ಪೆಗಾಸಸ್ ಪ್ರಕರಣ : ತನಿಖೆಗೆ ತಜ್ಞರ ತಂಡ ರಚಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ : ಪೆಗಾಸಸ್ ತಂತ್ರಾಂಶ ಬಳಸಿ ಗೂಢಚಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸೂಚಿಸಿ ಸುಪ್ರೀಂಕೋರ್ಟ್ ತಜ್ಞರ ಸಮಿತಿಯನ್ನು ರಚಿಸಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ. ಇದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಇದರ ವಿರುದ್ಧದ ಅರ್ಜಿ ತಿರಸ್ಕರಿಸಬೇಕೆಂಬ ಕೇಂದ್ರದ ವಾದ ಒಪ್ಪಲ್ಲ, ಸಮಿತಿ ರಚಿಸುವ ಮನವಿಗೆ ಒಪ್ಪಿಗೆ ಕೊಟ್ಟಿದ್ದೇವೆ. ಸ್ವತಂತ್ರ ಸದಸ್ಯರನ್ನು ಆಯ್ಕೆ ಮಾಡುವುದು ದೊಡ್ಡ ಸವಾಲು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ರಾಜಕೀಯ ಚರ್ಚೆಗೆ ಹೋಗದೇ ಮೌಲ್ಯ ಎತ್ತಿ ಹಿಡಿಯಲು ಶ್ರಮಪಡಬೇಕು. ಪ್ರತಿಯೊಬ್ಬ ಭಾರತೀಯನಿಗೂ ಖಾಸಗಿತನದ ರಕ್ಷಣೆ ನೀಡಬೇಕು. ನಾವು ಮಾಹಿತಿಯ ಯುಗದಲ್ಲಿ ಬದುಕುತ್ತಿದ್ದೇವೆ. ಕೆಲ ಅರ್ಜಿಗಳು ಕೇಂದ್ರ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಪ್ರಸ್ತಾಪಿಸಿವೆ. ಈ ತೀರ್ಪಿನಲ್ಲಿ ನಾವು ಖಾಸಗಿತನದ ಹಕ್ಕಿನ ಬಗ್ಗೆ ಚರ್ಚಿಸಿದ್ದೇವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಶಾಸನದ ಮಾನ್ಯತೆ ಇಲ್ಲದೇ ಖಾಸಗಿತನದ ಹಕ್ಕಿನಲ್ಲಿ ಮೂಗುತೂರಿಸುವಿಕೆಗೆ ಅವಕಾಶವಿಲ್ಲ. ಖಾಸಗಿತನದ ಹಕ್ಕು ಅನ್ನು ಅತಿಕ್ರಮಿಸುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಕಡೆಗಣಿಸಲಾಗಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ.

× Chat with us