ನವದೆಹಲಿ : 95ನೇ ಆಸ್ಕರ್ ಪ್ರಶಸ್ತಿ ಪ್ರದಾನದ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದ ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವು ಜಾಗತಿಕ ಮನ್ನಣೆ ಗಳಿಸಿದೆ. ಚಿತ್ರ ತಂಡವನ್ನು ಭೇಟಿ ಮಾಡುವ ಅವಕಾಶ ಲಭಿಸಿತು. ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರನ್ನು ಮೋದಿ ಭೇಟಿ ಮಾಡಿದ್ದಾರೆ.ಚಿತ್ರದಲ್ಲಿ ಎರಡು ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ.ಸಿಖ್ಯ ಎಂಟರ್ಟೈನ್ಮೆಂಟ್ನ ಗುನೀತ್ ಮೊಂಗಾ ಮತ್ತು ಅಚಿನ್ ಜೈನ್ ನಿರ್ಮಾಣದಲ್ಲಿ ಈ ಕಿರು ಚಿತ್ರ ಮೂಡಿಬಂದಿದೆ.
‘ಹೌಲೌಟ್’, ‘ಹೌ ಡು ಯು ಮೆಷರ್ ಎ ಇಯರ್?’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಮತ್ತು ‘ಸ್ಟ್ರೇಂಜರ್ ಅಟ್ ದಿ ಗೇಟ್’ ಸ್ಪರ್ಧೆಯಲ್ಲಿದ್ದವು. ‘ದಿ ಎಲಿಫೆಂಟ್ ವಿಸ್ಪರರ್ಸ್’ ಪ್ರಶಸ್ತಿ ಪಡೆದುಕೊಂಡಿದೆ.ಈ ಹಿಂದೆ, ಭಾರತದಿಂದ “ಸ್ಮೈಲ್ ಪಿಂಕಿ” ಮತ್ತು “ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್” ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದವು. ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್ ಕಿರುಚಿತ್ರವನ್ನು ಮೊಂಗಾ ನಿರ್ಮಿಸಿದ್ದರು.