ಮುಂಬೈ: ಶಿವಸೇನೆ ಮುಖಂಡ ಸಂಜಯ ರಾವುತ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ಭಾನುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಪತ್ರಾಚಾಲ್ ಭೂ ಹಗರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ರಾವುತ್ ಅವರ ಮನೆಯ ಮೇಲೆ ಇದೇ ಕಾರಣಕ್ಕೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಸಂಜಯ ರಾವುತ್ ಅವರ ಮೇಲೆ ಇಡಿ ದಾಳಿಯಿಂದ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಸಿಆರ್ ಪಿಎಫ್ ಪಡೆಯನ್ನು ನಿಯೋಜಿಸಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಮೊದಲು ಇಡಿ ಸಂಜಯ ರಾವುತ್ ಅವರ 1034 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರಡು ಬಾರಿ ಇಡಿ ಸಮನ್ಸ್ ಜಾರಿ ಮಾಡಿದ್ದರೂ ಸಂಜಯ ರಾವುತ್ ವಿಚಾರಣೆಗೆ ಹಾಜರಾಗಿರಲಿಲ್ಲ.