ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸದೆ, ವರುಣಾದಿಂದಲೇ ಕಣಕ್ಕೀಳಿಯಬೇಕು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಲಹೆ ಮಾಡಿದ್ದಾರೆ.
ಈ ಬೆಳವಣಿಗೆಯಿಂದಾಗಿ ಭಾನುವಾರ ಕೋಲಾರಕ್ಕೆ ಹೊರಟಿದ್ದ ಸಿದ್ದರಾಮಯ್ಯ ಅವರು ತಮ್ಮ ಪ್ರವಾಸವನ್ನುಪ ಕೊನೆ ಕ್ಷಣದಲ್ಲಿ ರದ್ದುಪಡಿಸಿ, ಇದೀಗ ತಮ್ಮ ಹಳೆಯ ಕ್ಷೇತ್ರವಾದ ವರುಣದಿಂದಲೇ ಮತ್ತೊಮ್ಮೆ ರಾಜಕೀಯ ಅದೃಷ್ಟ ಪರೀಕ್ಷೀಸಲು ಮುಂದಾಗಿದ್ದಾರೆ.
ಶುಕ್ರವಾರ ಕಾಂಗ್ರೆಸ್ ಹೈಕಮಾಂಡ್ ನಾಯಕ ಸಭೆಯಲ್ಲಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್ ಸಲಹೆ ನೀಡಿದ್ದು, ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹಾಗೂ ಕೋಲಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರೆ.
ನಿಮಗೆ ಕೋಲಾರ ಸೂಕ್ತ ಅಲ್ಲ, ನೀವು ವರುಣಾದಿಂದಲೇ ಸ್ಪರ್ಧೆ ಮಾಡಿ, ನಿಮ್ಮ ಪ್ರತಿ ಒಂದು ನಿಮಿಷವೂ ಪಕ್ಷಕ್ಕೆ ಅಗತ್ಯವಾಗಿದೆ. ನಾಮಪತ್ರ ಹಾಕಿ ಬೇರೆ ಕಡೆ ಪ್ರಚಾರ ಮಾಡಿ ಎಂದು ಸ್ವತಃ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದು, ಇನ್ನೂ ರಾಹುಲ್ ಗಾಂಧಿ ಅವರ ಸೂಚನೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಜೊತೆ ಶುಕ್ರವಾರ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದ ರಾಹುಲ್: ನಿನ್ನೆ ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ರಾಹುಲ್ ಗಾಂಧಿ ಸಿದ್ದರಾಮಯ್ಯರ ಜೊತೆ ಪ್ರಿಯಾಂಕಾ ಗಾಂಧಿ ಅವರ ಕಚೇರಿಯಲ್ಲಿ ಪ್ರತ್ಯೇಕವಾಗಿ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋಲಾರ ವಿಷಯ ಹಾಗೂ ಇತರ ಟಿಕೆಟ್ ಬಗ್ಗೆ ಮಾತುಕತೆ ನಡೆದಿದೆ. ಕೋಲಾರ ಕ್ಷೇತ್ರದ ವರದಿಗಳು ನಿಮಗೆ ಸೂಕ್ತ ಎನಿಸುತ್ತಿಲ್ಲ, ಇನ್ನೊಮ್ಮೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಬಿಜೆಪಿ ತಂತ್ರಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಸಲಹೆ ನೀಡಿದ್ದಾರೆ.
ಮುಂದಿನ ಆಯ್ಕೆ ಏನು?
ಈಗಾಗಲೇ ಬಾದಾಮಿ ಕ್ಷೇತ್ರ ಬಿಡಲು ತೀರ್ಮಾನಿಸಿರುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸುರಕ್ಷಿತ ಕ್ಷೇತ್ರವಾಗಿ ಉಳಿದಿರುವುದು ವರುಣಾ ಕ್ಷೇತ್ರ. ವರುಣಾದ ಶಾಸಕರಾಗಿರುವ ಯತೀಂದ್ರ ಸಿದ್ದರಾಮಯ್ಯ ತಂದೆಗಾಗಿ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ವರುಣಾ ಶಾಸಕರಾಗಿದ್ದ ಸಿದ್ದರಾಮಯ್ಯ ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹಾಗಾಗಿ ವರುಣಾ ಕಾಂಗ್ರೆಸ್ ಭದ್ರಕೋಟೆ ಆಗಿದೆ.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಸೋತಿದ್ದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಲ ಕೋಲಾರ ಮತ್ತು ವರುಣಾದಿಂದ ಸ್ಪರ್ಧೆ ಮಾಡುವ ಸಾಧ್ಯತೆಗಳನ್ನ ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ರೆ ವರುಣಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪುತ್ರ ಯತೀಂದ್ರಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ.