ನವದೆಹಲಿ : ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಮತ್ತು ಇತರ ಐವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಾದ ನಳಿನಿ ಶ್ರೀಹರನ್ ಮತ್ತು ಆರ್ಪಿ ರವಿಚಂದ್ರನ್ ಅವರನ್ನು ಅವಧಿಗೂ ಮೊದಲೇ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಿತ್ತು. ನಾವು ಈಗಾಗಲೇ 30 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದೇವೆ. ರಾಜೀವ್ ಗಾಂಧಿಯ ಕೊಲೆಯ 7 ಅಪರಾಧಿಗಳ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ತಮಿಳುನಾಡು ಸರ್ಕಾರ 4 ವರ್ಷಗಳ ಹಿಂದೆಯೇ ಒಪ್ಪಿಕೊಂಡಿತ್ತು ಎಂದು ಅಪರಾಧಿಗಳಾದ ಎಸ್ ನಳಿನಿ ಮತ್ತು ಆರ್ಪಿ ರವಿಚಂದ್ರನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದರು. ಈ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿತ್ತು. ತಮ್ಮ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದಂತೆ ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2018ರ ಸೆಪ್ಟೆಂಬರ್ 9ರಂದು ನಡೆದ ಸಂಪುಟ ಸಭೆಯಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ಪರಿಗಣಿಸಲಾಗಿತ್ತು. ಸಂವಿಧಾನದ ಆರ್ಟಿಕಲ್ 161ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಅನ್ವಯಿಸಿ ಅವರ ಜೀವಾವಧಿ ಶಿಕ್ಷೆಯನ್ನು ಹಿಂತೆಗೆದುಕೊಳ್ಳಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತು.