ಜನವರಿ 23ರಿಂದಲೇ ಗಣರೋಜ್ಯೋತ್ಸವ ಸಂಭ್ರಮಾಚರಣೆ ಆರಂಭ; ಇದಕ್ಕಿದೆ ವಿಶೇಷ ಕಾರಣ

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಒಳಗೊಂಡಂತೆ ಈ ಬಾರಿಯ ಗಣರಾಜ್ಯೋತ್ಸವವು ಜನವರಿ 23 ರಿಂದ ಪ್ರಾರಂಭವಾಗಲಿದೆ ಎಂದು ಸರ್ಕಾರಿ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎನ್​ಐ ವರದಿ ಮಾಡಿದೆ. ಪ್ರತಿ ವರ್ಷ ಜನವರಿ 24ರಿಂದ ಗಣರಾಜ್ಯೋತ್ಸವದ ಆಚರಣೆ ಆರಂಭವಾಗುತ್ತಿತ್ತು. ‘‘ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಸ್ಮರಿಸಲು ಮತ್ತು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳಲ್ಲಿ ಇದೂ ಒಂದಾಗಿದೆ’’ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23ನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಲು ಸರ್ಕಾರ ಪ್ರಾರಂಭಿಸಿತ್ತು.

ಸರ್ಕಾರವು ಅನೇಕ ಮಹನೀಯರ ದಿನಾಚರಣೆಗಳನ್ನು ಆಚರಿಸುತ್ತಿದೆ. ಆಗಸ್ಟ್ 14 ಅನ್ನು ‘ವಿಭಜನೆಯ ಕರಾಳ ನೆನಪಿನ ದಿನ’, ಅಕ್ಟೋಬರ್ 31 ಅನ್ನು ‘ರಾಷ್ಟ್ರೀಯ ಏಕತಾ ದಿನ’ (ಸರ್ದಾರ್ ಪಟೇಲ್ ಅವರ ಜನ್ಮದಿನ), ನವೆಂಬರ್ 15 ‘ಜನಜಾತಿಯ ಗೌರವ ದಿವಸ’ (ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವ), ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಮತ್ತು ಡಿಸೆಂಬರ್ 26 ಅನ್ನು ವೀರ್ ಬಾಲ್ ದಿವಸ್ (ಗುರು ಗೋಬಿಂದ್ ಸಿಂಗ್ ಅವರ ನಾಲ್ವರು ಪುತ್ರರಿಗೆ ಗೌರವ) ಆಗಿ ಆಚರಿಸಲಾಗುತ್ತದೆ.

ಇದೇ ಮಾದರಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ‘ಪರಾಕ್ರಮ್ ದಿವಸ್’ ಆಗಿ ಆಚರಿಸಲಾಗುತ್ತದೆ. ಈ ಬಾರಿ ಸರ್ಕಾರವು ಅದನ್ನು ಗಣರಾಜ್ಯೋತ್ಸವ ಆಚರಣೆಯ ವೇಳಾಪಟ್ಟಿಗೆ ಸೇರಿಸಿದೆ. ಈ ಮೂಲಕ ವಿಶೇಷ ಗೌರವ ಸಲ್ಲಿಸಲಾಗುತ್ತದೆ.

× Chat with us