ಮಂಡ್ಯ: ಸಾವಿರಾರು ಜನರ ಜಯಘೋಷಗಳ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ನಗರದ ಪ್ರವಾಸಿ ಮಂದಿರದಿಂದ ನಂದ ಟಾಕೀಸ್ವರೆಗೆ 1.8 ಕಿ.ಮೀ ರೋಡ್ ಶೋ ನಡೆಸಿದರು.
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನರು ಸಾಲುಗಟ್ಟಿ ನಿಂತಿದ್ದರು. ‘ಮೋದಿ ಮೋದಿ’ ಜಯಘೋಷ ಮೊಳಗಿಸಿದ ಜನ ಪ್ರಧಾನಿ ಮೇಲೆ ಹೂವಿನ ಮಳೆಗರೆದರು. ಶ್ವೇತವರ್ಣದ ಜುಬ್ಬಾ ಧರಿಸಿದ್ದ ನರೇಂದ್ರ ಮೋದಿ ಅವರು ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು, ತಮ್ಮ ಕಾರಿನ ಮೇಲೆ ಬಿದ್ದಿದ್ದ ಹೂವು ತೆಗೆದು ಜನರ ಮೇಲೆ ಎರಚಿ ಸಂಭ್ರಮಪಟ್ಟರು.
ಬೆಳಿಗ್ಗೆ 11.30ಕ್ಕೆ ಪ್ರಧಾನಿ ನಗರದ ಪಿಇಎಸ್ ಕಾಲೇಜು ಸ್ಟೇಡಿಯಂನಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ನಲ್ಲಿ ಬಂದಿಳಿದರು. ಬೆಳಿಗ್ಗೆ 11.40ಕ್ಕೆ ರೋಡ್ಶೋ ಆರಂಭಿಸಿದ ಅವರು 20 ನಮಿಷಗಳ ಕಾಲ1.8 ಕಿ.ಮೀ ಸಾಗಿದರು. ನಂತರ ಅವರು ಅಮರಾವತಿ ಹೋಟೆಲ್ ಬಳಿ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಪ್ರವೇಶಿಸಿದರು.
ತಾಲ್ಲೂಕಿನ ಹನಕೆರೆ ಬಳಿ ಹೆದ್ದಾರಿಯಲ್ಲಿ ಹಾಕಲಾಗಿದ್ದ ಕೆಂಪು ಹಾಸಿನ ಮೇಲೆ 50 ಮೀಟರ್ಗಳವರೆಗೆ ಸಂಚಾರ ಮಾಡಿದ ಪ್ರಧಾನಿ ದಶಪಥ ಕಾಮಗಾರಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ರಸ್ತೆಯ ಒಂದು ಬದಿಯಲ್ಲಿ ಪ್ರಧಾನಿ ಹೆಜ್ಜೆ ಹಾಕಿದರೆ ಇನ್ನೊಂದು ಬದಿಯಲ್ಲಿ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿದವು.
ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಜಾನಪದ ಕಲಾ ಪ್ರದರ್ಶನ ವೀಕ್ಷಿಸುತ್ತಾ ಪ್ರಧಾನಿ ಹೆದ್ದಾರಿಯಲ್ಲಿ ಸಂಚರಿಸಿದರು. ಕಲಾವಿದರಿಗೆ, ಸಾರ್ವಜನಿಕರಿಗೆ ಕೈಬೀಸಿ ಶುಭಾಶಯ ತಿಳಿಸಿದರು. ನಂತರ ಮಧ್ಯಾಹ್ನ 12.15ಕ್ಕೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿ ಬಳಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡರು.
ಪರದಾಡಿದ ವಿದ್ಯಾರ್ಥಿಗಳು: ಪ್ರಧಾನಿ ರೋಡ್ಶೋ ಅಂಗವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಎರಡೂ ಬದಿಗಳನ್ನು ಬ್ಯಾರಿಕೇಡ್ ಮೂಲಕ ಬಂಧಿಸಲಾಗಿತ್ತು. ಇದರಿಂದ ಹೆದ್ದಾರಿ ಬದಿಯ ಹಳೇ ಮುನಿಸಿಪಲ್ ಶಾಲೆಯಲ್ಲಿ ನಿಗದಿಯಾಗಿದ್ದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತೊಂದರೆಯಾಯಿತು. ಪರೀಕ್ಷಾ ಕೇಂದ್ರಕ್ಕೆ ತೆರಳಲು ಬಂದ ವಿದ್ಯಾರ್ಥಿಗಳು, ಪೋಷಕರು ಹೆದ್ದಾರಿಯಲ್ಲೇ ಸಿಲುಕಿದ್ದರು.
ಈ ಸಂದರ್ಭದಲ್ಲಿ ಪೋಷಕರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಬ್ಯಾರಿಕೇಡ್ ತೆರೆಯುವಂತೆ ಒತ್ತಾಯಿಸಿದರು. ನಂತರ ಜಿಲ್ಲಾ ಕ್ರೀಡಾಂಗಣದ ಬಳಿಯ ಬದಲಿ ಮಾರ್ಗದ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿದರು.
ರೈಲು ನಿಲ್ದಾಣ ಪ್ರವೇಶ ಮಾರ್ಗವನ್ನೂ ಬಂದ್ ಮಾಡಿದ್ದ ಕಾರಣ ರೈಲು ಇಳಿದು ಬಂದ ಪ್ರಯಾಣಿಕರು ಹೆದ್ದಾರಿಯಿಂದ ಮುಂದೆ ತೆರಳಲಾಗದೇ ಸಿಲುಕಿದ್ದರು. ರೋಡ್ ಶೋ ಮುಗಿದ ನಂತರ ಮಾರ್ಗ ತೆರವು ಮಾಡಲಾಯಿತು.