ಉತ್ತರಪ್ರದೇಶ: ಪ್ರಿಯಾಂಕ ಗಾಂಧಿ ಅಷ್ಟ ಸೂತ್ರ ಕಾಂಗ್ರೆಸ್‌ಗೆ ಯಶ ತರುವುದೇ?

ರಾಜಕೀಯ ವಿರೋಧಿಗಳ ನಿದ್ದೆಗೆಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಟ್ಟ ನಡೆ

ಉತ್ತರಪ್ರದೇಶ: ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನಿಸಿಕೊಂಡಿರುವ ಭಾರತದ ಅಧಿಕಾರದ ಚುಕ್ಕಾಣಿ ಹಿಡಿದು ಹೊಸದಿಲ್ಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕಾದರೆ ಅದರ ಹೆಬ್ಬಾಗಿಲಿನಂತೆ ಇರುವ ಉತ್ತರಪ್ರದೇಶ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಸೀಟುಗಳನ್ನು ಗೆಲ್ಲುವುದು ಅನಿವಾರ್ಯ.

ಹಿಂದಿ ಭಾಷಿಕ ರಾಜ್ಯಗಳ ಪೈಕಿ ಅತಿ ದೊಡ್ಡ ರಾಜ್ಯವಾಗಿರುವ ಜತೆಗೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಿರುವ ಉತ್ತರಪ್ರದೇಶ ರಾಜ್ಯದಲ್ಲಿ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸಂಪೂರ್ಣ ನೆಲಕಚ್ಚಿದೆ. ಸ್ವಾತಂತ್ರ್ಯದ ನಂತರ ದೊಡ್ಡ ರಾಜ್ಯವೆಂಬ ಹೆಗ್ಗಳಿಕೆಯನ್ನು ಹೊಂದಿದ್ದ ಉತ್ತರಪ್ರದೇಶದಲ್ಲಿ ನಿರಂತರವಾಗಿ ಅಧಿಕಾರ ನಡೆಸಿಕೊಂಡು ಬಂದಿದ್ದ ಕಾಂಗ್ರೆಸ್ ಪಕ್ಷವು 2017ರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ಜೋಡಿಯನ್ನು ಎದುರಿಸಲಾಗದೆ ಹೀನಾಯವಾಗಿ ಸೋತಿತ್ತು. ಇದಕ್ಕೆ ಪೂರಕವಾಗಿ 2018ರ ಲೋಕಸಭಾ ಚುನಾವಣೆಯಲ್ಲಿ ಆಮೇಠಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸೋಲು ಕಾಣುವ ಜತೆಗೆ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ತನ್ನ ದುರ್ಬಲತೆಯನ್ನು ಸಾಬೀತುಪಡಿಸಿತ್ತು. ಉತ್ತರ ಪ್ರದೇಶದ ಲೋಕಸಭೆಯ ೮೦ ಸ್ಥಾನಗಳಲ್ಲಿ ಬಿಜೆಪಿ ೬೨ ಸ್ಥಾನಗಳನ್ನು ಗೆದ್ದು ಮೋದಿ ಅವರು ಎರಡನೇ ಬಾರಿಗೆ ದಿಲ್ಲಿಯ ಗದ್ದುಗೆ ಹಿಡಿದರೆ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.

ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋನಿಯಾಗಾಂಧಿ ಅವರೊಬ್ಬರು ಗೆಲ್ಲುವ ಮೂಲಕ ಉಳಿದ 79 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋತು ಮುಖಭಂಗಕ್ಕೊಳಗಾಗಿತ್ತು. ಹೀಗಾಗಿ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ನೆಲೆ ಕಾಣುವುದು ಅಸಾಧ್ಯ ಎನ್ನುವ ಮಾತು ರಾಜಕೀಯ ಪಂಡಿತರು ಹೇಳುವ ಹೊತ್ತಿನಲ್ಲೇ ಮತ್ತೊಮ್ಮೆ ಕಾಂಗ್ರೆಸ್ ಪುಟಿದೇಳುವ ಕರಾಮತ್ತು ಶುರುವಾಗಿದೆ.

ಸ್ವಾತಂತ್ರ್ಯ ಬಂದ ಮೇಲೆ ಜವಾಹರಲಾಲ್ ನೆಹರು ಕಾಲದಿಂದ ಡಾ.ಮನಮೋಹನ್ ಸಿಂಗ್ ತನಕ ಅತಿ ಹೆಚ್ಚು ವರ್ಷಗಳ ಕಾಲ ದೇಶದ ಚುಕ್ಕಾಣಿ ಹಿಡಿದಂತೆ ಉತ್ತರಪ್ರದೇಶದಲ್ಲಿ ೧೯೪೬ರಲ್ಲಿ ಗೋವಿಂದ ವಲ್ಲಭ್ ಪಂತ್ ಅವರಿಂದ ಚರಣ್‌ಸಿಂಗ್, ವಿ.ಪಿ.ಸಿಂಗ್ ಅವರಾದಿಯಾಗಿ 989ರ ಎನ್.ಡಿ.ತಿವಾರಿ ತನಕ ಕಾಂಗ್ರೆಸ್ ತನ್ನ ಅಧಿಪತ್ಯ ಸಾಧಿಸಿ ಆಳ್ವಿಕೆ ನಡೆಸಿತ್ತು. ಬಳಿಕ ಉತ್ತರಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ, ಅಯೋಧ್ಯೆ, ಮಥುರಾ ವಿಚಾರವನ್ನು ಮುಂದಿಟ್ಟುಕೊಂಡು ತನ್ನ ನೆಲೆಯನ್ನು ವಿಸ್ತರಿಸಿಕೊಂಡ ಬಿಜೆಪಿ ಅಧಿಕಾರಕ್ಕೇರುವ ಮೂಲಕ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಿತ್ತು. ಈಗಿನ ವಿದೇಶಾಂಗ ಸಚಿವ ರಾಜನಾಥ್ ಸಿಂಗ್, ರಾಮಮಂದಿರ ನಿರ್ಮಾಣದ ಹೋರಾಟಗಾರ ಕಲ್ಯಾಣ್ ಸಿಂಗ್, ರಾಮಪ್ರಸಾದ್ ಗುಪ್ತ ಅಧಿಕಾರ ನಡೆಸಿದ್ದರು. ನಂತರ ಮೇಲ್ವರ್ಗ ಮತ್ತು ಯಾದವರ ಮತಗಳನ್ನು ಕ್ರೋಢೀಕರಿಸಿದ ಫಲವಾಗಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಮುಲಾಯಂಸಿಂಗ್ ಯಾದವ್ ಮುಖ್ಯಮಂತ್ರಿಯಾದರೆ, ನಂತರ ದಲಿತರು-ಬ್ರಾಹ್ಮಣರನ್ನು ಒಟ್ಟುಗೂಡಿಸಿದಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸಿಎಂ ಆಗಿದ್ದರು. ರಾಜ್ಯ ರಾಜಕಾರಣಕ್ಕಿಂತಲೂ ದೇಶದ ಚುಕ್ಕಾಣಿ ಹಿಡಿದು ಪ್ರಧಾನಿ ಪಟ್ಟಕ್ಕೇರುವ ಕನಸು ಕಾಣಲು ಆರಂಭಿಸಿದ ಮಾಯಾವತಿ ಅವರಿಗೆ ರಾಜ್ಯದಲ್ಲಿ ನಿಯಂತ್ರಣ ತಪ್ಪಿತು. ಅದರಿಂದ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ೨೦೧೨ರಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದರು.

