾಯಕರ ಪ್ರಚಾರಕ್ಕೆ ಕರುನಾಡು ಸಾಕ್ಷಿಯಾಗಲಿದೆ.
ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರು ನಾಯಕರು ಕೂಡ ರಾಜ್ಯಕ್ಕೆ ಆಗಮಿಸಲಿದ್ದಾರೆ.ರಾಷ್ಟ್ರ ರಾಜಕಾರಣದ ಇಬ್ಬರು ಪ್ರಬಲ ನಾಯಕರು ಒಂದೇ ದಿನ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಗಮನ ಸೆಳೆದಿದ್ದು, ಏ.9ರಂದು ಇಬ್ಬರೂ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದು, ಎರಡು ಪಕ್ಷಗಳ ನಡುವೆ ಸಿದ್ದತೆ ಜೋರಾಗಿದೆ. ಈಗಾಗಲೇ ಪ್ರಧಾನಿ ಮೋದಿಯವರು ಏಪ್ರಿಲ್ 9ರಂದು ರಾಜ್ಯಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ಮೈಸೂರಿಗೆ ಆಗಮಿಸುವ ಅವರು ಬಂಡೀಪುರ ಅರಣ್ಯಕ್ಕೆ ತೆರಳಿ ಹುಲಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ. ಆದರೆ ಬಿಜೆಪಿ ನಾಯಕರು ಮತ್ತು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಪ್ರಿಲ್ 5 ರಂದು ನಿಗದಿಯಾಗಿದ್ದ ರಾಜ್ಯ ಪ್ರವಾಸ ದಿಢೀರನೇ ಎಪ್ರಿಲ್ 9ಕ್ಕೆ ಮುಂದೂಡಿಕೆಯಾಗಿದ್ದು.ಯಾಕೆ ದಿನಾಂಕವನ್ನು ಮುಂದೂಡಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ.
ರಾಹುಲ್ ಗಾಂಧಿ ಅವರು ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಕೋಲಾರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಜೈ ಭಾರತ್ ರ್ಯಾಲಿಯನ್ನು ಉದ್ಘಾಟಿಸಲಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ, ರಾಹುಲ್ ಗಾಂಧಿ ನಡೆಸುತ್ತಿರುವ ಮೊದಲ ಸಾರ್ವಜನಿಕ ಸಭೆ ಇದಾಗಿದೆ. ವಿಶೇಷವೆಂದರೆ ಲೋಕಸಭೆ ಸದಸ್ಯತ್ವ ಅನರ್ಹತೆಗೆ ಕಾರಣವಾದ, ಮೋದಿ ಉಪನಾಮದ ಕುರಿತಾದ ಭಾಷಣವನ್ನು 2019ರಲ್ಲಿ ರಾಹುಲ್ ಗಾಂಧಿ ಅವರು ಕೋಲಾರದಲ್ಲೇ ಮಾಡಿದ್ದರು.
ಇದೀಗ ಕೋಲಾರದಿಂದಲೇ ಮತ್ತೆ ರಾಜಕೀಯ ಪ್ರಚಾರವನ್ನ ಆರಂಭಿಸುತ್ತಿರುವುದು ಮತ್ತಷ್ಟು ಕುತೂಹಲ ಹುಟ್ಟು ಹಾಕುವಂತೆ ಮಾಡಿದೆ. ರಾಹುಲ್ ಗಾಂಧಿ ಅವರು ಏಪ್ರಿಲ್ 9ರಂದು ಕೋಲಾರಕ್ಕೆ ಆಗಮಿಸಲಿದ್ದು,
ಜೈ ಭಾರತ್ ಮೆಗಾ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಏಪ್ರಿಲ್ 11ರಂದು ಅವರು ವಯನಾಡ್ಗೆ ಭೇಟಿ ನೀಡಲಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಶತಾಯಗತಾಯ ಈ ಚುನಾವಣೆಯನ್ನು ಗೆಲ್ಲಬೇಕು ಎಂಬ ಹುಮ್ಮಸ್ಸಿನಿಂದ ರಾಜ್ಯಕ್ಕೆ ದೆಹಲಿ ನಾಯಕರು ಹಲವು ರಣತಂತ್ರ ರೂಪಿಸುತ್ತಿದ್ದು, ಚುನಾವಣಾ ಪ್ರಚಾರವನ್ನ ಜೋರಾಗಿಯೇ ನಡೆಸುತ್ತಿವೆ.