ಕಾಂಗ್ರೆಸ್​ ಶಾಸಕರಿಂದ ಪೊಲೀಸರ ಪ್ಯಾಂಟ್ ಒದ್ದೆಯಾಗಬಹುದು ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ನೋಟಿಸ್ ಜಾರಿ

ಚಂಡೀಗಢ: ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿವಾದಕ್ಕೀಡಾಗಿದ್ದಾರೆ. ತಮ್ಮ ಪಕ್ಷದ ಸದಸ್ಯರನ್ನು ಹೊಗಳುವ ನವಜೋತ್ ಸಿಂಗ್ ಸಿಧು ಅವರ ಭಾಷಣದ ವಿಡಿಯೋ ವೈರಲ್ ಆಗಿದ್ದು, ಪಂಜಾಬ್ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ನವಜೋತ್ ಸಿಂಗ್ ಸಿಧು ಅವರ ಈ ಅವಹೇಳನಕಾರಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ನಾಯಕ ದಲ್ಜಿತ್ ಸಿಂಗ್ ಚೀಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸ್ ಅಧಿಕಾರಿಯೊಬ್ಬರು ಸಿಧುಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.

“ಪೊಲೀಸರನ್ನು ಅವಮಾನಿಸಿದ್ದಕ್ಕಾಗಿ ನಾನು ನವಜೋತ್ ಸಿಂಗ್ ಸಿಧು ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದೇನೆ” ಎಂದು ಚಂಡೀಗಢದ ಉಪ ಪೊಲೀಸ್ ವರಿಷ್ಠಾಧಿಕಾರಿ ದಿಲ್ಶರ್ ಸಿಂಗ್ ಚಂದೇಲ್ ಹೇಳಿದ್ದಾರೆ.

ಈ ಹೇಳಿಕೆಯನ್ನು ಖಂಡಿಸಿ ಸಬ್ ಇನ್ಸ್‌ಪೆಕ್ಟರ್ ಕೂಡ ವಿಡಿಯೋ ಸಂದೇಶವನ್ನು ನೀಡಿದ್ದಾರೆ. ಲುಧಿಯಾನದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಪೊಲೀಸರನ್ನು ಬೆಂಬಲಿಸಿದ್ದಾರೆ ಮತ್ತು ಕೋವಿಡ್-19 ಸಮಯದಲ್ಲಿ ಪೊಲೀಸರ ಪಾತ್ರಕ್ಕಾಗಿ ಅವರನ್ನು ಹೊಗಳಿದ್ದಾರೆ.

ಇತ್ತೀಚೆಗೆ ಸುಲ್ತಾನ್‌ಪುರ್ ಲೋಧಿಯಲ್ಲಿ ನಡೆದ ರ್ಯಾಲಿಯಲ್ಲಿ ಹಾಲಿ ಶಾಸಕ ನವತೇಜ್ ಸಿಂಗ್ ಚೀಮಾ ಅವರನ್ನು ಹೊಗಳಿದ್ದ ನವಜೋತ್ ಸಿಂಗ್ ಸಿಧು, ನವತೇಜ್ ಸಿಂಗ್ ಚೀಮಾ ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದಾದ ಮೇಲೂ ಮತ್ತೆ ಅವಹೇಳನಕಾರಿ ಹೇಳಿಕೆಯನ್ನು ಮುಂದುವರೆಸಿದ್ದ ನವಜೋತ್ ಸಿಂಗ್ ಸಿಧು ಭಾನುವಾರ ಬಟಾಲಾದಲ್ಲಿ ನಡೆದ ರ್ಯಾಲಿಯಲ್ಲಿ ಅವರು ತಮ್ಮ ಪಕ್ಕದಲ್ಲಿ ನಿಂತಿದ್ದ ಸ್ಥಳೀಯ ನಾಯಕ ಅಶ್ವನಿ ಸೆಖ್ರಿಯನ್ನು ಹೊಗಳುತ್ತಾ ಇದೇ ಹೇಳಿಕೆ ನೀಡಿದ್ದರು.

ನವಜೋತ್ ಸಿಂಗ್ ಸಿಧು ಅವರ ಹೇಳಿಕೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ನನ್ನ ಹೇಳಿಕೆಯನ್ನು ಯಥಾರ್ಥವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದ್ದರು. ನಾನು ಕಾಂಗ್ರೆಸ್ ನಾಯಕರಿಗೆ ಅಂತಹ ಅಧಿಕಾರವಿದೆ ಎಂದು ಹೇಳಿದ್ದಷ್ಟೆ ಎಂದು ಹೇಳಿದ್ದರು.

ನವಜೋತ್ ಸಿಂಗ್ ಸಿಧು ಹೇಳಿಕೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

× Chat with us