ಉತ್ತರಪ್ರದೇಶದಲ್ಲಿ ಅಧಿಕಾರ ಹಿಡಿದ ಮೇಲೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಮುಸ್ಲಿಂ ನಾಯಕ ಅಜಂಖಾನ್, ಮುಲಾಯಂ ಸಹೋದರ ಶಿವಪಾಲ್ ಯಾದವ್ ಅವರ ಒಳಜಗಳ,ಆಂತರಿಕ ಸಂಘರ್ಷದ ಪರಿಣಾಮವಾಗಿ ಎಸ್‌ಪಿಯಲ್ಲಿ ಒಡಕುಂಟಾಯಿತು. ಇದೇ ಹೊತ್ತಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರಧಾನಿ ನರೇಂದ್ರಮೋದಿ ಹಾಗೂ ರಾಜಕೀಯ ತಂತ್ರಗಾರಿಕೆಯ ಚತುರ ಅಮಿತ್‌ಶಾ ಅವರ ಕಣ್ಣು ಉತ್ತರಪ್ರದೇಶದ ಮೇಲೆ ಬಿದ್ದಿತ್ತು. ಉತ್ತರಪ್ರದೇಶವನ್ನು ಬಿಜೆಪಿ ಮುಡಿಗೆ ಹಾಕಿಕೊಳ್ಳಬೇಕೆಂದು ನಿಶ್ಚಯಿಸಿದ್ದ ಈ ಜೋಡಿ, ರಾಜ್ಯದಲ್ಲಿ 2017ರ ಚುನಾವಣೆಯ ಸಂದರ್ಭದಲ್ಲಿ ೮೦ಕ್ಕೂ ಹೆಚ್ಚು ಬೃಹತ್ ಸಮಾವೇಶ, 120ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸುವ ಮೂಲಕ ಇಡೀ ಯುಪಿಯಲ್ಲಿ ಬಿರುಗಾಳಿಯನ್ನುಂಟು ಮಾಡಿದರು. ಅದರ ಫಲವಾಗಿ ಅತ್ಯಧಿಕ 305 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದರೆ, ಎಸ್‌ಪಿ-46, ಬಹುಜನ ಸಮಾಜ ಪಕ್ಷ-15 ಗೆದ್ದರೆ, ಕಾಂಗ್ರೆಸ್ ಎರಡಂಕಿ ದಾಟಲು ಸಾಧ್ಯವಾಗದೆ ಕೇವಲ 7 ಸ್ಥಾನಗಳನ್ನು ಗಳಿಸಿ ತೀವ್ರ ಕಳಪೆ ಸಾಧನೆ ಮಾಡಿತ್ತು. ಇದರಿಂದಾಗಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕಥೆ ಮುಗಿದು ಹೋಯಿತು ಎನ್ನುವ ಹಂತಕ್ಕೆ ಬಂದಿರುವಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಹೊಸ ಬದಲಾವಣೆ ಗಾಳಿ ಬೀಸುವಂತೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಗತಕಾಲದ ವೈಭವದ ದಿನಗಳು ಮರುಕಳಿಸುವಂತೆ ಮಾಡಲು ಸಾಧ್ಯವಾಗದೆ ಇದ್ದರೂ ಬಿಜೆಪಿ ವಿರುದ್ಧ ಹೋರಾಡಲು ನೇರವಾಗಿ ಧುಮುಕಿರುವುದರಿಂದ ಕಾಂಗ್ರೆಸ್ ಭವಿಷ್ಯ ಬದಲಾಗುವಂತಹ ಸನ್ನಿವೇಶ ಕಾಣಿಸಿಕೊಂಡಿದೆ. 2022ರ ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ಬರುತ್ತಿರುವುದರಿಂದ ಉತ್ತರಪ್ರದೇಶದಲ್ಲಿ ಬದಲಾವಣೆಯ ಪರ್ವವನ್ನು ತರಲು ಹೊರಟಿರುವ ಜೊತೆಗೆ ಮೋದಿ-ಅಮಿತ್‌ಶಾ ಜೋಡಿಯಲ್ಲೂ ನಡುಕವನ್ನುಂಟು ಮಾಡಲು ರಣತಂತ್ರ ಹೆಣೆದಿದ್ದಾರೆ.

‘‘ಉತ್ತರಪ್ರದೇಶದಲ್ಲಿ ಮೇಲ್ವರ್ಗದ ಮತಗಳನ್ನು ಕಳೆದುಕೊಂಡು ದೊಡ್ಡ ಮಟ್ಟದಲ್ಲಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಜಾತಿ ಸಮೀಕರಣದ ಮೂಲಕವೇ ಅಷ್ಟಸೂತ್ರವನ್ನು ರಚಿಸಿ ಬದಲಾವಣೆ ತರಲು ಮುಂದಾಗಿದ್ದಾರೆ. ಒಂದು ವೇಳೆ ಪ್ರಿಯಾಂಕಗಾಂಧಿ ಅವರ ಅಷ್ಟಸೂತ್ರ ಸಫಲವಾದರೆ ಕಾಂಗ್ರೆಸ್ ಭವಿಷ್ಯವೇ ಬದಲಾಗುವುದರಲ್ಲಿ ಅನುಮಾನವೇ ಇಲ್ಲ.

ದಲಿತರು,ಹಿಂದುಳಿದ, ಅಲ್ಪಸಂಖ್ಯಾತರ ಮತಗಳ ಜತೆಗೆ ಕೈಬಿಟ್ಟು ಹೋಗಿರುವ ಬ್ರಾಹ್ಮಣ ಮತ್ತು ಯಾದವ ಸಮುದಾಯವನ್ನು ಸೆಳೆಯಲು ಪದಾಧಿಕಾರಿಗಳ ಪಟ್ಟಿಯಲ್ಲಿ ಈ ವರ್ಗದ ಮುಖಂಡರಿಗೆ ಸಿಂಹಪಾಲು ನೀಡುವ ಮೂಲಕ ತಮ್ಮೊಂದಿಗೆ ಕೈಜೋಡಿಸಬೇಕು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ. ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್ ಕೊಡುವ ಮಾತನ್ನು ಘೋಷಣೆ ಮಾಡುವ ಜೊತೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್ ಮತ್ತು ಸ್ಕೂಟಿ ವಾಹನ ಕೊಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ. ವಿಶೇಷವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ 20 ಲಕ್ಷ ಉದ್ಯೋಗವನ್ನು ಭರ್ತಿ ಮಾಡುವ ಮೂಲಕ ಪದವೀಧರರನ್ನು ಕಾಂಗ್ರೆಸ್‌ನತ್ತ ಚಿತ್ತಹರಿಸುವಂತೆ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಜತೆಗೆ ಕೊರೊನಾದಿಂದ ಗುಣಮುಖರಾದವರ ಕುಟುಂಬಕ್ಕೆ ನೆರವಾಗಲು 25 ಸಾವಿರ ರೂ. ಪ್ರೋತ್ಸಾಹಧನ, ಎಲ್ಲ ರೋಗಗಳಿಗೂ 10 ಲಕ್ಷ ರೂ.ವೆಚ್ಚದ ತನಕ ಉಚಿತ ಚಿಕಿತ್ಸೆ ನೀಡುವುದನ್ನು ಘೋಷಣೆ ಮಾಡಿದ್ದಾರೆ. ಇದು ಅತಿ ಹೆಚ್ಚು ಬಡವರು, ಮಧ್ಯಮ ವರ್ಗದವರ ಮನತಟ್ಟುವಂತೆ ಮಾಡಿದೆ.

