ಟೈಮ್ಸ್ ಆಫ್ ಇಂಡಿಯಾದ ಟೈಗರ್ ಆಂಥಮ್ (ಹುಲಿ ಗೀತೆ)ನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ಲಾಘಿಸಿದ್ದಾರೆ. “ಹುಲಿ ಸಂರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಸಮೂಹ ಉತ್ತಮ ಪ್ರಯತ್ನ ನಡೆಸಿದೆ,” ಎಂದು ಅವರು ಬಣ್ಣಿಸಿದ್ದಾರೆ. “ಜನರಿಗೆ ಧನ್ಯವಾದಗಳು, ನಮ್ಮ ದೇಶವು ಈ ಕ್ಷೇತ್ರದಲ್ಲಿ ಶ್ಲಾಘನೀಯ ಪ್ರಗತಿಯನ್ನು ಸಾಧಿಸಿದೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ. ಮೇ 24ರಂದು ಬಿಡುಗಡೆಯಾದ ದಿನದಿಂದ ಇದು 4 ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಗಳಿಸಿದೆ.
ಈ ಗೀತೆಯಲ್ಲಿ ಹುಲಿ ಮರಿ ಮತ್ತು ಅದರ ತಾಯಿಯನ್ನು ಹತ್ತಿರದಿಂದ ತೋರಿಸಲಾಗಿದ್ದು, ತನ್ನ ಮರಿಯ ರಕ್ಷಣೆಗೆ ತೊಡಗುವ ತಾಯಿಯ ಆಪ್ತ ಸನ್ನಿವೇಶಗಳು ಇದರಲ್ಲಿವೆ. ಟೈಮ್ಸ್ ಆಫ್ ಇಂಡಿಯಾದ ಸೇವಿಂಗ್ ಅವರ್ ಸ್ಟ್ರಿಪ್ಸ್ (#SavingOurStripes) ಅಭಿಯಾನದ ಭಾಗವಾಗಿ ಇದರನ್ನು ಬಿಡುಗಡೆ ಮಾಡಲಾಗಿದ್ದು, ಪ್ರಾಜೆಕ್ಟ್ ಟೈಗರ್ನ 50 ವರ್ಷಗಳ ಸವಿ ನೆನಪಿಗಾಗಿ ಏಪ್ರಿಲ್ 1ರಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ಈ ಗೀತೆಗೆ ಮೆಚ್ಚು ಸೂಚಿಸಿದ್ದಾರೆ. “ಸೂಪರ್ ವಿಡಿಯೋ. ಹುಲಿ ಮತ್ತು ಮರಿಯ ನಡುವಿನ ಪ್ರೀತಿ ನೋಡಲು ಮಧುರವಾಗಿದೆ. ಟೈಮ್ಸ್ ಆಫ್ ಇಂಡಿಯಾದ ಈ ಪ್ರಯತ್ನವು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
This is a good effort by the @timesofindia group towards highlighting the importance of tiger conservation. Thanks to the people, our nation has made commendable strides in this area. pic.twitter.com/VVjqWhrMQO
— Narendra Modi (@narendramodi) June 1, 2023
ಇನ್ನು ಹಲವರು ಪ್ರಧಾನಿಯವರ ಟ್ವೀಟ್ನ್ನು ಮರು ಟ್ವೀಟ್ ಮಾಡಿದ್ದು ಕಾಮೆಂಟ್ ಕೂಡ ಮಾಡಿದ್ದಾರೆ. ‘ಮುದ್ದಾದ ಮರಿಗಳು’, ‘ಹಾಡು ನಿಜವಾದ ಸಂತೋಷವನ್ನು ತಂದಿದೆ’ ಎಂದು ಬಳಕೆದಾರರು ಕಾಮೆಂಟ್ಗಳನ್ನು ಮಾಡಿದ್ದಾರೆ.
ಹುಲಿ ಗೀತೆಯನ್ನು ರಚಿಸಿದ ಶಂತನು ಮೊಯಿತ್ರಾ ಅವರು ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸಿದ್ದು, “ಈ ಚಿತ್ರ ನಮಗೆಲ್ಲರಿಗೂ ವಿಶೇಷವಾಗಿದೆ,” ಎಂದು ಹೇಳಿದ್ದಾರೆ. ಗೀತೆಯಲ್ಲಿನ ದೃಶ್ಯಗಳು ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ನಲ್ಲ ಮುತ್ತು ಅವರದ್ದು, ಅವರು ಹುಲಿಗಳ ಮೇಲಿನ ಚಿತ್ರಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನವದೆಹಲಿಯ ಪರ್ಯಾಯ ಭವನದಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಹುಲಿ ಗೀತೆಯನ್ನು ಬಿಡುಗಡೆ ಮಾಡಿದ್ದರು. ಗೀತೆಯನ್ನು ಶ್ಲಾಘಿಸಿದ್ದ ಅವರು, “ಪ್ರಾಣಿಗಳು, ಪಕ್ಷಿಗಳು, ಮರಗಳು ಮತ್ತು ಪರ್ವತಗಳಿಲ್ಲದೆ ಮನುಷ್ಯರು ಮಾತ್ರ ಭೂಮಿಯ ಮೇಲೆ ವಾಸಿಸುವ ಸನ್ನಿವೇಶವನ್ನು ನಾವು ಊಹಿಸಲು ಸಾಧ್ಯವಿಲ್ಲ,” ಎಂದು ಹೇಳಿದ್ದರು.
ಹುಲಿ ಗೀತೆಯೊಂದಿಗೆ ಮೂರು ವಿಡಿಯೋಗಳನ್ನು ಭೂಪೇಂದ್ರ ಯಾದವ್ ಬಿಡುಗಡೆ ಮಾಡಿದರು. ತನ್ವೀರ್ ಘಾಜಿ ಬರೆದಿರುವ ಸಾಹಿತ್ಯವು ಹುಲಿ ಮರಿಯ ದೃಷ್ಟಿಕೋನದಿಂದ ಕೂಡಿದ್ದು, ಜೀವನದ ಸರಳ ಆನಂದವನ್ನು ಅನುಭವಿಸಲು ಜಾಗ ನೀಡಿ ಎಂಬ ಮನವಿಯನ್ನು ಹೊಂದಿದೆ.