ಹೊಸದಿಲ್ಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 10 ದಿನಗಳ ವಿಚಾರಣೆಯ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್, ಎಸ್. ಆರ್. ಭಟ್, ಹಿಮಾ ಕೊಹ್ಲಿ ಮತ್ತು ಪಿ. ಎಸ್. ನರಸಿಂಹ ಅವರನ್ನೊಳಗೊಂಡ ಪೀಠ, ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಎ.ಎಂ. ಸಿಂಘ್ವಿ, ರಾಜು ರಾಮಚಂದ್ರನ್, ಕೆ.ವಿ. ವಿಶ್ವನಾಥನ್, ಆನಂದ್ ಗ್ರೋವರ್ ಮತ್ತು ಸೌರಭ್ ಕಿರ್ಪಾಲ್ ಅವರು ಸಲ್ಲಿಸಿದ ಮರು ವಾದವನ್ನು ಆಲಿಸಿತು.
ಬುಧವಾರದ ವಿಚಾರಣೆಯ ಸಂದರ್ಭದಲ್ಲಿ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿದ ಯಾವುದೇ ಸಾಂವಿಧಾನಿಕ ಘೋಷಣೆಯು ಸರಿಯಾದ ಕ್ರಮ ಆಗಿರುವುದಿಲ್ಲ. ಸಲಿಂಗ ವಿವಾಹವು ಸರಿಯಾದ ಕ್ರಮ ಅಲ್ಲ ನ್ಯಾಯಾಲಯವು ಅದರ ಪರಿಣಾಮವನ್ನು ಊಹಿಸಲು, ಗ್ರಹಿಸಲು ಮತ್ತು ವ್ಯವಹರಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.