ವಿಶೇಷವಾಗಿ ಯೋಗಿ ಆದಿತ್ಯನಾಥ್ ಸರ್ಕಾರ ರೈತರ ವಿಚಾರದಲ್ಲಿ ಅನುಸರಿಸುತ್ತಿರುವ ನಡೆಯ ವಿರುದ್ಧ ಹೋರಾಟಕ್ಕೆ ಇಳಿದಿರುವ ಪ್ರಿಯಾಂಕಗಾಂಧಿ ಅವರಿಗೆ ವ್ಯಾಪಕ ಬೆಂಬಲ ದೊರೆತಿದೆ. ‘‘ಸೋನ್ ಭದ್ರಾ, ಹಥ್ರಾಸ್ ದಲಿತ ಹೆಣ್ಣು ಮಗಳ ಅತ್ಯಾಚಾರ ಪ್ರಕರಣ, ಪ್ರತಿಭಟನಾನಿರತ ರೈತರ ಮೇಲೆ ವಾಹನ ಹರಿಸಿದ ಲಖಿಂಪುರ ಕೇಸ್‌ನಲ್ಲಿ ಹೋರಾಟಕ್ಕೆ ಇಳಿದ ಅವರಿಗೆ ಉತ್ತರಪ್ರದೇಶ ಸರ್ಕಾರ ತಡೆಹಾಕಿರುವುದು ಜನರ ಮನದಲ್ಲಿ ಅತೃಪ್ತಿಯನ್ನುಂಟು ಮಾಡಿದೆ. ಗ್ಯಾಂಗ್‌ರೇಪ್‌ಗೆ ಒಳಗಾದ ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಅವಕಾಶ ಕೊಡದೆ ನಿರ್ಬಂಧ ವಿಧಿಸಿದ್ದರೆ, ಲಖಿಂಪುರ ಪ್ರಕರಣದಲ್ಲೂ ಸ್ಥಳಕ್ಕೆ ಭೇಟಿ ನೀಡಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದು ತಡೆಹಾಕಿದರು. ಹೀಗಾಗಿ, ಉತ್ತರಪ್ರದೇಶದಲ್ಲಿ ಜನರ ಮನಗೆಲ್ಲಲು ಮುಂದಾಗಿರುವ ಪ್ರಿಯಾಂಕಗಾಂಧಿ ಅವರ ನಡೆ ಈಗ ಕಾಂಗ್ರೆಸ್‌ನ ಆತ್ಮವಿಶ್ವಾಸವನ್ನು ಮೂಡಿಸಿರುವುದಲ್ಲದೆ ಅದರ ಭವಿಷ್ಯ ಬದಲಾಗುವುದೇ ಎನ್ನುವುದು ರಾಜಕೀಯ ಚಿಂತಕರ ಮಾತಾಗಿದೆ.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಯುಪಿ ನಾಯಕತ್ವವನ್ನು ವಹಿಸಿಕೊಳ್ಳಲು ಸಜ್ಜಾಗಿದ್ದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ನಂತರ ಹಿಂದೇಟು ಹಾಕಿ ಅಮ್ಮನ ಕ್ಷೇತ್ರಕ್ಕೆ ಸೀಮಿತವಾಗಿದ್ದರು. ಆದರೆ, ತನ್ನ ಅಜ್ಜಿ ಉಕ್ಕಿನ ಮಹಿಳೆ ಇಂದಿರಾಗಾಂಧಿ ಮುಖಚಹರೆಯನ್ನು ಹೊಂದಿರುವ ಪ್ರಿಯಾಂಕಗಾಂಧಿ ಅವರು ಈಗ ಉತ್ತರಪ್ರದೇಶದಲ್ಲಿ ಇಟ್ಟಿರುವ ರಾಜಕೀಯ ನಡೆಯಿಂದಾಗಿ ಕಾಂಗ್ರೆಸ್‌ನಲ್ಲಿ ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ’.- ರಮೇಶ್‍ ನಾಯಕ್

× Chat with us