ನವದೆಹಲಿ: ಜುಲೈ ತಿಂಗಳ 18ನೇ ತಾರೀಖಿನಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಗೌಪ್ಯತೆಯನ್ನು ಕಾಪಾಡುವ ಮತ್ತು ಮತದಾರರ ಗುರುತು ಆಗುವ ಸಾಧ್ಯತೆಯನ್ನು ತಪ್ಪಿಸಲು ಮತದಾರರಿಗೆ ವಿಶೇಷ ಶಾಯಿಯ ಪೆನ್ ಒದಗಿಸಬೇಕೆಂದು ಚುನಾವಣಾ ಆಯೋಗ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರರಿಗೆ ನೇರಳೆ ಶಾಯಿಯುಳ್ಳ ವಿಶೇಷ ಪೆನ್ ಅನ್ನು ಅಗತ್ಯವಿರುವ ಸಂಖ್ಯೆಯಷ್ಟು ಒದಗಿಸಲಿದೆ. ಮತದಾರರು ಈ ಪೆನ್ ಬಳಸಿ ತಮ್ಮ ಮತ ಚಲಾಯಿಸಬೇಕು ಎಂದು ಸೂಚಿಸಲಾಗಿದೆ. ಇತರ ಯಾವುದೇ ರೀತಿಯ ಪೆನ್ ಬಳಸಿ ಮತಚಲಾವಣೆ ಮಾಡಿದ್ದಲ್ಲಿ ಅದು ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣಾ ನಿಯಮಗಳು 1974 ರ ಅನ್ವಯ ಅಸಿಂಧುಗೊಳ್ಳಲಿದೆ ಎಂದು ರಚಿಸಬೇಕಾದ ಕಾರ್ಯದರ್ಶಿಯವರು ಈ ಸಂಬಂಧ ವಿವಿಧ ರಾಜ್ಯಗಳ ಚುನಾವಣಾ ಅಧಿಕಾರಿಗಳು ಪತ್ರದಲ್ಲಿ ಮಾಹಿತಿ ತಿಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಉಭಯ ಸದನಗಳ ಸದಸ್ಯರು, ರಾಜ್ಯಗಳ ವಿಧಾನಸಭೆ ಹಾಗೂ ದೆಹಲಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಸದಸ್ಯರು ಮತದಾರರಿರುತ್ತಾರೆ.
ಚುನಾವಣೆ ಮುಕ್ತಾಯಗೊಂಡ ನಂತರ ಜುಲೈ 21 ರಂದು ಎಣಿಕೆ ಪ್ರಕ್ರಿಯೆ ನಡೆಯಲಿದೆ.