ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯು ಅಂತಿಮ ಹಂತ ತಲುಪಿದೆ. ಸಮಾರೋಪಕ್ಕೂ ಮುನ್ನಾದಿನ ಪಾದಯಾತ್ರೆಯು ಶ್ರೀನಗರದ ಪಂಥಾ ಚೌಕ್ನಿಂದ ಪ್ರಾರಂಭವಾಗಿದೆ.
ರಾಹುಲ್ ಗಾಂಧಿ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರ ಅವರೊಂದಿಗೆ ಬೆಳಗ್ಗೆ 10.45ಕ್ಕೆ ಯಾತ್ರೆ ಆರಂಭಿಸಿದ್ದಾರೆ. ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಗರದ ಸೋನಾವರ್ ಪ್ರದೇಶದ ವರೆಗೆ 7 ಕಿ.ಮೀ ದೂರ ಯಾತ್ರೆ ಸಾಗಲಿದೆ. ನಗರದ ಕೇಂದ್ರದಲ್ಲಿರುವ ಲಾಲ್ ಚೌಕ್ನಲ್ಲಿ ರಾಹುಲ್ ಅವರು ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಈ ಪ್ರದೇಶದಲ್ಲಿ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಲಾಲ್ ಚೌಕ್ ಭೇಟಿ ಬಳಿಕ ಯಾತ್ರೆಯು ಲಾಲ್ ಸರೋವರದ ದಡದ ನೆಹರೂ ಪಾರ್ಕ್ನತ್ತ ಸಾಗಲಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7ರಂದು ಆರಂಭವಾದ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿದ್ದು, ಇದೇ 30ರಂದು (ಸೋಮವಾರ) ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ಅಂತ್ಯಗೊಳ್ಳಲಿದೆ.ರಾಹುಲ್ ಗಾಂಧಿ ಅವರು ಇಲ್ಲಿನ ಎಂ.ಎ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸೋಮವಾರ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಬಳಿಕ ಎಸ್.ಕೆ. ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ 23 ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ.
2019ರ ಆಗಸ್ಟ್ನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿರುವ ಮೊದಲ ರಾಜಕೀಯ ರ್ಯಾಲಿ ಇದಾಗಿದೆ.