ನವದೆಹಲಿ: ಗುಜರಾತ್ನ 68 ಅಧೀನ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ನೀಡಿರುವ ಆದೇಶ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ನ್ಯಾಯಾಧೀಶರ ಬಡ್ತಿಯು ನ್ಯಾಯಾಂಗ ಪರಿಶೀಲನೆಗೆ ಸಂಬಂಧಿಸಿದ ವಿಚಾರವಾಗಿದ್ದರೂ ಪದೋನ್ನತಿಗೆ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರವನ್ನು ಅದು ತರಾಟೆಗೆ ತೆಗೆದುಕೊಂಡಿದೆ.
ರಾಜ್ಯ ಸರ್ಕಾರವು ಬಡ್ತಿಗೆ ಅನುಮೋದನೆ ನೀಡಿದ 68 ನ್ಯಾಯಾಧೀಶರಲ್ಲಿ ಇತ್ತೀಚೆಗೆ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸೂರತ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಹರೀಶ್ ಮನ್ಸುಖ್ ಭಾಯ್ ವರ್ಮಾ ಕೂಡ ಸೇರಿದ್ದಾರೆ.
ನ್ಯಾಯಾಂಗ ಅಧಿಕಾರಿಗಳ ಬಡ್ತಿಗಾಗಿ ಗುಜರಾತ್ ಹೈಕೋರ್ಟ್ ನೀಡಿದ ಶಿಫಾರಸುಗಳಿಗೆ ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ನ್ಯಾಯಮೂರ್ತಿ ಸಿ.ಟಿ ರವಿ ಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠ ತಡೆಯಾಜ್ಞೆ ನೀಡಿದೆ. ಜತೆಗೆ ಅದಕ್ಕೆ ಪೂರಕವಾಗಿ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಕೂಡ ತಡೆ ನೀಡಿದ್ದಾರೆ.
“ಬಡ್ತಿಗಳನ್ನು ಅರ್ಹತೆ ಹಾಗೂ ಹಿರಿತನದ ಆಧಾರದಲ್ಲಿ ಮತ್ತು ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ನಡೆಸಬೇಕು. ಹೈಕೋರ್ಟ್ ನೀಡಿದ ಶಿಫಾರಸುಗಳು ಮತ್ತು ಆನಂತರದ ಸರ್ಕಾರಿ ಅಧಿಸೂಚನೆಗಳು ಅಕ್ರಮ” ಎಂದು ನ್ಯಾ. ಎಂ.ಆರ್. ಶಾ ಹೇಳಿದ್ದಾರೆ.
“ಹೈಕೋರ್ಟ್ ನೀಡಿದ ವಿವಾದಾಸ್ಪದ ಪಟ್ಟಿ ಮತ್ತು ಅದರ ನಂತರ ರಾಜ್ಯ ಸರ್ಕಾರವು ಜಿಲ್ಲಾ ನ್ಯಾಯಾಧೀಶರಿಗೆ ಬಡ್ತಿ ನೀಡಿ ಹೊರಡಿಸಿದ ಆದೇಶವು ಕಾನೂನುಬಾಹಿರ ಮತ್ತು ಈ ನ್ಯಾಯಾಲಯದ ನಿರ್ಧಾರಕ್ಕೆ ವಿರುದ್ಧವಾಗಿದೆ ಎಂದು ನಮಗೆ ಮನದಟ್ಟಾಗಿದೆ. ಹೀಗಾಗಿ ಈ ಎರಡನ್ನೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ” ಎಂದು ನ್ಯಾಯಪೀಠ ತಿಳಿಸಿದೆ.
“ಬಡ್ತಿ ಪಟ್ಟಿಯ ಜಾರಿಗೆ ನಾವು ತಡೆ ನೀಡುತ್ತಿದ್ದೇವೆ. ಸಂಬಂಧಪಟ್ಟ ಬಡ್ತಿ ಪಡೆದ ನ್ಯಾಯಾಧೀಶರು ತಮ್ಮ ಪದೋನ್ನತಿಗೂ ಮುನ್ನ ಹೊಂದಿದ್ದ ಮೂಲ ಹುದ್ದೆಗಳಿಗೆ ಮರಳಿ ಹೋಗಬೇಕು” ಎಂದು ನ್ಯಾಯಪೀಠ ಆದೇಶಿಸಿದೆ.
ಶೇ 65ರ ಕೋಟಾ ನಿಯಮದ ಅಡಿ 68 ಮಂದಿ ನ್ಯಾಯಾಂಗ ಅಧಿಕಾರಿಗಳಿಗೆ ಬಡ್ತಿ ನೀಡಿದ ರೀತಿಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕೇಡರ್ನ ಇಬ್ಬರು ನ್ಯಾಯಾಂಗ ಅಧಿಕಾರಿಗಳು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಹಿರಿತನ ಮತ್ತು ಅರ್ಹತೆ ಆಧಾರದಲ್ಲಿ ಹಾಗೂ ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾದ ನ್ಯಾಯಾಧೀಶರನ್ನು ಶೇ 65ರ ಮೀಸಲಾತಿಯಡಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡಬೇಕು ಎಂದು ನೇಮಕಾತಿ ನಿಯಮ ಹೇಳುತ್ತದೆ. ಆದರೆ ಅರ್ಹತೆ- ಹಿರಿತನದ ತತ್ವವನ್ನು ಬದುಗೊತ್ತಿ, ಹಿರಿತನ- ಅರ್ಹತೆ ಆಧಾರದಲ್ಲಿ ನೇಮಕಾತಿಗಳನ್ನು ನಡೆಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಅರ್ಹತೆ- ಹಿರಿತನದ ತತ್ವದ ಆಧಾರದಲ್ಲಿ ಹೊಸದಾಗಿ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲು ಹೈಕೋರ್ಟ್ಗೆ ನಿರ್ದೇಶನ ನೀಡಬೇಕು ಎಂದು ಕೂಡ ಅರ್ಜಿದಾರರು ಮನವಿ ಮಾಡಿದ್ದರು.
ಈ ನಿಯಮಗಳ ಬಗ್ಗೆ ಗೊತ್ತಿದ್ದರೂ ರಾಜ್ಯ ಸರ್ಕಾರ ಈ ನ್ಯಾಯಾಧೀಶರ ಬಡ್ತಿಗೆ ಅಧಿಸೂಚನೆ ಹೊರಡಿಸಿದ್ದು ಹೇಗೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ.