ನವದೆಹಲಿ: ‘ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಕುರಿತು ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿ ಪೊಲೀಸರು ಭಾನುವಾರ ಬೆಳಿಗ್ಗೆ ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದು, ರಾಹುಲ್ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಭಾರತ್ ಜೋಡೊ ಪಾದಯಾತ್ರೆ ಸಂದರ್ಭದಲ್ಲಿ ಶ್ರೀಗರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ‘ಮಹಿಳೆಯರು ಈಗಲೂ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ’ ಎಂಬ ಹೇಳಿಕೆ ನೀಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ಸಂಪರ್ಕಿಸಿದ ಸಂತ್ರಸ್ತ ಮಹಿಳೆಯರ ವಿವರಗಳನ್ನು ಸಲ್ಲಿಸುವಂತೆ ಪೊಲೀಸರು ಮಾರ್ಚ್ 16ರಂದು ರಾಹುಲ್ಗೆ ನೋಟಿಸ್ ನೀಡಿದ್ದರು.
ಭಾರತ್ ಜೋಡೊ ಯಾತ್ರೆ ಮುಗಿದು 45 ದಿನಗಳಾಗಿವೆ. ದೆಹಲಿ ಪೊಲೀಸರು 45 ದಿನಗಳ ನಂತರ ವಿಚಾರಣೆಗೆ ಹೋಗುತ್ತಿದ್ದಾರೆ. ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಫೆಬ್ರುವರಿಯಲ್ಲಿ ರಾಹುಲ್ ಗಾಂಧಿಯನ್ನು ಏಕೆ ವಿಚಾರಣೆ ಮಾಡಲಿಲ್ಲ? ಪ್ರಕರಣ ಕುರಿತು ರಾಹುಲ್ ಗಾಂಧಿ ಅವರ ಕಾನೂನು ತಜ್ಞರ ತಂಡ ಪ್ರತಿಕ್ರಿಯೆ ನೀಡಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶವಿಲ್ಲದೇ ವಿನಾಕಾರಣ ಪೊಲೀಸರು ರಾಜಕೀಯ ನಾಯಕರ ಮನೆಗೆ ನುಗ್ಗಲು ಸಾಧ್ಯವೇ ಇಲ್ಲ. ತನಗೆ ನೋಟಿಸ್ ಬಂದಿದ್ದು, ಅದಕ್ಕೆ ಉತ್ತರ ನೀಡುತ್ತೇನೆ ಎಂದ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಪೊಲೀಸರು ಅವರ ಮನೆಗೆ ಹೋಗಿರುವುದು ಸರಿಯಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದ್ದಾರೆ.